ಜವಾಬ್ದಾರಿ ಅರಿತು ಕೆಲಸ ಮಾಡಿ: ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ತರಾಟೆ

7

ಜವಾಬ್ದಾರಿ ಅರಿತು ಕೆಲಸ ಮಾಡಿ: ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ತರಾಟೆ

Published:
Updated:
Prajavani

ಕೋಲಾರ: ಬರ ಪರಿಸ್ಥಿತಿ ನಿರ್ವಹಣೆ ಕುರಿತು ಇಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ‘ಮಾನವೀಯತೆಯಿಂದ ಜವಾಬ್ದಾರಿ ಅರಿತು ಕೆಲಸ ಮಾಡಿ’ ಎಂದು ತರಾಟೆಗೆ ತೆಗೆದುಕೊಂಡರು.

ನೀರಿನ ಸಮಸ್ಯೆ ನಿವಾರಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಸಚಿವರು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (ಪ್ರಭಾರ) ಕಾರ್ಯ ನಿರ್ವಾಹಕ ಎಂಜಿನಿಯರ್‌ ಗುಳ್ಳಪ್ಪನವರ್‌ ಸಮರ್ಪಕ ಮಾಹಿತಿ ನೀಡಲಿಲ್ಲ.

ಇದರಿಂದ ಅಸಮಾಧಾನಗೊಂಡ ಸಚಿವರು, ‘ಸಭೆಯಲ್ಲಿ ಒಂದು ರೀತಿ ಹೇಳಿ, ಇನ್ನೊಂದು ರೀತಿ ಕೆಲಸ ಮಾಡಬೇಡಿ. ನೀರಿನ ಸಮಸ್ಯಾತ್ಮಕ ಗ್ರಾಮಗಳಿಗೆ 24 ತಾಸಿನಲ್ಲಿ ನೀರಿನ ಸೌಲಭ್ಯ ಕಲ್ಪಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಖಡಕ್‌ ಎಚ್ಚರಿಕೆ ನೀಡಿದರು.

‘ಜಿಲ್ಲೆಯ 8 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, 4 ಗ್ರಾಮಗಳಿಗೆ ಟ್ಯಾಂಕರ್ ಹಾಗೂ 4 ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಬರ ಪರಿಸ್ಥಿತಿ ನಿರ್ವಹಣೆ ಕುರಿತು ಪ್ರತಿವಾರ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ವಿವರಿಸಿದರು.

ಆಗ ಸಚಿವರು, ‘ಆದ್ಯತೆ ಮೇರೆಗೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ರೈತರ ಮೇಲೆ ಒತ್ತಡ ತಂದು ನೀರು ಖರೀದಿ ಮಾಡಬೇಡಿ. ಸಮಸ್ಯೆ ಬಗ್ಗೆ ಅವರಿಗೆ ಅರಿವು ಮೂಡಿಸಿ, ಸ್ವಯಂಪ್ರೇರಿತರಾಗಿ ನೀರು ಕೊಟ್ಟರೆ ಮಾತ್ರ ತೆಗೆದುಕೊಳ್ಳಬೇಕು. ನೀರು ಸರಬರಾಜು ಮಾಡಿದ 15 ದಿನಗಳೊಳಗೆ ಬಿಲ್ ಪಾವತಿಸಬೇಕು. ಬಿಲ್ ಪಾವತಿ ವಿಳಂಬವಾದರೆ ಅದಕ್ಕೆ ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಪಿಡಿಒಗಳೇ ಹೊಣೆ’ ಎಂದರು.

ಅನುದಾನನಲ್ಲಿ ತಾರತಮ್ಯ: ‘ಕೆಜಿಎಫ್ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಹೊಸದಾಗಿ ಕೊರೆಸಿರುವ ಕೊಳೆವೆ ಬಾವಿಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಕೊಡುತ್ತಿಲ್ಲ. ಕ್ಷೇತ್ರಕ್ಕೆ ಅನುದಾನ ನೀಡಿಕೆಯಲ್ಲೂ ತಾರತಮ್ಯ ಮಾಡಲಾಗುತ್ತಿದೆ’ ಎಂದು ಶಾಸಕಿ ಎಂ.ರೂಪಕಲಾ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು,‘ಶಾಸಕರು ನಿಯಮಿತವಾಗಿ ಕ್ಷೇತ್ರವಾರು ಅಧಿಕಾರಿಗಳ ಸಭೆ ನಡೆಸಿದರೆ ನೀರಿನ ಸಮಸ್ಯೆ ನಿವಾರಣೆಗೆ ಸಹಕಾರಿಯಾಗುತ್ತದೆ. ನೀರಿನ ಸಮಸ್ಯೆ ಪರಿಹಾರಕ್ಕೆ ಹಣದ ಕೊರತೆಯಿಲ್ಲ. ಸರ್ಕಾರಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

₹ 35 ಕೋಟಿ ಉಳಿಕೆ: ‘ನೀರಿನ ಸಮಸ್ಯೆ ಸೇರಿದಂತೆ ಇತರೆ ಕಾಮಗಾರಿಗಳಿಗೆ ₹ 48 ಕೋಟಿ ಬಿಡುಗಡೆಯಾಗಿದ್ದು, ಈ ಪೈಕಿ ₹ 35 ಕೋಟಿ ಉಳಿಕೆಯಾಗಿದೆ. ಈ ಅನುದಾನವನ್ನು ನೀರಿನ ಸಮಸ್ಯೆ ನಿವಾರಣೆಗೆ ಬಳಸಲಾಗುತ್ತಿದೆ. ಕೊಳವೆ ಬಾವಿ ಕೊರೆಸಲು ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆಯೇ ಅನಗತ್ಯವಾಗಿ ಹಣ ವೆಚ್ಚ ಮಾಡಲಾಗಿದೆ’ ಎಂದು ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ತಿಳಿಸಿದರು.

‘ಅನುದಾನವಿದೆ ಎಂದು ಎಂಜಿನಿಯರ್‌ಗಳು ಮನಸೋಇಚ್ಛೆ ವೆಚ್ಚ ಮಾಡಬೇಡಿ. ಸಮಸ್ಯೆ ಅರಿತು ಕೆಲಸ ಮಾಡಬೇಕು. ಅನಗತ್ಯ ಕೆಲಸಕ್ಕೆ ದುಂದು ವೆಚ್ಚ ಮಾಡಬಾರದು’ ಎಂದು ಸಚಿವರು ತಾಕೀತು ಮಾಡಿದರು.

ಬರಗಾಲದಲ್ಲಿ ಮೇವಿನ ಸಮಸ್ಯೆ ಎದುರಾಗದಂತೆ ಕ್ರಮ ವಹಿಸಲಾಗಿದೆ. ಮೇವಿನ ಬೇಡಿಕೆ ಆಧಾರದ ಮೇಲೆ 66,443 ಮೇವಿನ ಕಿಟ್‌ ವಿತರಣೆ ಮಾಡಲಾಗಿದ್ದು, 9,814 ಟನ್ ಮೇವು ಲಭ್ಯವಿದೆ. ಜಿಲ್ಲೆಯಲ್ಲಿ ಈವರೆಗೆ 177 ಕೊಳವೆ ಬಾವಿ ಕೊರೆಸಲಾಗಿದ್ದು, 128ರಲ್ಲಿ ನೀರು ಸಿಕ್ಕಿದೆ. 49 ಕೊಳವೆ ಬಾವಿ ವಿಫಲವಾಗಿವೆ. 99ಕ್ಕೆ ಪಂಪ್‌ ಮತ್ತು ಮೋಟರ್‌ ಅಳವಡಿಸಿದ್ದು, 29 ಬಾಕಿ ಇವೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

‘ಹೊಸ ಕೊಳವೆ ಬಾವಿ ಕೊರೆಸಿದಾಗ ಅದಕ್ಕೆ ಹಳೆ ಕೊಳವೆ ಬಾವಿಯ ಪಂಪ್‌ ಮೋಟಾರ್ ಮತ್ತು ವಿದ್ಯುತ್ ಸಲಕರಣೆ ಅಳಡಿಸಬೇಕು. ಇದರಿಂದ ಹೆಚ್ಚಿನ ವೆಚ್ಚ ನಿಯಂತ್ರಿಸಬಹುದು’ ಎಂದು ಸಚಿವರು ಸಲಹೆ ನೀಡಿದರು.

ಹಣ ಪತ್ತೆ: ವೈಭವೀಕರಿಸಬೇಡಿ
ಕೋಲಾರ: ‘ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ಕಚೇರಿಯ ಟೈಪಿಸ್ಟ್‌ ಬಳಿ ₹ 25.76 ಲಕ್ಷ ಪತ್ತೆಯಾಗಿರುವ ಬಗ್ಗೆ ಪೊಲೀಸರು ತನಿಖೆ ನಡೆಸಿ ವರದಿ ನೀಡುತ್ತಾರೆ. ಈ ಸಂಗತಿಯನ್ನು ವೈಭವೀಕರಿಸುವ ಅಗತ್ಯವಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಚಿವರ ಕಚೇರಿಯ ಟೈಪಿಸ್ಟ್ ಮೋಹನ್ ಹಣ ತೆಗೆದುಕೊಂಡು ಹೋಗುವಾಗ ವಿಧಾನಸೌಧದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಆ ಹಣವನ್ನು ಪೊಲೀಸರು ಈಗಾಗಲೇ ಜಪ್ತಿ ಮಾಡಿದ್ದಾರೆ. ಹಣದ ಮೂಲದ ಬಗ್ಗೆ ತನಿಖೆ ಮುಂದುವರಿದಿದೆ’ ಎಂದರು.

‘ಮೋಹನ್‌ ಅವರಿಗೆ ಅಷ್ಟು ಹಣ ಹೇಗೆ ಬಂತು, ಅದಕ್ಕೆ ದಾಖಲೆಪತ್ರ ಇದೆಯೇ ಅಥವಾ ಅಕ್ರಮ ಹಣವೇ ಎಂಬುದು ಪೊಲೀಸ್‌ ತನಿಖೆ ಪೂರ್ಣಗೊಂಡ ನಂತರವಷ್ಟೇ ತಿಳಿಯುತ್ತದೆ. ಹಣದ ಮೂಲ ಗೊತ್ತಾದ ನಂತರ ಪ್ರತಿಕ್ರಿಯೆ ನೀಡುವುದು ಸೂಕ್ತ. ಆರೋಪ ಮಾಡುವವರೆಲ್ಲಾ ಮಾಡುತ್ತಿರಲಿ’ ಎಂದು ತಿಳಿಸಿದರು.

ಶಾಸಕ ಕೆ.ವೈ.ನಂಜೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ, ಉಪಾಧ್ಯಕ್ಷೆ ಯಶೋದಾ, ಹೆಚ್ಚುವರಿ ಜಿಲ್ಲಾಧಿಕಾರಿ ಪುಷ್ಪಲತಾ, ಉಪ ವಿಭಾಗಾಧಿಕಾರಿ ಕೆ.ಶುಭಾ ಕಲ್ಯಾಣ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !