ಸಾರ್ವತ್ರಿಕ ಮುಷ್ಕರ ಎಲ್ಲರೂ ಬೆಂಬಲಿಸಿ

7
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕದ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ಮನವಿ

ಸಾರ್ವತ್ರಿಕ ಮುಷ್ಕರ ಎಲ್ಲರೂ ಬೆಂಬಲಿಸಿ

Published:
Updated:

ಚಿಕ್ಕಬಳ್ಳಾಪುರ: ‘ಕೇಂದ್ರ ಸರ್ಕಾರದ ರೈತ, ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ದೇಶದಾದ್ಯಂತ ಜನವರಿ 8 ಮತ್ತು 9 ರಂದು ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಸಾರ್ವತ್ರಿಕ ಮುಷ್ಕರವನ್ನು ಜಿಲ್ಲೆಯಲ್ಲಿ ಪ್ರತಿಯೊಬ್ಬರೂ ಬೆಂಬಲಿಸಬೇಕು’ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕದ ಸದಸ್ಯ ಎಂ.ಪಿ.ಮುನಿವೆಂಕಟಪ್ಪ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಐತಿಹಾಸಿಕ ಎರಡು ದಿನಗಳ ಮುಷ್ಕರಕ್ಕೆ ನಾವು ಬೆಂಬಲ ಕೊಟ್ಟು, ಜಿಲ್ಲೆಯ ಬಂದ್ ಆಚರಿಸುವ ತೀರ್ಮಾನ ತೆಗೆದುಕೊಂಡಿದ್ದೇವೆ. ರಸ್ತೆತಡೆ, ಪ್ರತಿಭಟನೆ, ಪಂಚಾಯಿತಿಗಳಿಗೆ ಮುತ್ತಿಗೆ ಹೀಗೆ ಎರಡು ದಿನ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಪ್ರತಿ ವರ್ಷ ರೈತರ ಸಂಖ್ಯೆ ಕಡಿಮೆಯಾಗಿ, ಕೃಷಿ ಕೂಲಿಕಾರರ ಸಂಖ್ಯೆ ಏರಿಕೆಯಾಗುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ ಸುಮಾರು 8 ಲಕ್ಷ ಕೂಲಿ ಕಾರ್ಮಿಕರು ಇದ್ದಾರೆ. ದುಡಿಯೊ ವರ್ಗದ ಪರವಾಗಿರುವ ಈ ಮುಷ್ಕರಕ್ಕೆ ಕಾರ್ಮಿಕರೆಲ್ಲರೂ ಸಂಘಟಿತರಾಗಿ ಬೆಂಬಲ ನೀಡಬೇಕು’ ಎಂದರು.

‘ಕೇಂದ್ರದ ಸರ್ಕಾರದ ಅವೈಜ್ಞಾನಿಕ ನೀತಿಗಳಿಂದ ದೇಶದಲ್ಲಿ ಎಲ್ಲ ರಂಗಗಳು ದಿವಾಳಿಯಾಗಿವೆ. ಉದ್ಯೋಗ ಸೃಷ್ಟಿಯಾಗದೆ ಯುವ ಜನರು ನಿರುದ್ಯೋಗಿಗಳಾಗುತ್ತಿದ್ದಾರೆ. ಕಾರ್ಪೊರೇಟ್‌ ಕಂಪೆನಿಗಳ ₹2.55 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಸಮಸ್ಯೆಯಿಂದ ಪಾರು ಮಾಡುವ ಯೋಜನೆಗಳನ್ನು ತರುತ್ತಿಲ್ಲ’ ಎಂದು ಆರೋಪಿಸಿದರು.

‘ಗ್ರಾಮೀಣ ಬಡವರಿಗೆ ಆಸರೆಯಾಗುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ. ಆದರೆ ಈ ಯೋಜನೆಗೆ ಕೇಂದ್ರ ಸರ್ಕಾರ ನೀಡುವ ಬದಲು ಕೈಬಿಡುವ ಚಿಂತನೆ ನಡೆಸಿದೆ. ಯೋಜನೆ ಅಡಿ ಕಾರ್ಮಿಕರಿಗೆ 100 ದಿನಗಳ ಕೆಲಸ ನೀಡುತ್ತಿಲ್ಲ. ಬದಲು 1.40 ಕೋಟಿ ಕುಟುಂಬಗಳಿಗೆ ಉದ್ಯೋಗ ನಿರಾಕರಿಸಲಾಗಿದೆ’ ಎಂದು ಆಪಾದಿಸಿದರು.

‘ವರ್ಷದಿಂದ ವರ್ಷಕ್ಕೆ ಕೇಂದ್ರ ನರೇಗಾ ಯೋಜನೆಗೆ ನೀಡುವ ಅನುದಾನ ಕಡಿತಗೊಳಿಸುತ್ತಿದೆ. ಕಾರ್ಮಿಕರಿಗೆ ಕನಿಷ್ಠ ₹600 ಕೂಲಿ ನೀಡಬೇಕು. ಆದರೆ ರಾಜ್ಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸೇರಿ ದಿನಕ್ಕೆ ₹249 ಕೂಲಿ ನೀಡುತ್ತಿವೆ. ಅಗತ್ಯ ವಸ್ತುಗಳು, ಆರೋಗ್ಯದ ವೆಚ್ಚಗಳು ದುಬಾರಿಯಾಗಿರುವ ಸಂದರ್ಭದಲ್ಲಿ ಈ ಕೂಲಿ ಏತಕ್ಕೂ ಸಾಲದು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಭೀಕರ ಬರಗಾಲ ಬಂದಿದೆ. ಆದರೂ ಪ್ರತಿ ಗ್ರಾಮದಲ್ಲಿ ನರೇಗಾ ಸಮರ್ಪಕವಾಗಿ ಜಾರಿ ಮಾಡುತ್ತಿಲ್ಲ. 2018–19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಕಾರ್ಮಿಕರಿಗೆ ಸರಾಸರಿ 44 ದಿನ ಕೆಲ ನೀಡಲಾಗಿದೆ. ಗ್ರಾಮ ಪಂಚಾಯಿತಿಗೆ ಫಾರ್ಮ್ 6 ಸಲ್ಲಿಸಿದ 15 ದಿನಗಳ ಒಳಗೆ ಕಾರ್ಮಿಕರಿಗೆ ಕೆಲಸ ನೀಡಬೇಕು. ಇಲ್ಲದಿದ್ದರೆ ನೀರುದ್ಯೋಗ ಭತ್ಯೆ ನೀಡಬೇಕು. ಅದನ್ನು ಸರಿಯಾಗಿ ಅನುಷ್ಠಾನಕ್ಕೆ ತರುತ್ತಿಲ್ಲ’ ಎಂದರು.

‘ನರೇಗಾ ಯೋಜನೆ ಅಡಿ ವಾರ್ಷಿಕ ಉದ್ಯೋಗದ ದಿನಗಳನ್ನು 200ಕ್ಕೆ ಏರಿಕೆ ಮಾಡಬೇಕು. ಕನಿಷ್ಠ ಕೂಲಿ ₹600 ನಿಗದಿಪಡಿಸಬೇಕು. ಗ್ರಾಮೀಣ ಕೃಷಿ ಕಾರ್ಮಿಕರ ಕಲ್ಯಾಣ ನಿಧಿ ಸ್ಥಾಪಿಸಬೇಕು. ಸರ್ಕಾರಗಳು ಕಾರ್ಮಿಕರ ಬದುಕಿಗೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕು’ ಎಂದು ಆಗ್ರಹಿಸಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕದ ಸಹಕಾರ್ಯದರ್ಶಿ ಕೆ.ನಾಗರಾಜು, ಸದಸ್ಯ ಆರ್.ರಾಮಪ್ಪ, ಮುಖಂಡ ನಾಗರಾಜ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !