7ಕ್ಕೆ ಶ್ರೀರಾಮಾಯಣ ದರ್ಶನಂ ನಾಟಕ ಪ್ರದರ್ಶನ

7

7ಕ್ಕೆ ಶ್ರೀರಾಮಾಯಣ ದರ್ಶನಂ ನಾಟಕ ಪ್ರದರ್ಶನ

Published:
Updated:

ಕೋಲಾರ: ‘ಕುವೆಂಪು ರಚನೆಯ ಶ್ರೀರಾಮಯಣ ದರ್ಶನಂ ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಸಂದ 50 ವರ್ಷಗಳ ಸವಿ ನೆನಪಿಗಾಗಿ ನಗರದಲ್ಲಿ ಜ.7ರಂದು ಶ್ರೀರಾಮಾಯಣ ದರ್ಶನಂ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ’ ಎಂದು ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ತಿಳಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಶ್ರೀರಾಮಾಯಣದರ್ಶನಂ ಮಹಾಕಾವ್ಯದಿಂದಲೇ ಕುವೆಂಪು ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿತು. ಮೈಸೂರಿನ ರಂಗಾಯಣವು ಪ್ರತಿ ಜಿಲ್ಲೆಯಲ್ಲೂ ಪ್ರವಾಸ ಹಮ್ಮಿಕೊಂಡು ಈ ನಾಟಕ ಪ್ರದರ್ಶಿಸುತ್ತಿದೆ’ ಎಂದರು.

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಪಿಯುಸಿ ಕನ್ನಡ ಉಪನ್ಯಾಸಕರ ವೇದಿಕೆಯ ಪ್ರದರ್ಶನಕ್ಕೆ ಸಹಕಾರ ನೀಡಲಿವೆ. ನಾಟಕ ಪ್ರದರ್ಶನದ ಪಟ್ಟಿಯಲ್ಲಿ ಕೋಲಾರವನ್ನು ಕೈಬಿಡಲಾಗಿತ್ತು. ಬಳಿಕ ಸೇರ್ಪಡೆ ಮಾಡಿಕೊಂಡಿರುವುದು ಸಂತಸದ ವಿಷಯ’ ಎಂದು ಹೇಳಿದರು.

‘ಟಿ.ಚನ್ನಯ್ಯ ರಂಗಮಂದಿರದಲ್ಲಿ ಸಂಜೆ 4 ಗಂಟೆಯಿಂದ ರಾತ್ರಿ 9ರವರೆಗೆ ಪ್ರದರ್ಶನ ನಡೆಯಲಿದ್ದು, ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನಾಟಕ ವೀಕ್ಷಿಸಬೇಕು. ನಾಟಕದಲ್ಲಿ 45 ಕಲಾವಿದರು ಪಾಲ್ಗೊಳ್ಳುತ್ತಿದ್ದು, ಈ ಪೈಕಿ ಶೇ 60ರಷ್ಟು ಮಂದಿ ರಂಗಾಯಣ ಕಲಾವಿದರಾಗಿದ್ದಾರೆ. ಶ್ರೀರಾಮಾಯಣ ದರ್ಶನಂ ಕುವೆಂಪು ಅವರ ವಿಶೇಷ ಕೃತಿಯಾಗಿದ್ದು, ಮಹಿಳೆಯೊಬ್ಬರು ಮುಖ್ಯ ಪಾತ್ರ ನಿರ್ವಹಿಸುತ್ತಾರೆ’ ಎಂದು ವಿವರಿಸಿದರು.

ಟಿಕೆಟ್‌ ಮಾರಾಟ: ‘ಈಗಾಗಲೇ ನಾಟಕ ಪ್ರದರ್ಶನದ 250 ಟಿಕೆಟ್‌ ಮಾರಾಟವಾಗಿವೆ. ರಂಗಾಯಣವು ವಾಣಿಜ್ಯ ಉದ್ದೇಶಕ್ಕೆ ಈ ನಾಟಕ ಪ್ರದರ್ಶನ ನೀಡುತ್ತಿಲ್ಲ. ಗೌರವಕ್ಕಾಗಿ ಟಿಕೆಟ್‌ಗೆ ಬೆಲೆ ನಿಗದಿಪಡಿಸಲಾಗಿದ್ದು, ಟಿಕೆಟ್‌ ದರ ₹ 50 ಇದೆ’ ಎಂದು ಮಾಹಿತಿ ನೀಡಿದರು.

‘ಚನ್ನಯ್ಯ ರಂಗಮಂದಿರದಲ್ಲಿ ಧ್ವನಿವರ್ಧಕ, ವಿದ್ಯುತ್ ದೀಪದ ಅವ್ಯವಸ್ಥೆ ಇರುವುದು ನಿಜ. ಅಂತೆಯೇ ಆಸನಗಳು ಹಾಳಾಗಿವೆ. ಕಾರ್ಯಕ್ರಮಕ್ಕೆ ಬರುವ ಪ್ರೇಕ್ಷಕರು ಜವಾಬ್ದಾರಿ ಅರಿತು ರಂಗಮಂದಿರ ಹಾಳಾಗದಂತೆ ನೋಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಜಿಲ್ಲಾ ಪಿಯುಸಿ ಕನ್ನಡ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಜೆ.ಜಿ.ನಾಗರಾಜ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !