ನಾಗರೀಕತೆ ಬೆಳೆದಂತೆ ಪಕ್ಷಿ ಸಂಕುಲ ದೂರ

7
ವಿಶ್ವ ಪಕ್ಷಿ ದಿನಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜ್ ಕಳವಳ

ನಾಗರೀಕತೆ ಬೆಳೆದಂತೆ ಪಕ್ಷಿ ಸಂಕುಲ ದೂರ

Published:
Updated:
Prajavani

ಕೋಲಾರ: ‘ನಾಗರೀಕತೆ ಬೆಳೆದಂತೆ ಪ್ರಾಣಿ ಪಕ್ಷಿ ಸಂಕುಲ ನಮ್ಮಿಂದ ದೂರವಾಗುತ್ತಿವೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ) ವಿ.ದೇವರಾಜ್ ಕಳವಳ ವ್ಯಕ್ತಪಡಿಸಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್‌ ಮತ್ತು ಜಿಲ್ಲಾ ವಿಜ್ಞಾನ ಸಮಿತಿ ಸಹಯೋಗದಲ್ಲಿ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಪಕ್ಷಿ ದಿನಾಚರಣೆಯಲ್ಲಿ ಮಾತನಾಡಿ, ‘ಪಕ್ಷಿಗಳಿಗೆ ಆಹಾರಕ್ಕಿಂತಲೂ ನೀರಿನ ಕೊರತೆ ಹೆಚ್ಚಾಗಿದೆ. ಮಕ್ಕಳು ಪಕ್ಷಿಗಳಿಗೆ ನೀರು ಪೂರೈಸುವ ಪ್ರಯತ್ನ ಮಾಡಬೇಕು’ ಎಂದು ಸಲಹೆ ನೀಡಿದರು.

‘ದೇವಾಲಯಗಳು ಮತ್ತು ಹಳೆಯ ಮನೆಗಳಲ್ಲಿ ವಿವಿಧ ಬಗೆಯ ಪಕ್ಷಿ ಕಾಣಬಹುದಿತ್ತು. ಇಂದು ಅಲ್ಲಿಯೂ ಪಕ್ಷಿಗಳು ಇಲ್ಲವಾಗಿವೆ. ಪರಿಸರ ಮಾಲಿನ್ಯದಿಂದ ಪಕ್ಷಿಗಳಿಗೆ ತೊಂದರೆಯಾಗಿದೆ. ಪಕ್ಷಿಗಳ ಸಂಖ್ಯೆ ವೃದ್ಧಿಸಲು ಗಿಡ ಮರ ಬೆಳೆಸಬೇಕು’ ಎಂದು ಕಿವಿಮಾತು ಹೇಳಿದರು.

‘ಕೆಲ ವರ್ಷಗಳ ಹಿಂದೆ ನೈಸರ್ಗಿಕ ವಿಕೋಪದ ಬಗ್ಗೆ ಪಕ್ಷಿಗಳಿಂದ ಸೂಚನೆ ದೊರೆಯುತ್ತಿತ್ತು. ಪರಿಸರ ಮಾಲಿನ್ಯದಿಂದ ಪಕ್ಷಿಗಳ ಸಂತತಿ ನಶಿಸುತ್ತಿದೆ. ಪಕ್ಷಿಗಳನ್ನು ರಕ್ಷಿಸುವುದರ ಜತೆಗೆ ಮಕ್ಕಳಿಗೆ ಅವುಗಳ ಪರಿಚಯ ಮಾಡಿಕೊಡಬೇಕು’ ಎಂದು ತಿಳಿಸಿದರು.

ಹಸರೀಕರಣ ಹೆಚ್ಚಿಸಿ: ‘ಪರಿಸರ ರಕ್ಷಣೆಯಿಂದ ಪ್ರಾಣಿ ಪಕ್ಷಿ ಸಂಕುಲ ರಕ್ಷಿಸಬಹುದು ಎಂಬ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. ರಾಜ್ಯದಲ್ಲಿ ಹಸರೀಕರಣ ಪ್ರಮಾಣ ಶೇ 22ರಷ್ಟಿದೆ, ಕೋಲಾರ ಜಿಲ್ಲೆಯಲ್ಲಿ ಶೇ 6.19ರಷ್ಟಿದೆ. ಪ್ರತಿಯೊಬ್ಬರು ಹಸರೀಕರಣ ಹೆಚ್ಚಿಸುವ ಸಂಕಲ್ಪ ಮಾಡಬೇಕು’ ಎಂದು ಜಿಲ್ಲಾ ಪರಿಸರ ಅಧಿಕಾರಿ ಸಿ.ಆರ್.ಮಂಜುನಾಥ್ ಮನವಿ ಮಾಡಿದರು.

‘ಹುಟ್ಟು ಹಬ್ಬ, ಮದುವೆ, ಹೊಸ ವರ್ಷ ಸೇರಿದಂತೆ ವಿಶೇಷ ಸಂದರ್ಭದಲ್ಲಿ ಗಿಡ ನೆಟ್ಟು ಬೆಳೆಸಬೇಕು. 25 ವರ್ಷಗಳಿಂದ ಪಕ್ಷಿ ದಿನಾಚರಣೆ ನಡೆಯುತ್ತಿದೆ. ಆದರೆ, ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಆಚರಣೆ ಮಾಡುತ್ತಿದ್ದೇವೆ. ಪ್ರತಿ ವರ್ಷ ಈ ಕಾರ್ಯಕ್ರಮ ನಡೆಸಬೇಕು’ ಎಂದು ಹೇಳಿದರು.

‘ರೈತರ ಮಿತ್ರ ಹಾಗೂ ಜೀವನದ ಒಡನಾಡಿಯಾಗಿರುವ ಸಾಕಷ್ಟು ಪಕ್ಷಿಗಳು ಇಂದು ಅಳಿವಿನ ಅಂಚಿನಲ್ಲಿವೆ’ ಎಂದು ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಕಾರ್ಯದರ್ಶಿ ಮಂಜುಳಾ ಭೀಮರಾವ್ ವಿಷಾದಿಸಿದರು.

ಬಹುಮಾನ ವಿತರಣೆ: ವಿಶ್ವ ಪಕ್ಷಿ ದಿನಾಚರಣೆ ಅಂಗವಾಗಿ ನಡೆದ ಚಿತ್ರಕಲೆ ಸ್ಪರ್ಧೆಯಲ್ಲಿ 180 ವಿದ್ಯಾರ್ಥಿಗಳು ಭಾಗವಹಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. 

ಜಿಲ್ಲಾ ವಿಜ್ಞಾನ ಸಮಿತಿ ಅಧ್ಯಕ್ಷ ಡಾ.ಸಿ.ಶಿವಣ್ಣ, ಪರಿಸರವಾದಿ ಜಯಸಿಂಹ, ಸಹಾಯಕ ಪರಿಸರ ಅಧಿಕಾರಿ ಮೃತ್ಯುಂಜಯ, ರೋಟರಿ ಸಂಸ್ಥೆ ಕಾರ್ಯದರ್ಶಿ ವೆಂಕಟರಮಣಪ್ಪ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !