ಜಿಲ್ಲೆಯಲ್ಲಿ ಸಾರ್ವತ್ರಿಕ ಮುಷ್ಕರ ಬೆಂಬಲಿಸಿ

7
ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಸಿಪಿಎಂ ಹಿರಿಯ ಮುಖಂಡ ಜಿ.ವಿ ಶ್ರೀರಾಮರೆಡ್ಡಿ ವಾಗ್ದಾಳಿ

ಜಿಲ್ಲೆಯಲ್ಲಿ ಸಾರ್ವತ್ರಿಕ ಮುಷ್ಕರ ಬೆಂಬಲಿಸಿ

Published:
Updated:

ಚಿಕ್ಕಬಳ್ಳಾಪುರ: ‘ಕೇಂದ್ರ ಸರ್ಕಾರದ ರೈತ, ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ದೇಶದಾದ್ಯಂತ ಜನವರಿ 8 ಮತ್ತು 9 ರಂದು ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಸಾರ್ವತ್ರಿಕ ಮುಷ್ಕರವನ್ನು ಜಿಲ್ಲೆಯಲ್ಲಿ ಪ್ರತಿಯೊಬ್ಬರೂ ಬೆಂಬಲಿಸಬೇಕು’ ಎಂದು ಸಿಪಿಎಂ ಹಿರಿಯ ಮುಖಂಡ ಜಿ.ವಿ ಶ್ರೀರಾಮರೆಡ್ಡಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಐತಿಹಾಸಿಕ ಎರಡು ದಿನಗಳ ಮುಷ್ಕರಕ್ಕೆ 120 ಸಂಘಟನೆಗಳು ಕೈಜೋಡಿಸಿವೆ. ಜಿಲ್ಲೆಯ ಬಂದ್‌ಗೆ ನಾವು ಬೆಂಬಲ ಕೊಡುತ್ತವೆ’ ಎಂದು ಹೇಳಿದರು.

‘ನಾಲ್ಕು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಆಶ್ವಾಸನೆಗಳು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಅವರು ಅನುಸರಿಸುತ್ತಿರುವ ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ನೀತಿಗಳು ದೇಶವನ್ನು ಅಧೋಗತಿಗೆ ತೆಗೆದುಕೊಂಡು ಹೋಗಿವೆ’ ಎಂದು ಆರೋಪಿಸಿದರು.

‘ನೀತಿ ಆಯೋಗದ ವರದಿ ಪ್ರಕಾರ ಕೈಗಾರಿಕಾ ರಂಗದಲ್ಲಿ ಶೇ 30 ರಷ್ಟು ಉದ್ಯೋಗ ಕಡಿತವಾಗಿವೆ. ಕೃಷಿ ರಂಗ ಅವಸಾನದ ಅಂಚಿಗೆ ತಲುಪುತ್ತಿದೆ. ಆಹಾರ ಉತ್ಪಾದನೆ ಸಂಪೂರ್ಣವಾಗಿ ಕಡಿಮೆಯಾಗಿದೆ. ಆಹಾರ ಉತ್ಪಾದನೆ ಕುಂಠಿತಗೊಂಡಿದೆ. ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಕೃಷಿ ರಂಗ ಸಂಪೂರ್ಣ ದಿವಾಳಿಯಾಗಿದೆ’ ಎಂದು ತಿಳಿಸಿದರು.

‘ಕಪ್ಪು ಹಣ ದೇಶಕ್ಕೆ ವಾಪಸ್‌ ತಂದು ಪ್ರತಿಯೊಬ್ಬರ ಖಾತೆಗೆ ₨15 ಲಕ್ಷ ಹಾಕುತ್ತೇನೆ ಎಂದು ಹೇಳಿದ ಮೋದಿ ಅವರು, ಒಂದು ರೂಪಾಯಿ ಸಹ ಹಾಕಲಿಲ್ಲ. ಅವರೇ ಹೇಳಿದ ಪ್ರಕಾರ ₨13 ಸಾವಿರ ಕೋಟಿ ಕಪ್ಪುಹಣ ಹಿಂದಕ್ಕೆ ತರುವಲ್ಲಿ ವಿಫಲವಾಗಿದ್ದಾರೆ. ಈಗ ವಿದೇಶದಲ್ಲಿ ಕಪ್ಪುಹಣದ ಪ್ರಮಾಣ ಶೇ 40 ರಷ್ಟು ಜಾಸ್ತಿಯಾಗಿದೆ’ ಎಂದು ಆಪಾದಿಸಿದರು.

‘ಮೇಕ್ ಇನ್ ಇಂಡಿಯಾ ಯೋಜನೆಗೆ ಯಾರೂ ಬಂಡವಾಳ ಹೂಡಲು ಮುಂದೆ ಬರುತ್ತಿಲ್ಲ. ದೇಶದಲ್ಲಿ 380 ಬಹುರಾಷ್ಟ್ರೀಯ ಕಂಪನಿಗಳ ಹೆಚ್ಚಾದ ಸಂಪತ್ತು ತೋರಿಸಿ ದೇಶ ಆರ್ಥಿಕವಾಗಿ ಬಲಿಷ್ಠವಾಗುತ್ತಿದೆ ಎಂದು ಬಿಂಬಿಸಲು ಹೊರಟಿದ್ದಾರೆ. ಇದು ಜನ ವಿರೋಧಿ ನೀತಿ. ಜನರ ಜೀವನ ಮಟ್ಟ, ಆದಾಯ ಮಟ್ಟ ಹೆಚ್ಚಾದಾಗ ಮಾತ್ರ ದೇಶದ ಅಭಿವೃದ್ಧಿಯಾಗುತ್ತದೆ’ ಎಂದು ಹೇಳಿದರು.

‘ಕೇಂದ್ರದಲ್ಲಿ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೋಮು ಗಲಭೆಗಳು ನಿರಂತರವಾಗಿ ಹೆಚ್ಚಾಗುತ್ತಿವೆ. ಗೋ ರಕ್ಷಣೆ ಹೆಸರಿನಲ್ಲಿ ಅಲ್ಪಸಂಖ್ಯಾತ ಸಮುದಾಯ, ಸಂವಿಧಾನದ ಮೇಲೆ ನಿರಂತರ ದಾಳಿ ನಡೆಯುತ್ತಿವೆ. ಬಿಜೆಪಿಯವರು ಈ ದೇಶವನ್ನು ಕೇಸರೀಕರಣ ಮಾಡಲು ಹೊರಟಿದ್ದಾರೆ. ಇದು ನಡೆಯುವುದಿಲ್ಲ’ ಎಂದು ತಿಳಿಸಿದರು.

ಸಿಪಿಎಂ ರಾಜ್ಯ ಘಟಕದ ಸದಸ್ಯ ಚನ್ನರಾಯಪ್ಪ, ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಜಯರಾಮರೆಡ್ಡಿ, ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕದ ಸದಸ್ಯ ಎಂ.ಪಿ.ಮುನಿವೆಂಕಟಪ್ಪ, ರಾಜ್ಯ ಅಂಗನವಾಡಿ ನೌಕರರ ಜಿಲ್ಲಾ ಘಟಕ ಅಧ್ಯಕ್ಷ ಲಕ್ಷ್ಮಿದೇವಮ್ಮ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !