ಹಿರಿಯರನ್ನು ಗೌರವಿಸುವ ಸಂಸ್ಕಾರ ಕಲಿಯಿರಿ

7
ಹಿರಿಯ ನಾಗರಿಕರಿಗೆ ಕಾನೂನು ಅರಿವು ನೆರವು ಹಾಗೂ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ನ್ಯಾಯಾಧೀಶ ಎಸ್.ಎಚ್.ಕೋರಡ್ಡಿ ಸಲಹೆ

ಹಿರಿಯರನ್ನು ಗೌರವಿಸುವ ಸಂಸ್ಕಾರ ಕಲಿಯಿರಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ಸಮಾಜದ ಅಮೂಲ್ಯ ಆಸ್ತಿಯಾದ ಹಿರಿಯ ನಾಗರಿಕರನ್ನು ಗೌರವದಿಂದ ನಡೆಸಿಕೊಳ್ಳುವು, ಪೂಜ್ಯ ಭಾವದಿಂದ ಕಾಣುವುದು ನಮ್ಮೆಲ್ಲರ ಕರ್ತವ್ಯವಾಗಬೇಕು’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಎಚ್.ಕೋರಡ್ಡಿ ಹೇಳಿದರು.

ನಗರದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ಕಂದಾಯ ಇಲಾಖೆ, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ , ಜಿಲ್ಲಾ ಹಿರಿಯ ನಾಗರಿಕರ ವೇದಿಕೆ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಹಿರಿಯ ನಾಗರಿಕರಿಗೆ ಕಾನೂನು ಅರಿವು ನೆರವು ಹಾಗೂ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇತ್ತೀಚಿನ ದಿನಗಳಲ್ಲಿ ಯುವಜನರು ಮಾನವೀಯ ಮೌಲ್ಯಗಳು ಮರೆತು ಹಿರಿಯರನ್ನು ಕಡೆಣಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ತಂದೆ–-ತಾಯಿಗೆ ನಾವು ಯಾವ ರೀತಿಯಲ್ಲಿ ಆರೈಕೆ, ಗೌರವ, ಪ್ರೀತಿ ನೀಡುತ್ತೇವೋ ಅದೇ ರೀತಿ ನಮ್ಮ ಮಕ್ಕಳು ನಮ್ಮನ್ನು ನೋಡಿ ಕಲಿತುಕೊಳ್ಳುತ್ತಾರೆ. ಅದಕ್ಕಾಗಿ ಆದರೂ ಹಿರಿಯರನ್ನು ಪ್ರೀತಿ, ಗೌರವದಿಂದ ಕಾಣಬೇಕು’ ಎಂದು ತಿಳಿಸಿದರು.

‘ಇವತ್ತು ಸಮಾಜದಲ್ಲಿ ವಿದ್ಯಾವಂತರು, ಬುದ್ದಿಜೀವಿಗಳು, ಶ್ರೀಮಂತರ ಮಕ್ಕಳೇ ಹೆಚ್ಚಾಗಿ ತಮ್ಮ ತಂದೆ–ತಾಯಿಯನ್ನು ವೃದ್ದಾಶ್ರಮಗಳಲ್ಲಿ ಬಿಟ್ಟು ಹೋಗುತ್ತಿರುವುದು ದುರಂತದ ಸಂಗತಿ. ದೇಶದ ಪ್ರಗತಿಯ ಸಂಕೇತವಾಗಿರುವ ಹಿರಿಯರ ಅನುಭವ ಮುಂದಿನ ಪೀಳಿಗೆಯ ಭವಿಷ್ಯ ರೂಪಿಸಲು ಬಳಕೆಯಾಗಬೇಕಿದೆ. ಹಿರಿಯರ ಮಾರ್ಗದರ್ಶನದಲ್ಲಿ ನಾವು ನಡೆದಾಗ ಜೀವನದಲ್ಲಿ ಗುರಿ ಮುಟ್ಟಲು, ಯಶಸ್ಸು ಗಳಿಸಲು ಸಾಧ್ಯ. ಆದ್ದರಿಂದ ಅವರನ್ನು ಪ್ರತಿಯೊಬ್ಬರೂ ಗೌರವಿಸಬೇಕಿದೆ’ ಎಂದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರವಿಶಂಕರ್ ಮಾತನಾಡಿ, ‘ಇತ್ತೀಚೆಗೆ ನಮ್ಮಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿರುವುದು ಕಳವಳದ ವಿಚಾರ. ಹಿರಿಯರ ಅನು­ಭವ­ಗಳು ಇಂದಿನ ಮಕ್ಕಳಿಗೆ ಅಗತ್ಯವಿದೆ. ಯುವಜನರು ವಿದ್ಯಾರ್ಥಿ ಜೀವನದಲ್ಲಿ ಕನಿಷ್ಠ ಮೌಲ್ಯಗಳನ್ನಾದರೂ ಅಳವಡಿಸಿಕೊಳ್ಳಬೇಕಿದೆ’ ಎಂದು ಹೇಳಿದರು.

‘ನಿವೃತ್ತ ಜೀವನ ನಡೆಸುವವರು ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳುವ ಬದಲು ನಿಯಮಿತವಾಗಿ ವ್ಯಾಯಾಮ, ವಾಯುವಿಹಾರ ಮಾಡುವ ಜತೆಗೆ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಸೋಮಾರಿತನ ತೊಡೆದು ಸದಾ ಕ್ರಿಯಾಶೀಲವಾಗಿರಲು ಪ್ರಯತ್ನಿಸಬೇಕು’ ಎಂದು ತಿಳಿಸಿದರು.

‘ಜಿಲ್ಲಾ ಆಸ್ಪತ್ರೆಯಲ್ಲಿ ಕೆಲವೇ ದಿನಗಳಲ್ಲಿ ಹಿರಿಯ ನಾಗರಿಕರ ಪ್ರತ್ಯೇಕ ವಿಭಾಗ ಕಾರ್ಯಾರಂಭ ಮಾಡಲಿದೆ. ಹಿರಿಯ ನಾಗರಿಕರು ಸರ್ಕಾರದ ವಿವಿಧ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಜೀವನದ ಸಂಧ್ಯಾಕಾಲದಲ್ಲಿ ಅನಗತ್ಯ ವಿಚಾರಗಳಿಗೆ ತಲೆ ಕೆಡಿಸಿಕೊಂಡು ಮಾನಸಿಕ ಕ್ಷೋಭೆಗೆ ಒಳಗಾಗದೆ, ನಿರುತ್ಸಾಹಗೊಳ್ಳದೆ ನಿಶ್ಚಿಂತೆ ಲವಲವಿಕೆಯಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು’ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಚ್.ದೇವರಾಜ್, ಮುಖಂಡ ಯಲುವಹಳ್ಳಿ ರಮೇಶ್‌, ಹಿರಿಯ ನಾಗರಿಕರ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣಪ್ಪ, ವಕೀಲ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್.ತಮ್ಮೇಗೌಡ, ಉಪಾಧ್ಯಕ್ಷ ಕೆ.ವಿ.ಬಾಲಾಜಿ, ಜಂಟಿ ಕಾರ್ಯದರ್ಶಿ ನರಸಿಂಹಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ ವಿನೋದ್ ಕುಮಾರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !