ರೈತರು ಸಹಕರಿಸಿ: ಜಿಲ್ಲಾಧಿಕಾರಿ ಮನವಿ

7
ಕೆ.ಸಿ ವ್ಯಾಲಿ ಯೋಜನೆ: ಕೃಷಿ ಜಮೀನಿನಲ್ಲಿ ವಿದ್ಯುತ್ ಗೋಪುರ– ಪೈಪ್‌ಲೈನ್‌ ನಿರ್ಮಾಣ

ರೈತರು ಸಹಕರಿಸಿ: ಜಿಲ್ಲಾಧಿಕಾರಿ ಮನವಿ

Published:
Updated:
Prajavani

ಕೋಲಾರ: ‘ಕೆ.ಸಿ ವ್ಯಾಲಿ ಯೋಜನೆಯಡಿ ವಿವಿಧ ಹಂತದಲ್ಲಿ ನೀರು ಹರಿಸಬೇಕಿರುವುದರಿಂದ ಕೃಷಿ ಜಮೀನಿನಲ್ಲಿ ವಿದ್ಯುತ್ ಗೋಪುರ ಮತ್ತು ಪೈಪ್‌ಲೈನ್‌ ಕಾರಿಡಾರ್‌ ನಿರ್ಮಾಣಕ್ಕೆ ರೈತರು ಸಹಕರಿಸಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮನವಿ ಮಾಡಿದರು.

ತಾಲ್ಲೂಕಿನ ಸುಗಟೂರಿನಿಂದ ಜನ್ನಘಟ್ಟ ಕೆರೆ ಅಂಗಳದಲ್ಲಿನ ಪಂಪ್‌ಹೌಸ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂಬಂಧ ಆ ಭಾಗದ ರೈತರೊಂದಿಗೆ ಇಲ್ಲಿ ಶುಕ್ರವಾರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು.

‘ಕೆ.ಸಿ ವ್ಯಾಲಿ ಯೋಜನೆ ನಾಲ್ಕನೇ ಹಂತ-ದಲ್ಲಿ ಮಾಲೂರು ತಾಲ್ಲೂಕಿನ ಶಿವಾರಪಟ್ಟಣದಲ್ಲಿ 5.7 ಕಿ.ಮೀ ಅಂತರದಲ್ಲಿ 25 ಟವರ್, ಐದನೇ ಹಂತದಲ್ಲಿ ಹೊಳಲಿಯಲ್ಲಿ 5.6 ಕಿ.ಮೀ ವ್ಯಾಪ್ತಿಯಲ್ಲಿ 25 ಟವರ್ ಮತ್ತು ಜನ್ನಘಟ್ಟದಲ್ಲಿ 3.8 ಕಿಮೀ ವ್ಯಾಪ್ತಿಯಲ್ಲಿ 66 ಕೆ.ವಿ ಸಾಮರ್ಥ್ಯದ ವಿದ್ಯುತ್ ತಂತಿ ಎಳೆಯಲು 26 ಟವರ್ ನಿರ್ಮಿಸಬೇಕಿದೆ’ ಎಂದು ಜಿಲ್ಲಾಧಿಕಾರಿ ವಿವರಿಸಿದರು.

‘ಜೀವನಕ್ಕೆ ಅಲ್ಪಸ್ವಲ್ಪ ಜಮೀನಿದೆ. ಕೆಪಿಟಿಸಿಎಲ್ ಅಧಿಕಾರಿಗಳು ಟವರ್ ನಿರ್ಮಿಸುವ ಜಾಗವನ್ನು ಸರಿಯಾಗಿ ತೋರಿಸುತ್ತಿಲ್ಲ, ಜಮೀನಿನ ಮಧ್ಯೆ ಟವರ್ ಮತ್ತು ಕಾರಿಡಾರ್‌ ನಿರ್ಮಿಸಿದರೆ ಜೀವನ ನಿರ್ವಹಣೆಗೆ ಸಮಸ್ಯೆಯಾಗುತ್ತದೆ. ಸರ್ಕಾರಿ ಜಮೀನು ಇರುವೆಡೆ ಟವರ್ ನಿರ್ಮಿಸಿ’ ಎಂದು ರೈತರಾದ ಚಿಕ್ಕಮುನಿಯಪ್ಪ, ನಾರಾಯಣಸ್ವಾಮಿ ಮತ್ತು ಅಪ್ಪಿರೆಡ್ಡಿ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ವೈಯಕ್ತಿಕ ಹಿತಾಸಕ್ತಿಗಿಂತ ಸಾರ್ವಜನಿಕ ಹಿತಾಸಕ್ತಿ ಮುಖ್ಯ. ಸುಪ್ರೀಂ ಕೋರ್ಟ್‌ಗೆ ಹೋದರೂ ನಿಮ್ಮ ಪರವಾಗಿ ಆದೇಶ ಬರುವುದಿಲ್ಲ. ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳುವ ಉದ್ದೇಶದಿಂದ ರೈತರೊಂದಿಗೆ 3 ಬಾರಿ ಸಭೆ ನಡೆಸುತ್ತಿದ್ದೇನೆ. ನೀರು ಬಂದರೆ ನಿಮಗೂ ಒಳ್ಳೆಯದಾಗುತ್ತದೆ. ಯೋಜನೆ ಅನುಷ್ಠಾನಕ್ಕೆ ಸಹಕರಿಸಿ’ ಎಂದು ಕೋರಿದರು.

‘ಸಾಧ್ಯವಾದಷ್ಟು ಸರ್ಕಾರಿ ಜಾಗದಲ್ಲಿ ಮತ್ತು ರೈತರಿಗೆ ತೊಂದರೆಯಾಗದಂತೆ ಜಮೀನಿನ ಬದಿಯಲ್ಲಿ ಟವರ್ ನಿರ್ಮಿಸಲಾಗುವುದು’ ಎಂದು ಮನವರಿಕೆ ಮಾಡಿಕೊಟ್ಟರು. ಆಗ ಕೆಲ ರೈತರು, ‘ಜಮೀನು ಕೊಡುವುದಿಲ್ಲ. ಸರ್ಕಾರಿ ಜಾಗದಲ್ಲಿ ಮಾಡಿಕೊಳ್ಳಿ’ ಎಂದು ಹೇಳಿದರು.

ಬುದ್ಧಿ ಕಲಿಯಿರಿ: ‘ನಮ್ಮ ಜಮೀನಿನಲ್ಲಿ ಟವರ್ ನಿರ್ಮಿಸಿ’ ಎಂದು ಹೇಳಿದ ರೈತರಾದ ಈಶ್ವರಪ್ಪ ಮತ್ತು ಮೋಹನ್ ಸ್ವಯಂಪ್ರೇರಿತರಾಗಿ ಜಮೀನು ಬಿಟ್ಟುಕೊಡಲು ಸಹಮತ ವ್ಯಕ್ತಪಡಿಸಿದರು. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ‘ಈಶ್ವರಪ್ಪ ಮತ್ತು ಮೋಹನ್‌ ಅವರನ್ನು ನೋಡಿ ಬುದ್ಧಿ ಕಲಿಯಿರಿ’ ಎಂದು ಇತರ ರೈತರಿಗೆ ಕಿವಿಮಾತು ಹೇಳಿದರು.

‘ವಿದ್ಯುತ್‌ ಗೋಪುರ ನಿರ್ಮಾಣಕ್ಕೆ 17ರಿಂದ 37 ಚದರ ಅಡಿ ಜಾಗ ಬೇಕು. ಗೋಪುರಗಳಿಗೆ ಖಾಸಗಿಯವರ ಜಮೀನು ಸ್ವಾಧೀನಪಡಿಸಿಕೊಳ್ಳುವುದಿಲ್ಲ. ತೀರಾ ಅನಿವಾರ್ಯ ಸಂದರ್ಭದಲ್ಲಿ ಭೂಸ್ವಾಧೀನ ಮಾಡಿದರೆ ಉಪ ನೋಂದಣಾಧಿಕಾರಿ ಕಚೇರಿ ನಿಗದಿಪಡಿಸಿರುವ ದರಕ್ಕಿಂತ 4 ಪಟ್ಟು ಭೂಪರಿಹಾರ ನೀಡಲಾಗುವುದು. ಈ ಸಂಬಂಧ ರೈತರೊಂದಿಗೆ ಚರ್ಚಿಸಿ ಸಮಿತಿಯಲ್ಲಿ ದರ ನಿಗದಿಪಡಿಸಲಾಗಿದೆ’ ಎಂದರು.

‘ಜನ್ನಘಟ್ಟದ ಕೆಲ ರೈತರು ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಟವರ್ ಮತ್ತು ಕಾರಿಡಾರ್ ಮಾರ್ಗ ಬದಲಿಸಿದ್ದು, 24ರ ಬದಲು 26 ಟವರ್ ನಿರ್ಮಿಸಬೇಕಿದೆ’ ಎಂದು ಮಾಹಿತಿ ನೀಡಿದರು.

ಜಿಪಿಎಸ್ ಸರ್ವೆ: ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ‘ಕೇಂದ್ರ ಸರ್ಕಾರದ ನಿರ್ದೇಶನ ಮೇರೆಗೆ ಕೆಜಿಎಫ್‌ನ ಬಿಜಿಎಂಎಲ್‌ನ 12 ಸಾವಿರ ಎಕರೆ ಪ್ರದೇಶವನ್ನು ಜಿಪಿಎಸ್ ಮೂಲಕ ಸರ್ವೆ ಮಾಡಲಾಗುತ್ತಿದೆ. ಒಂದು ತಿಂಗಳೊಳಗೆ ಸರ್ವೆ ಪೂರ್ಣಗೊಳ್ಳಲಿದೆ. ಬಿಜಿಎಂಎಲ್ ಪ್ರದೇಶದ ನಿರ್ವಹಣೆಗೆ ಸ್ಥಳೀಯ ನಗರಸಭೆಗೆ ಪಾವತಿಸಬೇಕಿದ್ದ ವಾರ್ಷಿಕ ₹ 16 ಲಕ್ಷವನ್ನು ಎರಡು ವರ್ಷ ಪಾವತಿಸಿದೆ. ಆಸ್ತಿ ತೆರಿಗೆ ಬಾಕಿಯಿದೆ’ ಎಂದರು.

‘ಜಿಲ್ಲೆಯ ಸಹಕಾರ ಸಂಘಗಳಲ್ಲಿನ 1,400 ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ 32 ಸಾವಿರ ರೈತರ ಬೆಳೆ ಸಾಲ ಮನ್ನಾ ಪ್ರಕ್ರಿಯೆ ಪ್ರಗತಿಯಲ್ಲಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವ ರೈತರು ಬ್ಯಾಂಕ್‌ಗಳಿಗೆ ದಾಖಲೆಪತ್ರ ಒದಗಿಸಬೇಕು. ನಾಡ ಕಚೇರಿಯಲ್ಲೂ ದಾಖಲೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಸಾಲ ಮನ್ನಾದ ₹ 8 ಕೋಟಿ ರೈತರ ಖಾತೆಗೆ ಜಮಾ ಆಗಿದೆ’ ಎಂದು ಹೇಳಿದರು.

ಉಪ ವಿಭಾಗಾಧಿಕಾರಿ ಕೆ.ಶುಭಾ ಕಲ್ಯಾಣ್, ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಎಂಜಿನಿಯರ್ ಶುಭಾ, ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಎಂಜೀನಿಯರ್ ಟಿ.ಜಿ.ತಿಮ್ಮೇಗೌಡ, ಜಿ.ಪಂ ಮಾಜಿ ಅಧ್ಯಕ್ಷ ವೆಂಕಟಮುನಿಯಪ್ಪ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !