ನೇಮಕಾತಿ ಅಕ್ರಮ: ಪೊರಕೆ ಚಳವಳಿ

7

ನೇಮಕಾತಿ ಅಕ್ರಮ: ಪೊರಕೆ ಚಳವಳಿ

Published:
Updated:
Prajavani

ಕೋಲಾರ: ಜಿಲ್ಲೆಯ ಕೆಜಿಎಫ್‌ ನಗರಸಭೆಯ ಪೌರ ಕಾರ್ಮಿಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ರಾಜ್ಯ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಸದಸ್ಯರು ಇಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪೊರಕೆ ಚಳವಳಿ ನಡೆಸಿದರು.

‘ಕೆಜಿಎಫ್‌ ನಗರಸಭೆ ಅಧಿಕಾರಿಗಳು ಸರ್ಕಾರದ ನಿಯಮಾವಳಿ ಗಾಳಿಗೆ ತೂರಿ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಂಡಿದ್ದಾರೆ. ಇದರಿಂದ ಅರ್ಹರಿಗೆ ಅನ್ಯಾಯವಾಗಿದೆ’ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

‘68 ಪೌರ ಕಾರ್ಮಿಕರು ಸುಮಾರು 10 ವರ್ಷದಿಂದ ಕೆಜಿಎಫ್‌ ನಗರಸಭೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ರಾಜ್ಯ ಸರ್ಕಾರ ಗುತ್ತಿಗೆ ಪದ್ಧತಿ ರದ್ಧುಪಡಿಸಿ, ಎಲ್ಲಾ ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂ ನೌಕರರಾಗಿ ನೇಮಿಸಿಕೊಳ್ಳಲು ವಿಶೇಷ ನೇಮಕಾತಿ ನಿಯಮಾವಳಿ ರೂಪಿಸಿತು. ಆದರೆ, ಅಧಿಕಾರಿಗಳು ಈ ನಿಯಮಾವಳಿ ಉಲ್ಲಂಘಿಸಿದ್ದಾರೆ’ ಎಂದು ಸಮಿತಿಯ ರಾಜ್ಯ ಘಟಕದ ಸಂಘಟನಾ ಸಂಚಾಲಕಿ ಎಂ.ಪದ್ಮಾ ದೂರಿದರು.

‘ವಿಶೇಷ ನೇಮಕಾತಿ ನಿಯಮಾವಳಿ ಅನುಷ್ಠಾನದಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಅಧಿಕಾರಿಗಳು ನೇರ ನೇಮಕಾತಿ ನೇರ ಪಾವತಿಯೆಂಬ ಅವೈಜ್ಞಾನಿಕ ಕ್ರಮ ಅನುಸರಿಸಿ ಗುತ್ತಿಗೆ ಪೌರ ಕಾರ್ಮಿಕರನ್ನು ವಂಚಿಸಿದ್ದಾರೆ. ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಹ ಪೌರ ಕಾರ್ಮಿಕರನ್ನು ಕೈಬಿಟ್ಟಿದ್ದಾರೆ’ ಎಂದು ಆರೋಪಿಸಿದರು.

ವರ್ಗೀಕರಣ ಕೈಬಿಡಿ: ‘ಸರ್ಕಾರದ ವಿಶೇಷ ನೇಮಕಾತಿ ನಿಯಮಾವಳಿ ಅನ್ವಯ ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂ ನೌಕರರಾಗಿ ನೇಮಿಸಿಕೊಳ್ಳಬೇಕು. ನೇರ ನೇಮಕ ಮತ್ತು ನೇರ ಪಾವತಿ ಹಾಗೂ ಗುತ್ತಿಗೆ ಪೌರ ಕಾರ್ಮಿಕರ ಮೀಸಲಾತಿ ವರ್ಗೀಕರಣ ಕೈಬಿಡಬೇಕು. ಹಾಲಿ ಗುತ್ತಿಗೆ ಪೌರ ಕಾರ್ಮಿಕರನ್ನು ಏಕಕಾಲಕ್ಕೆ ನೇರ ನೇಮಕಾತಿ ಮಾಡಿಕೊಳ್ಳಬೇಕು. ಜಿಲ್ಲಾಧಿಕಾರಿ ಆದೇಶದಂತೆ ಪೌರ ಕಾರ್ಮಿಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು’ ಎಂದು ಸದಸ್ಯರು ಒತ್ತಾಯಿಸಿದರು.

ಸಮಿತಿ ಸದಸ್ಯರಾದ ಮಾಲಾ, ಸುಜಾತಾ, ಜಯಂತಿ, ಕಾಂತರಾಜ್, ರಘುರಾಮ್‌, ಪ್ರಭು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !