ಸಮ್ಮೇಳನದಲ್ಲಿ ಸಂಘಟಕರಿಂದ ಅವಮಾನ: ಪಟ್ಟಣಶೆಟ್ಟಿ ದಂಪತಿ ಅಸಮಾಧಾನ

7

ಸಮ್ಮೇಳನದಲ್ಲಿ ಸಂಘಟಕರಿಂದ ಅವಮಾನ: ಪಟ್ಟಣಶೆಟ್ಟಿ ದಂಪತಿ ಅಸಮಾಧಾನ

Published:
Updated:

ಧಾರವಾಡ: ಸಾಹಿತ್ಯ ಸಮ್ಮೇಳನದ ಸಂಘಟಕರು ತಮಗೆ ವಾಹನ ಮತ್ತು ಪಾಸ್‌ ಕಳಿಸುವುದಾಗಿ ಭರವಸೆ ನೀಡಿ, ನಂತರ ಅವಮಾನ ಮಾಡಿದ್ದಾರೆ ಎಂದು ಹಿರಿಯ ಸಾಹಿತಿಗಳಾದ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಮತ್ತು ಹೇಮಾ ಪಟ್ಟಣಶೆಟ್ಟಿ ದಂಪತಿ ಸಮ್ಮೇಳನದ ಪ್ರಧಾನ ವೇದಿಕೆಯ ಬಳಿಯೇ ಅಸಮಾಧಾನ ಹೊರಹಾಕಿದ ಘಟನೆ ನಡೆಯಿತು.

ಪಟ್ಟಣಶೆಟ್ಟಿ ದಂಪತಿ ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಅವರ ಕಾರಿನಲ್ಲಿ ಶುಕ್ರವಾರ ಬೆಳಿಗ್ಗೆ 10.30ರ ಸುಮಾರಿಗೆ ಸಮ್ಮೇಳನ ಸ್ಥಳಕ್ಕೆ ಬಂದರು. ಆದರೆ, ಅವರ ಬಳಿ ಅತಿಗಣ್ಯರ ಪಾಸ್‌ ಇಲ್ಲದ ಕಾರಣ ಒಳಕ್ಕೆ ಬಿಡಲು ಪೊಲೀಸರು ನಿರಾಕರಿಸಿದರು. ನಂತರ ವಸುಂಧರಾ ಅವರು ಪರಿಚಯ ಹೇಳಿ ಒಳಕ್ಕೆ ಕರೆದುಕೊಂಡು ಹೋದರು.

ಪುನಃ ಹೊರಗಡೆ ಬಂದು ಹೋಗುವುದಕ್ಕೂ ಕಷ್ಟವಾಯಿತು. ಮಧ್ಯಾಹ್ನ 2 ಗಂಟೆಯಾದರೂ ಊಟ, ನೀರು ಸೇರಿದಂತೆ ಯಾವುದೇ ವ್ಯವಸ್ಥೆ ಇರಲಿಲ್ಲ. ಕೊನೆಗೆ ಬೇಸತ್ತ ಅವರು ಸಭಾಂಗಣದಿಂದ ಹೊರಬಂದು ಮನೆಗೆ ಮರಳಲು ಸಜ್ಜಾಗಿದ್ದರು. ಅಷ್ಟರಲ್ಲಿ ಎದುರಾದ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ವಿಷಯ ಅರಿತು ಪಟ್ಟಣಶೆಟ್ಟಿ ದಂಪತಿಯನ್ನು ಸಭಾಂಗಣದ ಒಳಕ್ಕೆ ಕರೆದೊಯ್ದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಿದ್ಧಲಿಂಗ ಪಟ್ಟಣಶೆಟ್ಟಿ, ‘ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆಯಲ್ಲೂ ನಾನು ಅತಿಥಿಯಾಗಿ ಪಾಲ್ಗೊಂಡಿದ್ದೆ. ಮನೆಗೆ ಕಾರು ಕಳುಹಿಸುವುದಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಲಿಂಗರಾಜ ಅಂಗಡಿ ತಿಳಿಸಿದ್ದರು. ಪಾಸ್‌ ಕೂಡ ತಲುಪಿಸುವ ಭರವಸೆ ನೀಡಿದ್ದರು. ಬೆಳಿಗ್ಗೆ 8.30ಕ್ಕೆ ಸಿದ್ಧರಾಗಿ ಕುಳಿತಿದ್ದೆವು. 10.30ರವರೆಗೂ ವಾಹನ ಬರಲಿಲ್ಲ. ವಸುಂಧರಾ ಅವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದೆ. ಅವರು ಕಾರು ಕಳುಹಿಸಿದರು’ ಎಂದರು.

‘ಅಲ್ಲಿ ಹೋದಾಗ ಪೊಲೀಸರು ಒಳಕ್ಕೆ ಬಿಡಲಿಲ್ಲ. ಮಧ್ಯಾಹ್ನ ಹಸಿವಾಯಿತು. ಮೂತ್ರ ವಿಸರ್ಜನೆಗೆ ಹೋಗಬೇಕಾಯಿತು. ಯಾರೊಬ್ಬರೂ ನಮ್ಮನ್ನು ಕೇಳಲಿಲ್ಲ. ಬೇಸತ್ತು ಹೊರಬಂದೆವು. ಬಸ್‌ನಲ್ಲಿ ಮನೆಗೆ ಹೊರಟಿದ್ದೆವು. ಅಷ್ಟರಲ್ಲಿ ಮನು ಬಳಿಗಾರ್ ಬಂದು ವಾಪಸ್‌ ಕರೆದುಕೊಂಡು ಹೋದರು. ಜಿಲ್ಲಾಧಿಕಾರಿ ದೀಪಾ ಚೋಳನ್‌ ಅವರಿಗಾಗಿ ತಂದಿದ್ದ ಊಟವನ್ನು ನಮ್ಮೊಂದಿಗೆ ಹಂಚಿಕೊಂಡರು’ ಎಂದು ಹೇಳಿದರು.

‘ಏಕೆ ಹೀಗಾಯಿತು ಎಂಬುದು ಗೊತ್ತಿಲ್ಲ. ಲಿಂಗರಾಜ ಅಂಗಡಿ ವಾಹನ ಮತ್ತು ಪಾಸ್ ವ್ಯವಸ್ಥೆ ಮಾಡಿದ್ದಾಗಿ ತಿಳಿಸಿದರು. ಚಂದ್ರಶೇಖರ ಕಂಬಾರ ಮತ್ತು ಚಂದ್ರಶೇಖರ ಪಾಟೀಲ ಇಬ್ಬರೂ ಸಹಪಾಠಿಗಳು. ಅವರ ಮೇಲಿನ ಪ್ರೀತಿಯಿಂದ ಅಲ್ಲಿಗೆ ಹೋಗಿದ್ದು. ಕಹಿ ಅನುಭವ ಆಗಿದ್ದರಿಂದ ಬೇಸರವಾಯಿತು‘ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !