ಶಾಸಕರ ಮನೆಗೆ ಮುತ್ತಿಗೆ: ಧರಣಿ

7
ಸರ್ಕಾರಿ ಕಚೇರಿಗಳಲ್ಲಿ ರೈತರ ಮೇಲೆ ಶೋಷಣೆ: ರೈತ ಸಂಘ ಸದಸ್ಯರ ಆರೋಪ

ಶಾಸಕರ ಮನೆಗೆ ಮುತ್ತಿಗೆ: ಧರಣಿ

Published:
Updated:
Prajavani

ಕೋಲಾರ: ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ರೈತರ ಮೇಲೆ ಶೋಷಣೆಯಾಗುತ್ತಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಶುಕ್ರವಾರ ಶಾಸಕ ಕೆ.ಶ್ರೀನಿವಾಸಗೌಡರ ನಿವಾಸಕ್ಕೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.

‘ಕಂದಾಯ ಹಾಗೂ ಸರ್ವೆ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸರ್ಕಾರಿ ಮತ್ತು ಗುತ್ತಿಗೆ ಸರ್ವೆಯರ್‌ಗಳು ಲಂಚಕ್ಕಾಗಿ ರೈತರನ್ನು ಶೋಷಿಸುತ್ತಿದ್ದಾರೆ. ಲಂಚ ಕೊಡದಿದ್ದರೆ ಸರ್ವೆಯರ್‌ಗಳು ಸರ್ವೆ ಕಾರ್ಯ ಮಾಡಲು ಹಿಂದೇಟು ಹಾಕುತ್ತಾರೆ. ಇದರಿಂದ ರೈತರು ಸರ್ಕಾರಿ ಕಚೇರಿಗಳಿಗೆ ಅಲೆಯುವಂತಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜನಪ್ರತಿನಿಧಿಗಳು ಭ್ರಷ್ಟ ಅಧಿಕಾರಿಗಳಿಗೆ ಕಡಿವಾಣ ಹಾಕುವುದು ಬಿಟ್ಟು ಅವರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ. ತಾಲ್ಲೂಕು ಕಚೇರಿ ಅಧಿಕಾರಿಗಳು, ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಸರ್ವೆಯರ್‌ಗಳ ಜತೆ ಶಾಮೀಲಾಗಿ ಲಂಚದ ದಂಧೆ ನಡೆಸುತ್ತಿದ್ದಾರೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.

‘ಪೋಡಿ ಅದಾಲತ್‌ ಹಣ ಮಾಡುವ ದಂಧೆಯಾಗಿದೆ. ಅಧಿಕಾರಿಗಳು ಬಡವರಿಗೆ ಸಿಗಬೇಕಾದ ಸವಲತ್ತುಗಳನ್ನು ಮಾರಾಟ ಮಾಡುವ ಸಂಚು ರೂಪಿಸಿದ್ದಾರೆ. ಲಂಚ ಕೊಡದ ರೈತರ ಜಮೀನಿನ ಕಡತಗಳನ್ನೇ ಅಧಿಕಾರಿಗಳು ನಾಪತ್ತೆ ಮಾಡುತ್ತಾರೆ. ದಾಖಲೆಪತ್ರಗಳಲ್ಲಿ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನಮೂದಿಸಿ ರೈತರಿಗೆ ತೊಂದರೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಭ್ರಷ್ಟಾಚಾರದ ಪಿತಾಮಹರು: ‘ಅಧಿಕಾರಿಗಳು ಸರ್ವೆ ಮತ್ತು ಕಂದಾಯ ಇಲಾಖೆಯನ್ನು ಸಂಪೂರ್ಣ ಭೂಗಳ್ಳರ ಆಸ್ತಿಯಾಗಿ ಮಾಡಲು ಹೊರಟಿದ್ದಾರೆ. ಭೂ ದಾಖಲೆಗಳ ಉಪ ನಿರ್ದೇಶಕರ (ಡಿಡಿಎಲ್‌ಆರ್‌) ಗೋಪಾಲಯ್ಯ ಹಾಗೂ ಕಚೇರಿ ಗುಮಾಸ್ತ ಸುರೇಶ್‌ ಭ್ರಷ್ಟಾಚಾರದ ಪಿತಾಮಹರು’ ಎಂದು ಧರಣಿನಿರತರು ಕಿಡಿಕಾರಿದರು.

‘ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಭ್ರಷ್ಟ ಸರ್ವೆಯರ್‌ಗಳನ್ನು ಅಮಾನತು ಮಾಡಬೇಕು. ಡಿಡಿಎಲ್ಆರ್‌ ಗೋಪಾಲಯ್ಯ ಹಾಗೂ ಗುಮಾಸ್ತ ಸುರೇಶ್‌ರನ್ನು ಅಮಾನತು ಮಾಡಬೇಕು. ಅವರ ಅಕ್ರಮಗಳ ಬಗ್ಗೆ ಉನ್ನತ ತನಿಖೆ ನಡೆಸಬೇಕು. ದರಖಾಸ್ತು ಕಡತಗಳ ದುರಸ್ತಿ ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳಿಸಬೇಕು. ರೈತರ ಮನೆ ಬಾಗಿಲಿಗೆ ಜಮೀನಿನ ದಾಖಲೆಪತ್ರ ತಲುಪಿಸಬೇಕು’ ಎಂದು ಒತ್ತಾಯಿಸಿದರು.

ವ್ಯವಸ್ಥೆ ಸರಿಪಡಿಸುತ್ತೇನೆ: ಧರಣಿನಿರತರನ್ನು ಭೇಟಿಯಾದ ಶಾಸಕ ಶ್ರೀನಿವಾಸಗೌಡ, ‘ಜಡ್ಡುಗಟ್ಟಿರುವ ಆಡಳಿತ ವ್ಯವಸ್ಥೆಯನ್ನು ಸರಿಪಡಿಸುತ್ತೇನೆ. ರೈತರನ್ನು ಸರ್ಕಾರಿ ಕಚೇರಿಗೆ ಅಲೆಸದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡುತ್ತೇನೆ. ಭೂ ಅಕ್ರಮಗಳ ಬಗ್ಗೆ ತನಿಖೆ ಮಾಡಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ, ಸದಸ್ಯರಾದ ಆಂಜಪ್ಪ, ಹರೀಶ್, ಚಂದ್ರಪ್ಪ, ಕೃಷ್ಣೇಗೌಡ, ಮಂಜು, ನಾಗರಾಜ, ಮುರುಗೇಶ್‌, ನಟರಾಜ್, ಕಿರಣ್, ಅನಿಲ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !