ತೈಲಗಳ ತೆರಿಗೆ ಹೆಚ್ಚಳಕ್ಕೆ ಆಕ್ರೋಶ

7
ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಳ ಖಂಡಿಸಿ, ಸಚಿವ ಪುಟ್ಟರಂಗ ಶೆಟ್ಟಿ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ತೈಲಗಳ ತೆರಿಗೆ ಹೆಚ್ಚಳಕ್ಕೆ ಆಕ್ರೋಶ

Published:
Updated:
Prajavani

ಚಿಕ್ಕಬಳ್ಳಾಪುರ: ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ತೆರಿಗೆ ದರವನ್ನು ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗ ಶೆಟ್ಟಿ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶನಿವಾರ ಸಂಜೆ ಪ್ರತಿಭಟನೆ ನಡೆಸಿದರು.

ನಗರದ ಬಲಮುರಿ ವೃತ್ತದಲ್ಲಿ ರಸ್ತೆ ತಡೆದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್, ‘ಕಳೆದ ಎರಡೂವರೆ ತಿಂಗಳಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಇಳಿಕೆಯಾಗುತ್ತಿದೆ. ಇದರಿಂದ ಕೇಂದ್ರ ಸರ್ಕಾರ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಇಳಿಕೆ ಮಾಡಿತ್ತು. ಆದರೆ ರಾಜ್ಯ ಸರ್ಕಾರ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ತೆರಿಗೆ ದರವನ್ನು ಕ್ರಮವಾಗಿ ಶೇ 32 ಹಾಗೂ ಶೇ 21ಕ್ಕೆ ಪರಿಷ್ಕರಿಸಿ, ಪ್ರತಿ ಲೀಟರ್‌ಗೆ ಸರಿಸುಮಾರು ₹2 ನಷ್ಟು ಹೆಚ್ಚಳ ಮಾಡಿದೆ’ ಎಂದು ಆರೋಪಿಸಿದರು.

‘ಜನಸಾಮಾನ್ಯರ ಬವಣೆ ತಪ್ಪಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಕ್ರಮಗಳನ್ನು ಕೈಗೊಂಡರೂ ಕೇಂದ್ರ ಸರ್ಕಾರ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ರಾಜ್ಯ ಸರ್ಕಾರ ಇಂತಹ ಕೆಟ್ಟ ನಿರ್ಧಾರಗಳನ್ನು ಕೈಗೊಂಡಿದೆ. ತೆರಿಗೆ ಪರಿಷ್ಕರಣೆ ಅನಿವಾರ್ಯವಾಗಿತ್ತು ಎಂಬ ರಾಜ್ಯ ಸರ್ಕಾರದ ಸಮರ್ಥನೆ ನಾಚಿಕೆಗೇಡಿನದು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಈ ಕೂಡಲೇ ರಾಜ್ಯ ಸರ್ಕಾರ ತೈಲ ಬೆಲೆಯಲ್ಲಿ ಏರಿಕೆ ಮಾಡಿರುವ ತೆರಿಗೆಯನ್ನು ಇಳಿಕೆ ಮಾಡಿ ಜನಸಾಮಾನ್ಯರ ಮೇಲಿನ ಹೊರೆ ತಗ್ಗಿಸಬೇಕು. ಇಲ್ಲದಿದ್ದರೆ ಬಿಜೆಪಿ ವತಿಯಿಂದ ದೊಡ್ಡ ಪ್ರಮಾಣದಲ್ಲಿ ಹೋರಾಟ ರೂಪಿಸಲಾಗುತ್ತದೆ’ ಎಂದರು.

‘ತಮ್ಮ ಕಚೇರಿಯ ಟೈಪಿಸ್ಟ್ ಬಳಿ ದಾಖಲೆ ಇಲ್ಲದ ₹25 ಲಕ್ಷ ಪತ್ತೆಯಾದ ಪ್ರಕರಣದ ನೈತಿಕ ಹೊಣೆ ಹೊತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗ ಶೆಟ್ಟಿ ಅವರು ಕೂಡಲೇ ರಾಜೀನಾಮೆ ನೀಡಬೇಕು. ವಿಧಾನಸೌಧದಲ್ಲಿರುವ ಸಚಿವರ ಕಚೇರಿಯಲ್ಲಿಯೇ ಲಂಚ ಸ್ವೀಕರಿಸಿದ್ದು ಸಮ್ಮಿಶ್ರ ಸರ್ಕಾರದಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಂತಿದೆ’ ಎಂದು ಆರೋಪಿಸಿದರು.

‘ಇಂತಹ ಭ್ರಷ್ಟ ಸಚಿವರನ್ನು ಇಟ್ಟುಕೊಂಡು ಸರ್ಕಾರ ನಡೆಸುವುದು ಹೇಸಿಗೆತನದ ಪರಮಾವಧಿ. ಆದ್ದರಿಂದ ಮುಖ್ಯಮಂತ್ರಿ ಅವರು ಕೂಡಲೇ ಪುಟ್ಟರಂಗಶೆಟ್ಟಿ ಅವರಿಂದ ರಾಜೀನಾಮೆ ಪಡೆಯಬೇಕು. ಈ ಪ್ರಕರಣದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ₹25 ಲಕ್ಷ ಪುಟಗೋಶಿ ಎಂದು ಮಾತನಾಡಿದ್ದಾರೆ. ಹೇಸಿಗೆ ಸ್ವಲ್ಪ ತಿಂದರೂ ಅಷ್ಟೇ, ಬುಟ್ಟಿಗಟ್ಟಲೇ ತಿಂದರೂ ಅಷ್ಟೇ. ಆದ್ದರಿಂದ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

ವಿಭಾಗ ಪ್ರಭಾರ ಸಚ್ಚಿದಾನಂದ ಮೂರ್ತಿ, ಮಹಿಳಾ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷೆ ಜ್ಯೋತಿ ರೆಡ್ಡಿ, ಮಂಡಲ ಅಧ್ಯಕ್ಷ ಅಗಲಗುರ್ಕಿ ಚಂದ್ರಶೇಖರ್, ನಗರ ಘಟಕದ ಅಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಗೋಪಿನಾಥ್, ಮುರುಳೀಧರ್, ಮಹಿಳಾ ಮೋರ್ಚಾ ಅಧ್ಯಕ್ಷೆ ಲಲಿತಾ ಭೂಷಣ್, ಮುಖಂಡರಾದ ನಿರ್ಮಲಾ, ಮಂಜುಳಾ, ಸಂದೀಪ್ ರೆಡ್ಡಿ, ಕಿರಣ್ ಪ್ರತಿಭಟನೆಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !