ಕೋಲಾರ: 11ಕ್ಕೆ ಫೋನ್‌ ಇನ್‌ ಕಾರ್ಯಕ್ರಮ

7
ಜನರ ಸಮಸ್ಯೆಗೆ ಸ್ಪಂದಿಸುವ ಉದ್ದೇಶ: ಜಿ.ಪಂ ಸಿಇಒ ಜಗದೀಶ್‌ ಹೇಳಿಕೆ

ಕೋಲಾರ: 11ಕ್ಕೆ ಫೋನ್‌ ಇನ್‌ ಕಾರ್ಯಕ್ರಮ

Published:
Updated:
Prajavani

ಕೋಲಾರ: ‘ಜನರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ನಡಿಗೆ ಜನರ ಮನೆ ಬಾಗಿಲಿಗೆ ಆಂದೋಲನದಡಿ ಜ.11ರಿಂದ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಾರ್ವಜನಿಕರು ಮನೆಯಲ್ಲೇ ಕುಳಿತು ದೂರವಾಣಿ ಕರೆ ಮಾಡಿ ತಮ್ಮ ಅಹವಾಲು ಹೇಳಿದರೆ ಅಧಿಕಾರಿಗಳು ಗುರುತು ಮಾಡಿಕೊಂಡು ಅವರ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಬಗೆಹರಿಸುತ್ತಾರೆ’ ಎಂದರು.

‘ಗ್ರೂಪ್ ಟಾಕ್‌ ಆ್ಯಪ್ ಬಳಸಿಕೊಂಡು ಜಿಲ್ಲೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ ಜನಪ್ರತಿನಿಧಿಗಳ ಜತೆ ತ್ವರಿತ ಸಂಪರ್ಕ ಸಾಧಿಸಬಹುದು. ಗ್ರೂಪ್‌ ಟಾಕ್‌ ವ್ಯವಸ್ಥೆಯನ್ನು ಜಿ.ಪಂನಲ್ಲಿ ಅಳವಡಿಸಲಾಗಿದ್ದು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಜತೆ ಏಕಕಾಲಕ್ಕೆ ಇಂಟರ್‌ನೆಟ್‌ ಮೂಲಕ ಸಂಭಾಷಣೆ ನಡೆಸುವುದರಿಂದ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಜ.11ರಂದು ಬೆಳಿಗ್ಗೆ 9ರಿಂದ 11 ಗಂಟೆವರೆಗೆ ಫೋನ್‌ ಇನ್‌ ಕಾರ್ಯಕ್ರಮ ನಡೆಯಲಿದ್ದು, ಎಲ್ಲಾ ಇಲಾಖೆ ಅಧಿಕಾರಿಗಳು ಹಾಜರಿರುತ್ತಾರೆ. ಜನರ ಸಮಸ್ಯೆ ಆಲಿಸಿ 10 ದಿನದೊಳಗೆ ಪರಿಹಾರ ಕಲ್ಪಿಸಿ ವರದಿ ನೀಡುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ಕೋಲಾರ ದೂರವಾಣಿ ಸಂಖ್ಯೆ 08152 240640, ಬಂಗಾರಪೇಟೆ 08152 240641, ಮಾಲೂರು 08152 240642, ಮುಳಬಾಗಿಲು 08152 240643 ಹಾಗೂ ಶ್ರೀನಿವಾಸಪುರ 08152 240644ಕ್ಕೆ ಕರೆ ಮಾಡಿ ಅಹವಾಲು ತಿಳಿಸಬಹುದು’ ಎಂದು ಹೇಳಿದರು.

ಮಾನವ ದಿನ ಸೃಜನೆ: ‘ನರೇಗಾ ಯೋಜನೆಯಡಿ ರೇಷ್ಮೆ ಬೆಳೆಗಾರರಿಗೆ 3 ವರ್ಷಕ್ಕೆ ₹ 2.50 ಲಕ್ಷ ನೀಡಲು ಅವಕಾಶವಿದೆ. ವಸತಿ ಯೋಜನೆ ಅನ್ವಯ 90 ದಿನಗಳಿಗೆ ₹ 22,410 ನೀಡಲಾಗುವುದು. ನರೇಗಾ ಅಡಿ ಜಿಲ್ಲೆಗೆ 25.88 ಲಕ್ಷ ಮಾನವ ದಿನ ಸೃಜನೆಯ ಗುರಿ ನಿಗದಿಪಡಿಸಲಾಗಿತ್ತು. ಈಗಾಗಲೇ 26.97 ಲಕ್ಷ ಮಾನವ ದಿನ ಸೃಜಿಸಿ ವಿವಿಧ ಕಾಮಗಾರಿಗೆ ಸುಮಾರು ₹ 112 ಕೋಟಿ ಖರ್ಚು ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಮಾರ್ಚ್ ಅಂತ್ಯದೊಳಗೆ 45 ಲಕ್ಷ ಮಾನವ ದಿನ ಸೃಜಿಸುವ ಗುರಿಯಿದೆ. ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ 50 ಸಾವಿರ ಮಾನವ ದಿನ ಸೃಜಿಸುವಂತೆ ಆದೇಶ ನೀಡಲಾಗಿದೆ’ ಎಂದು ವಿವರಿಸಿದರು.

ಕುಂದು ಕೊರತೆ ಸಭೆ: ‘ಜಿ.ಪಂ ಅಧ್ಯಕ್ಷರ ನೇತೃತ್ವದಲ್ಲಿ ಆಯಾ ತಾಲ್ಲೂಕಿನ ಸಾರ್ವಜನಿಕರೊಂದಿಗೆ ಮತ್ತು ಜನಪ್ರತಿನಿಧಿಗಳೊಂದಿಗೆ ಸಾರ್ವಜನಿಕರ ಕುಂದು ಕೊರತೆ ನಿವಾರಣೆ ಸಭೆ ನಡೆಸಲು ಉದ್ದೇಶಿಸಲಾಗಿದೆ. ಜ.17ರಂದು ಕೋಲಾರದಲ್ಲಿ, ಜ.19ಕ್ಕೆ ಮಾಲೂರು, ಜ.21ಕ್ಕೆ ಬಂಗಾರಪೇಟೆ, ಜ.24ಕ್ಕೆ ಮುಳಬಾಗಿಲು ಹಾಗೂ ಜ.29ಕ್ಕೆ ಶ್ರೀನಿವಾಸಪುರದಲ್ಲಿ ಬೆಳಿಗ್ಗೆ 11 ಗಂಟೆಗೆ ಸಭೆ ನಡೆಸಲಾಗುವುದು. ಸಭೆಯ ಸ್ಥಳದ ಬಗ್ಗೆ ಸದ್ಯದಲ್ಲೇ ಮಾಹಿತಿ ನೀಡುತ್ತೇವೆ’ ಎಂದು ತಿಳಿಸಿದರು.

ಜಿ.ಪಂ ಅಧ್ಯಕ್ಷೆ ಗೀತಮ್ಮ, ಉಪಾಧ್ಯಕ್ಷೆ ಯಶೋದಾ, ಯೋಜನಾ ನಿರ್ದೇಶಕ ರವಿಚಂದ್ರನ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !