ಪೋಷಕರು– ಶಿಕ್ಷಕರನ್ನು ಗೌರವಿಸಿ

7

ಪೋಷಕರು– ಶಿಕ್ಷಕರನ್ನು ಗೌರವಿಸಿ

Published:
Updated:
Prajavani

ಕೋಲಾರ: ‘ವಿದ್ಯಾರ್ಥಿಗಳು ಪೋಷಕರಿಗೆ ಮತ್ತು ಗುರುಗಳಿಗೆ ಗೌರವ ನೀಡದಿದ್ದರೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯವಾಗುವುದಿಲ್ಲ’ ಎಂದು ವಿದ್ಯಾರ್ಥಿ ಮುಖಂಡ ಬಿ.ಸುರೇಶ್‌ಗೌಡ ಅಭಿಪ್ರಾಯಪಟ್ಟರು.

ನೈತಿಕ ಶಿಕ್ಷಣ ಕುರಿತು ಇಲ್ಲಿನ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ‘ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಾರೆ. ಶಿಕ್ಷಕರು ಒಳ್ಳೆಯ ಅಧಿಕಾರಿಗಳು ಹಾಗೂ ವ್ಯಕ್ತಿಗಳನ್ನು ರೂಪಿಸುವ ಸಾಧನಗಳಾಗಿದ್ದಾರೆ. ಈ ಇಬ್ಬರಿಗೂ ಗೌರವ ನೀಡುವುದು ವಿದ್ಯಾರ್ಥಿಗಳ ಜವಾಬ್ದಾರಿ’ ಎಂದು ಕಿವಿಮಾತು ಹೇಳಿದರು.

‘ಮಕ್ಕಳು ತಾಯಿಯನ್ನು ವಿರೋಧಿಸಿದರೆ ಅಥವಾ ನಿಂದಿಸಿದರೆ ಅಲ್ಲಿಗೆ ಮುಗಿಯಿತು. ನಂತರ ಕಾಲೇಜಿನಲ್ಲಿ, ಸಾರ್ವಜನಿಕ ಸ್ಥಳದಲ್ಲೂ ಅದೇ ರೀತಿಯ ವರ್ತನೆ ಇರುತ್ತದೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಮನೆಯಿಂದಲೇ ಬದಲಾವಣೆಯಾಗಬೇಕು’ ಎಂದು ಸಲಹೆ ನೀಡಿದರು.

‘ಜೀವನದಲ್ಲಿ ತಪ್ಪು ಮಾಡುವುದು ಸಹಜ. ಆದರೆ, ಅದನ್ನು ಮುಂದುವರಿಸುವುದು ಸರಿಯಲ್ಲ. ತಪ್ಪಿನ ಪುನರಾವರ್ತನೆಗೆ ಅವಕಾಶ ನೀಡದೆ ತಿದ್ದಿಕೊಂಡು ನಡೆಯಬೇಕು. ವಿದ್ಯಾರ್ಥಿ ದಿಸೆಯಲ್ಲೇ ಬದಲಾವಣೆಯ ಅಗತ್ಯವಿದ್ದು, ನೀವು ಬದಲಾದರೆ ಸಮಾಜವೇ ಬದಲಾಗುತ್ತದೆ’ ಎಂದು ಹೇಳಿದರು.

‘ಸಿನಿಮಾ ಕಡೆಗೆ ತೋರುವ ಆಸಕ್ತಿಯನ್ನು ಪಾಠ ಪ್ರವಚನದ ಕಡೆ ಹರಿಸಿದರೆ ಶೈಕ್ಷಣಿಕ ಸಾಧನೆ ಮಾಡಬಹುದು. ಶಿಕ್ಷಣ ಮುಗಿಯುವವರೆಗೆ ಮೊಬೈಲ್‌ನ ಅತಿಯಾದ ಬಳಕೆ ಅಗತ್ಯವಿಲ್ಲ. ಒಳ್ಳೆಯ ವಿಚಾರ ಕಲಿಯಲು ಕಾಲೇಜಿಗೆ ಬರಬೇಕೇ ಹೊರತು ಕೆಟ್ಟ ವಿಚಾರ ಕಲಿಯುವುದಕ್ಕಲ್ಲ’ ಎಂದರು.

ಅರಿವು ಮೂಡಿಸಿ: ‘ತಪ್ಪು ದಾರಿಯಲ್ಲಿ ಸಾಗುವವರನ್ನು ಸರಿ ದಾರಿಯಲ್ಲಿ ಕರೆದೊಯ್ಯುವ ಶಕ್ತಿ ನೈತಿಕ ಶಿಕ್ಷಣಕ್ಕಿದೆ. ಈ ಸತ್ಯ ಅರಿತು ಇತರರಿಗೂ ಅರಿವು ಮೂಡಿಸಿ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ವೆಂಕಟಸ್ವಾಮಿ ಮನವಿ ಮಾಡಿದರು.

ಯುವ ಶಕ್ತಿ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಪುಟ್ಟರಾಜು, ನೀರಾವರಿ ಹೋರಾಟ ವೇದಿಕೆ ಸಂಚಾಲಕರಾದ ರಾಜೇಶ್, ರವೀಶ್, ಸುಬ್ರಮಣಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !