ವಿದ್ಯಾರ್ಥಿಗಳಿಗೆ ಶಾಸಕಾಂಗದ ಅರಿವು ಮೂಡಿಸಿ

7
ಜಿಲ್ಲಾ ಮಟ್ಟದ ಯುವ ಅಣಕು ಸಂಸತ್ ಸ್ಪರ್ಧೆ, ಶಿಕ್ಷಕರಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ. ಮಂಜುನಾಥ್ ಸಲಹೆ

ವಿದ್ಯಾರ್ಥಿಗಳಿಗೆ ಶಾಸಕಾಂಗದ ಅರಿವು ಮೂಡಿಸಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ವಿದ್ಯಾರ್ಥಿಗಳಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪ್ರಜ್ಞೆ ಜಾಗೃತಗೊಳ್ಳಬೇಕಾದರೆ ಶಿಕ್ಷಕರು ಮುಖ್ಯವಾಗಿ ಅವರಿಗೆ ಶಾಸಕಾಂಗ, ಸಂಸತ್ತಿನ ಪರಿಕಲ್ಪನೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ. ಮಂಜುನಾಥ್ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವ ಅಣಕು ಸಂಸತ್ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದಿನ ಮಕ್ಕಳು ದೇಶದ ಭವಿಷ್ಯದ ನಾಯಕರಾಗಿ ರೂಪುಗೊಳ್ಳಬೇಕಾದರೆ, ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದು ಅತ್ಯವಶ್ಯಕ. ಹಾಗಾಗಿ, ಪ್ರತಿ ವಿದ್ಯಾರ್ಥಿಗೆ ಪ್ರಜಾಪ್ರಭುತ್ವದ ಬಗ್ಗೆ ಅರಿವು ಅಗತ್ಯ. ವಿದ್ಯಾರ್ಥಿಗಳು ಕೇವಲ ಎಂಜಿನಿಯರ್, ವೈದ್ಯರು ಆಗಬೇಕು ಎನ್ನುವ ಬದಲು ಉತ್ತಮ ರಾಜಕಾರಣಿಗಳು ಆಗಬಹುದು’ ಎಂದು ಅಭಿಪ್ರಾಯಪಟ್ಟರು.

‘ದೇಶ ಅಭಿವೃದ್ಧಿಯಾಗಬೇಕು ಹಾಗೂ ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ವಿದ್ಯಾರ್ಥಿಗಳು ಉತ್ತಮ ರಾಜಕಾರಣಿಯಾಗಲು ಮುಂದಾಗಬೇಕು. ಸೇವಾ ಮನೋಭಾವ ಇರುವವರು ರಾಜಕೀಯ ಪ್ರವೇಶಿಸಿದರೆ, ಉತ್ತಮ ಸಮಾಜ ನಿರ್ಮಾಣವಾಗುತ್ತದೆ’ ಎಂದು ತಿಳಿಸಿದರು. ಇದೇ ವೇಳೆ ಅಧ್ಯಕ್ಷರು ವಿದ್ಯಾರ್ಥಿಗಳಿಗೆ ಚುಕ್ಕೆ ಗುರುತಿನ ಪ್ರಶ್ನೆ, ಚುಕ್ಕೆ ಗುರುತಿಲ್ಲದ ಪ್ರಶ್ನೆ ಹೀಗೆ ಹಲವು ನಿಯಮಗಳ ಕುರಿತು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಸಂಸತ್ ಅಂದರೇನು? ವಿಧಾನಮಂಡಲ ಮತ್ತು ಸಂಸತ್ತಿನ ಕಲಾಪಗಳು ಹೇಗೆ ನಡೆಯುತ್ತವೆ ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು. ಸಮಾಜದಲ್ಲಿರುವ ಸಮಸ್ಯೆಗಳ ಕುರಿತು ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಸಚಿವರುಗಳು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಗಮನಿಸಬೇಕು’ ಎಂದು ಹೇಳಿದರು.

‘ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರು ಯಾವ ರೀತಿ ಪ್ರಶ್ನೆಗಳನ್ನು ಕೇಳಬಹುದು. ಕಲಾಪಗಳಲ್ಲಿ ಮಾತನಾಡಬೇಕಾದರೆ ಬಳಸಬೇಕಾದ ಭಾಷೆ, ಸಭಾಧ್ಯಕ್ಷರಿಗೆ ಯಾವ ರೀತಿ ಗೌರವ ಸೂಚಿಸಬೇಕು. ಹೀಗೆ ಹಲವು ಸಂಸತ್ತಿನ ಕಲಾಪಗಳ ನಿಯಮಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಸಂಸತ್ತಿನಲ್ಲಿ ವೈಯಕ್ತಿಕವಾಗಿ ಯಾವುದೇ ಚರ್ಚೆ ಮಾಡುವುದಿಲ್ಲ. ಸೌಜನ್ಯ ಮತ್ತು ತಾಳ್ಮೆಯಿಂದ ಪ್ರಶ್ನೆಗಳನ್ನು ಕೇಳಲಾಗುತ್ತದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ ಮಾತನಾಡಿ, ‘ವಿದ್ಯಾರ್ಥಿಗಳು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಯುವ ಸಂಸತ್ ಸ್ಪರ್ಧೆ ಸಹಕಾರಿ. ಸಾರ್ವಜನಿಕ ಶಿಕ್ಷಣ ಇಲಾಖೆ ಇಂತಹ ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಸಂಸದೀಯ ವ್ಯವಹಾರಗಳ ಕುರಿತು ಹೆಚ್ಚು ಅರಿತುಕೊಂಡಾಗ ಸಮಾಜದಲ್ಲಿ ತಮ್ಮ ಮೇಲೆ ಇರುವ ಹೊಣೆಗಾರಿಕೆಯನ್ನು ನಿಭಾಯಿಸಬಲ್ಲರು’ ಎಂದು ಹೇಳಿದರು.

ಜಿಲ್ಲೆಯ ಆರು ತಾಲ್ಲೂಕುಗಳಿಂದ ಆಯ್ಕೆಯಾದ 60 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳೇ ನಡೆಸಿಕೊಟ್ಟ ಅಣಕು ಸಂಸತ್ ಗಮನ ಸೆಳೆಯಿತು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಣ್ಣ ರೆಡ್ಡಿ, ಉಪ ಸಮನ್ವಯಾಧಿಕಾರಿ ಜಯರಾಮ್ ರೆಡ್ಡಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !