ಬಿವಿವಿ ಸಂಘಕ್ಕೆ ಅನ್ನದಾನ ಸ್ವಾಮೀಜಿ ಆಯ್ಕೆಗೆ ಖಂಡನೆ

7

ಬಿವಿವಿ ಸಂಘಕ್ಕೆ ಅನ್ನದಾನ ಸ್ವಾಮೀಜಿ ಆಯ್ಕೆಗೆ ಖಂಡನೆ

Published:
Updated:

ಜಮಖಂಡಿ: ಬಾದಾಮಿಯ ಮದ್ವೀರಶೈವ ಶಿವಯೋಗ ಮಂದಿರ ಅಧ್ಯಕ್ಷ ಅಭಿನವ ಅನ್ನದಾನ ಸ್ವಾಮೀಜಿ ಅವರನ್ನು ಬಾಗಲಕೋಟೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ (ಬಿ.ವಿ.ವಿ)ದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದನ್ನು ಜಮಖಂಡಿ ಬಸವ ಕೇಂದ್ರ ಖಂಡಿಸುತ್ತದೆ ಎಂದು ಅಧ್ಯಕ್ಷ ರವಿ ಯಡಹಳ್ಳಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಿವಿವಿ ಸಂಘದ ಅಧ್ಯಕ್ಷರಾಗಿದ್ದ ಇಳಕಲ್‌ನ ಡಾ.ಮಹಾಂತಪ್ಪ ಸ್ವಾಮೀಜಿ ಲಿಂಗೈಕ್ಯರಾದ ಬಳಿಕ ತೆರವಾದ ಸ್ಥಾನಕ್ಕೆ ಅನ್ನದಾನ ಸ್ವಾಮೀಜಿ ಅವರನ್ನು ಆಯ್ಕೆ ಮಾಡುವ ಮೂಲಕ ಹಿಟ್ಲರ್‌ನಂತೆ ಸರ್ವಾಧಿಕಾರಿ ಧೋರಣೆ ಹೊಂದಿರುವ ಬಾಗಲಕೋಟೆ ಶಾಸಕ, ಬಿವಿವಿ ಸಂಘದ ಚೇರಮನ್ ವೀರಣ್ಣ ಚರಂತಿಮಠ ಸಂಘವನ್ನು ತಮ್ಮ ಸ್ವಂತ ಆಸ್ತಿ ಮಾಡಿಕೊಂಡಿರುವುದು ಖಂಡನೀಯ ಎಂದರು.

ಬೀಳೂರ ಗುರುಬಸವ ಸ್ವಾಮೀಜಿ ಅವರ ನೇತೃತ್ವದಲ್ಲಿ ಸದ್ಭಕ್ತರು ಹಾಗೂ ಸರ್ವರ ತನು, ಮನ, ಧನದಿಂದ ಸ್ಥಾಪಿತವಾಗಿರುವ ಸಂಘಕ್ಕೆ ದುರುದ್ದೇಶ ಮತ್ತು ಸೇಡಿನ ಮನೋಭಾವದಿಂದ ಅನ್ನದಾನ ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಗಿದೆ. ಅನ್ನದಾನ ಸ್ವಾಮೀಜಿ ಸಮಾನತೆ ತತ್ವದ ವಿರೋಧಿಗಳಾಗಿದ್ದಾರೆ. ಅಲ್ಲದೇ ಅವರು ಬಿವಿವಿ ಸಂಘಕ್ಕೆ ಸಂಬಂಧವಿಲ್ಲ. ಆದಾಗ್ಯೂ, ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಂಡು ತಮಗೆ ವೈಯಕ್ತಿಕವಾಗಿ ಅನುಕೂಲ ಮಾಡಿಕೊಂಡಿರುವುದು ಈ ಆಯ್ಕೆಯಲ್ಲಿ ದುರುದ್ದೇಶ ಇರುವುದು ಸ್ಪಷ್ಟವಾಗುತ್ತದೆ. ಡಾ.ಮಹಾಂತಪ್ಪ ಸ್ವಾಮೀಜಿ ಅವರ ಜೀವಿತಾವಧಿಯಲ್ಲಿ ಅವರಿಗೆ ವೀರಣ್ಣ ಚರಂತಿಮಠ ಯಾವುದೇ ರೀತಿಯ ಬೆಲೆ ಅಥವಾ ಗೌರವ ನೀಡುತ್ತಿರಲಿಲ್ಲ. ಅವರಿಗೆ ಸಾಕಷ್ಟು ಮಾನಸಿಕ ಹಿಂಸೆ ನೀಡಿದ್ದರು. ಅವರನ್ನು ಏಕವಚನದಲ್ಲಿ ಸಂಬೋಧಿಸುತ್ತಿದ್ದರು ಎಂದು ದೂರಿದರು.

ಡಾ.ಮಹಾಂತಪ್ಪ ಸ್ವಾಮೀಜಿ ಉವರ ಉತ್ತರಾಧಿಕಾರಿ ಆಗಿರುವ ಇಳಕಲ್ ಶ್ರೀವಿಜಯ ಮಹಾಂತೇಶ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ಅವರನ್ನು ಬಿವಿವಿ ಸಂಘದ ಅಧ್ಯಕ್ಷರನ್ನಾಗಿ ಮಾಡಬೇಕಿತ್ತು. ಇಲ್ಲವೇ ಸಂಘದ ಉಪಾಧ್ಯಕ್ಷರಾಗಿರುವ ಬಾಗಲಕೋಟೆಯ ಚರಂತಿಮಠದ ಪ್ರಭು ಸ್ವಾಮೀಜಿ ಅಥವಾ ನಿಡಸೋಸಿಯ ಶಿವಲಿಂಗೇಶ್ವರ ಸ್ವಾಮೀಜಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕಿತ್ತು. ಅನ್ನದಾನ ಸ್ವಾಮೀಜಿ ಅವರ ಆಯ್ಕೆ ವಿರುದ್ಧ ಸಂಘದ ಸರ್ವಸದಸ್ಯರು ದನಿ ಎತ್ತಬೇಕು. ಕೂಡಲೇ ಸಂಘದ ವಿಶೇಷ ಸರ್ವಸಾಧಾರಣ ಸಭೆ ಕರೆದು ಅನ್ನದಾನ ಸ್ವಾಮೀಜಿ ಅವರನ್ನು ಗೌರವಾಧ್ಯಕ್ಷರನ್ನಾಗಿ ಉಳಿಸಿಕೊಂಡು ಗುರುಮಹಾಂತ ಸ್ವಾಮೀಜಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು.

‘ವೀರಶೈವ’ ಪದವನ್ನು ಬಿವಿವಿ ಸಂಘದ ಹೆಸರಿಗೆ ಸೇರಿಸುವ ಮೂಲಕ ವೀರಣ್ಣ ಚರಂತಿಮಠ ತಮ್ಮ ಮನಸಿನ ಆಸೆಯನ್ನು ಸಂಘಕ್ಕೆ ಸೇರಿಸಿದ್ದಾರೆ. ಸಂಘದ ಚೇರಮನ್ ಆಗಲು ಕಾರಣರಾಗಿದ್ದ ಡಾ.ಮಹಾಂತಪ್ಪ ಸ್ವಾಮೀಜಿ ಅವರನ್ನು ಮರೆತಿರುವ ವೀರಣ್ಣ ಚರಂತಿಮಠ ಅವರನ್ನು ಚೇರಮನ್ ಹುದ್ದೆಯಿಂದ ಕೆಳಗಿಳಿಸಬೇಕು ಎಂದು ಒತ್ತಾಯಿಸಿದರು.

ವೀರಣ್ಣ ಚರಂತಿಮಠ ಅವರ ಸರ್ವಾಧಿಕಾರಿ ಧೋರಣೆ ಇದೇ ರೀತಿ ಮುಂದುವರಿದರೆ ಮುಂಬರುವ ದಿನಗಳಲ್ಲಿ ಬಸವ ಕೇಂದ್ರಗಳು ಹಾಗೂ ಡಾ.ಮಹಾಂತಪ್ಪ ಸ್ವಾಮೀಜಿ ಅವರ ಅಭಿಮಾನಿಗಳು ರಾಜ್ಯದಾದ್ಯಂತ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಸವ ಕೇಂದ್ರದ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಅಂಗಡಿ, ಉಪಾಧ್ಯಕ್ಷ ಆರ್.ಕೆ. ಜಕ್ಕಪ್ಪನವರ, ಸಿದ್ದಪ್ಪ ಗಲಗಲಿ, ರಮೇಶ ವಾಜಂತ್ರಿ, ಮಲ್ಲಪ್ಪ ಆನದಿನ್ನಿ, ಮುತ್ತಣ್ಣ ಕಪ್ಪರದ, ವಸಂತ ಸುದ್ದಿಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !