ಆಹಾರ ಗುಣಮಟ್ಟ– ಭದ್ರತೆಗೆ ಆದ್ಯತೆ ನೀಡಿ

7
ಕಾರ್ಯಾಗಾರದಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮಂಜುನಾಥ್‌ ಕಟ್ಟುನಿಟ್ಟಿನ ಸೂಚನೆ

ಆಹಾರ ಗುಣಮಟ್ಟ– ಭದ್ರತೆಗೆ ಆದ್ಯತೆ ನೀಡಿ

Published:
Updated:
Prajavani

ಕೋಲಾರ: ‘ಜಿಲ್ಲೆಯ ಪ್ರತಿ ವಿದ್ಯಾರ್ಥಿನಿಲಯದಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆಹಾರದ ಗುಣಮಟ್ಟ ಮತ್ತು ಭದ್ರತೆಗೆ ಆದ್ಯತೆ ನೀಡಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಧಿಕಾರಿಗಳು ಹಾಗೂ ವಾರ್ಡನ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ವಸತಿನಿಲಯಗಳಲ್ಲಿ ಮಕ್ಕಳ ಸುರಕ್ಷತೆ ಮತ್ತು ರಕ್ಷಣಾ ನೀತಿ ಕುರಿತು ಇಲ್ಲಿ ಶುಕ್ರವಾರ ನಡೆದ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿ, ‘ಹಾಸ್ಟೆಲ್‌ಗಳಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ತಿಳಿಸಿದರು.

‘ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ, ಸ್ನಾನದ ಕೊಠಡಿ, ಕಾಂಪೌಂಡ್, ಸಿ.ಸಿ ಕ್ಯಾಮೆರಾ, ವಾರ್ಡನ್ ಸೇರಿದಂತೆ ಸಕಲ ಮೂಲಸೌಕರ್ಯ ಕಲ್ಪಿಸಬೇಕು. ಮಕ್ಕಳಿಗೆ ಹಾಸ್ಟೆಲ್‌ನಲ್ಲಿ ಯಾವುದೇ ತೊಂದರೆಯಿಲ್ಲ ಎಂಬ ಭಾವನೆ ಪೋಷಕರಲ್ಲಿ ಮೂಡಿ ಅವರು ನಿಶ್ಚಿಂತೆಯಿಂದ ಇರುವ ವಾತಾವರಣ ಸೃಷ್ಟಿಸಬೇಕು. ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿ ಹಾಸ್ಟೆಲ್‌ನಲ್ಲೂ ದೂರು ಪೆಟ್ಟಿಗೆ ಅಳವಡಿಸಬೇಕು’ ಎಂದು ಹೇಳಿದರು.

‘ಬಾಡಿಗೆ ಕಟ್ಟಡಗಳಲ್ಲಿರುವ ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಶೀಘ್ರವೇ ಜಾಗ ಗುರುತಿಸಿ. ಶಿಥಿಲಾವಸ್ಥೆಯಲ್ಲಿರುವ ಹಾಸ್ಟೆಲ್‌ ಕಟ್ಟಡಗಳ ಬಗ್ಗೆ ಎಂಜಿನಿಯರ್‌ಗಳ ನೆರವಿನಿಂದ ಮಾಹಿತಿ ಸಂಗ್ರಹಿಸಿ. ಅನಾಹುತ ಸಂಭವಿಸಿ ಮಕ್ಕಳ ಪ್ರಾಣ ಹೋದರೆ ಯಾರು ಹೊಣೆ? ಮುಳಬಾಗಿಲಿನ ಹಾಸ್ಟೆಲ್‌ನಲ್ಲಿ ಸಂಭವಿಸಿದ ದುರ್ಘಟನೆ ಮರುಕಳಿಸಬಾರದು’ ಎಂದರು.

ಕಾಮಗಾರಿ ಪೂರ್ಣಗೊಂಡಿಲ್ಲ: ‘ಮಾಲೂರು ತಾಲ್ಲೂಕಿನಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಸತಿ ಶಾಲೆ ಕಾಮಗಾರಿ ಆರಂಭವಾಗಿ 8 ವರ್ಷವಾಯಿತು. ಈವರೆಗೆ 5 ಜಿಲ್ಲಾಧಿಕಾರಿಗಳು ಹಾಗೂ 7 ಸಿಇಒಗಳು ಜಿಲ್ಲೆಗೆ ಬಂದು ವರ್ಗಾವಣೆಯಾಗಿ ಹೋಗಿದ್ದಾರೆ. ಆದರೆ, ಕಾಮಗಾರಿ ಪೂರ್ಣಗೊಂಡಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಯಶೋದಾ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಎಚ್.ಎಸ್.ಸಿಂಧು, ‘ಅದು ಮೆಟ್ರಿಕ್ ನಂತರದ ವಸತಿ ಶಾಲೆಯಾಗಿದೆ. ಕಾಮಗಾರಿಗೆ ಆರಂಭದಲ್ಲಿ ₹ 1 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಮೊದಲ ಮಹಡಿ ನಿರ್ಮಿಸಲಾಗಿದೆ. ₹ 80 ಲಕ್ಷ ಹೆಚ್ಚುವರಿ ಅನುದಾನ ಕೋರಿ ಪ್ರಸ್ತಾವ ಸಲ್ಲಿಸಲಾಗಿದ್ದು, ಅನುದಾನದ ಕೊರತೆಯ ಕಾರಣಕ್ಕೆ ಕಾಮಗಾರಿ ಸ್ಥಗಿತಗೊಂಡಿದೆ’ ಎಂದು ವಿವರಿಸಿದರು.

ಶೋಚನಿಯ ಸ್ಥಿತಿ: ‘ದಲಿತ ಸಂಘಟನೆಗಳ ಹೋರಾಟದ ಫಲವಾಗಿ ಹೋಬಳಿಗೆ ಒಂದರಂತೆ ಆರಂಭಗೊಂಡ ಹಾಸ್ಟೆಲ್‌ಗಳು ಅನೇಕ ಸಮಾಜ ಸುಧಾರಕರನ್ನು ನೀಡಿ ಇತಿಹಾಸ ಸೃಷ್ಟಿಸಿವೆ. ಇಂದು ಹಾಸ್ಟೆಲ್‌ಗಳು ಶೋಚನೀಯ ಸ್ಥಿತಿಗೆ ತಲುಪಿದ್ದು, ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ದುರಂತ’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೈ.ಮರಿಸ್ವಾಮಿ ವಿಷಾದಿಸಿದರು.

‘ಹಾಸ್ಟೆಲ್‌ಗಳಲ್ಲಿ ಮದ್ಯದ ಖಾಲಿ ಬಾಟಲಿಗಳು ರಾಶಿಯಾಗಿ ಬಿದ್ದಿವೆ. ಶೌಚಾಲಯ ಸೌಕರ್ಯವಿಲ್ಲದೆ ವಿದ್ಯಾರ್ಥಿಗಳು ನರಳುತ್ತಿದ್ದಾರೆ. ಹಿರಿಯ ವಿದ್ಯಾರ್ಥಿಗಳು ಕಿರಿಯ ಮಕ್ಕಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ’ ಎಂದು ದೂರಿದರು.

‘ವಿದ್ಯಾರ್ಥಿನಿಲಯಗಳಲ್ಲಿ ಮಕ್ಕಳ ರಕ್ಷಣೆ ಸಂಬಂಧ ಪ್ರತಿ ಇಲಾಖೆಯೂ ಮಾನದಂಡ ಇಟ್ಟುಕೊಂಡಿದ್ದರೂ ಪಾಲನೆ ಆಗದಿರುವುದು ನೋವಿನ ಸಂಗತಿ. ಬಹಳ ಹಾಸ್ಟೆಲ್‌ಗಳಲ್ಲಿ ವಾರ್ಡನ್‌ಗಳಿಲ್ಲ ಮತ್ತು ಭದ್ರತಾ ಸಿಬ್ಬಂದಿಯಿಲ್ಲ. ಮಕ್ಕಳ ಪಾಲನೆ, ಪೋಷಣೆ ಮತ್ತು ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೈಜೋಡಿಸಬೇಕು’ ಎಂದು ಸಲಹೆ ನೀಡಿದರು.

ಅಂತರಂಗದಲ್ಲಿ ಮೂಡಲಿ: ‘ಪೋಷಕರ ಸ್ಥಾನದಲ್ಲಿರುವ ವಾರ್ಡನ್‌ಗಳೇ ಮಕ್ಕಳ ರಕ್ಷಣೆ ಮಾಡದಿದ್ದರೆ ಇನ್ಯಾರು ರಕ್ಷಿಸುತ್ತಾರೆ? ಅಧಿಕಾರಿಗಳು ಆತ್ಮವಿಮರ್ಶೆ ಮಾಡಿಕೊಳ್ಳಿ. ಮಕ್ಕಳ ಸುರಕ್ಷತೆಯ ಜಾಗೃತಿ ಅಂತರಂಗದಲ್ಲಿ ಮೂಡಬೇಕು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುರಾಜ್ ಜಿ.ಶಿರೋಳ್ ಕಿವಿಮಾತು ಹೇಳಿದರು.

‘ಹಾಸ್ಟೆಲ್ ಅವ್ಯವಸ್ಥೆಗೆ ಒಬ್ಬರ ಮೇಲೊಬ್ಬರು ಕೆಸರು ಎರೆಚಿಕೊಳ್ಳುವ ಬದಲು ಎಲ್ಲರೂ ನ್ಯಾಯಯುತ, ಪ್ರಾಮಾಣಿಕ ಕೆಲಸ ಮಾಡಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿ’ ಎಂದು ಹೇಳಿದರು.

ಕ್ರಿಮಿನಲ್ ಪ್ರಕರಣ: ‘ಅಧಿಕಾರಿಗಳನ್ನು ಒತ್ತಾಯಪೂರ್ವಕವಾಗಿ ಕೆಲಸಕ್ಕೆ ಸೇರಿಸಿಕೊಂಡಿಲ್ಲ. ನೀವೇ ಇಷ್ಟಪಟ್ಟು ಕೆಲಸಕ್ಕೆ ಬಂದಿದ್ದೀರಿ. ಮಾಡಬಾರದ್ದನ್ನು ಮಾಡಿ ಮಕ್ಕಳಿಗೆ ಅನ್ಯಾಯ ಎಸಗಿದರೆ ಸುಮ್ಮನಿರುವುದಿಲ್ಲ. ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ’ ಎಂದು ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಖಡಕ್‌ ಎಚ್ಚರಿಕೆ ನೀಡಿದರು.

‘ಮಕ್ಕಳ ರಕ್ಷಣೆಗಾಗಿ ಹಾಸ್ಟೆಲ್‌ಗಳು ಇವೆಯೇ ಹೊರತು ನಿಮಗೆ ಸಂಬಳ ಕೊಡುವುದಕ್ಕಲ್ಲ. ಜಿಲ್ಲೆಯ 82 ಹಾಸ್ಟೆಲ್‌ಗಳಲ್ಲಿ ವಾರ್ಡನ್‌ ಹುದ್ದೆ ಖಾಲಿ ಇವೆ. ಹೀಗಾಗಿ ಅಡುಗೆ ಸಿಬ್ಬಂದಿ ಹೆಚ್ಚುವರಿಯಾಗಿ ವಾರ್ಡ್‌ನ ಹುದ್ದೆಯ ಜವಾಬ್ದಾರಿ ನೀಡಲಾಗಿದೆ. ಎಚ್ಚೆತ್ತುಕೊಂಡು ಕೆಲಸ ಮಾಡಿ’ ಎಂದು ಸೂಚಿಸಿದರು.

ವಸತಿನಿಲಯಗಳಲ್ಲಿ ಸುರಕ್ಷತೆ ಮತ್ತು ರಕ್ಷಣಾ ನೀತಿ ಕುರಿತು ಯೂನಿಸೆಫ್ ಮಕ್ಕಳ ರಕ್ಷಣಾ ಯೋಜನೆ ಸಂಯೋಜಕ ಕೆ.ರಾಘವೇಂದ್ರಭಟ್ ವಿಷಯ ಮಂಡಿಸಿದರು. ಜಿ.ಪಂ ಅಧ್ಯಕ್ಷೆ ಗೀತಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷೆ ರೂಪಶ್ರೀ, ಕೆಜಿಎಫ್‌ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಚೌಡಪ್ಪ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !