ಒಂದೇ ತಾಣದಲ್ಲಿ ವೈವಿಧ್ಯಮಯ ಪಶು, ಪಕ್ಷಿ

7
ಜಾನುವಾರು ಸಾಕಾಣಿಕೆಗೆ ರೈತರಿಗೆ ಮಾರ್ಗದರ್ಶಕವಾದ ಮೇಳ

ಒಂದೇ ತಾಣದಲ್ಲಿ ವೈವಿಧ್ಯಮಯ ಪಶು, ಪಕ್ಷಿ

Published:
Updated:

ರಾಯಚೂರು: ಜಿಲ್ಲೆಯ ಸಿಂಧನೂರಿನಲ್ಲಿ ಶನಿವಾರದಿಂದ ಆರಂಭವಾದ ರಾಜ್ಯಮಟ್ಟದ 2ನೇ ಪಶು ಹಾಗೂ ಮತ್ಸ್ಯ ಮೇಳವು ಹಲವು ವಿಶೇಷಗಳಿಂದ ಕೂಡಿದ್ದು, ಹೈನುಗಾರಿಕೆ, ಜಾನುವಾರು ಸಾಕಾಣಿಕೆ ಹಾಗೂ ಮೀನುಗಾರಿಕೆ ಆರಂಭಿಸಲು ಆಸಕ್ತಿ ಇರುವವರಿಗೆ ಬಗ್ಗೆ ಒಂದೇ ತಾಣದಲ್ಲಿ ಎಲ್ಲವೂ ಮಾಹಿತಿ ಲಭ್ಯವಾಗುತ್ತಿದೆ.

ವೈಜ್ಞಾನಿಕ ಪದ್ಧತಿ ಅನುಸರಿಸಿ ಈಗಾಗಲೇ ಮೀನುಗಾರಿಕೆ, ಹೈನುಗಾರಿಕೆ ಹಾಗೂ ಜಾನುವಾರು ಸಾಕಾಣಿಕೆ ಮಾಡಿಕೊಂಡಿರುವ ಯಶಸ್ವಿ ರೈತರು ಮೇಳದಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಬರುವ ಇತರೆ ರೈತರಿಗೆ ಮಾಹಿತಿ ಒದಗಿಸುವುದರ ಜೊತೆಗೆ ತಮ್ಮ ಯಶಸ್ಸಿನ ಪಶುವನ್ನು ರೈತರ ಮುಂದೆ ಪ್ರದರ್ಶನಕ್ಕೆ ಇಟ್ಟಿದ್ದಾರೆ.

ಐದು ಜೀನ್‌ಗಳನ್ನು ಒಗ್ಗೂಡಿಸಿ ಅಭಿವೃದ್ಧಿ ಮಾಡಿರುವ ’ನಾರಿ ಸುವರ್ಣ’ ಕುರಿ ಪ್ರದರ್ಶನಕ್ಕೆ ಇಡಲಾಗಿದೆ. ಆಸಕ್ತಿ ಇರುವ ರೈತರಿಗೆ ಮಾರಾಟಕ್ಕೂ ಲಭ್ಯವಿದೆ. ಈ ಕುರಿಯು ವರ್ಷಕ್ಕೆ ಎರಡೂ ಸಲ ಮರಿಗಳನ್ನು ಕೊಡುತ್ತದೆ. ಎತ್ತುಗಳ ಸಾಕಾಣಿಕೆ, ಕುರಿ ಸಾಕಾಣಿಕೆಗೂ ಹಲವಾರು ಮಾದರಿಗಳು ಮೇಳದಲ್ಲಿವೆ.

ವಿಶೇಷವಾಗಿ ಹಂದಿ ಸಾಕಾಣಿಕೆ ರೈತರನ್ನು ಅಚ್ಚರಿಗೊಳಿಸುತ್ತಿದೆ. ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಅಲಮೇಲದ ಗುರುದೇವ ಪಿಗ್ಗ ಫಾರಂ ಹೊಂದಿರುವ ಸೋಮಣ್ಣ ಭಾಸಗಿ ಅವರು ಹಂದಿ ಸಾಕಾಣಿಕೆ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಡ್ಯುರಾಕ್‌ ಹಾಗೂ ಯಾರ್ಕ್‌ಶೈರ್‌ ಹಂದಿಗಳನ್ನು ಜನರು ಕುತೂಹಲದಿಂದ ನೋಡುತ್ತಿದ್ದಾರೆ. 10 ತಿಂಗಳಲ್ಲಿ ಒಂದು ಕ್ಚಿಂಟಾಲ್‌ಗಿಂತಲೂ ಹೆಚ್ಚು ತೂಕ ಬೆಳೆಸಿಕೊಳ್ಳುವ ಡ್ಯೂರಾಕ್‌ ಹಂದಿ ಸಾಕಾಣಿಕೆ ಬಗ್ಗೆ ರೈತರು ಕೇಳಿ ತಿಳಿದುಕೊಳ್ಳುತ್ತಿರುವುದು ಕಂಡುಬಂತು.

ಹೈಡ್ರೊಫೋನಿಕ್‌ ವಿಧಾನದಲ್ಲಿ ಮೇವು ಬೆಳೆಯುವ ಪದ್ಧತಿಯನ್ನು ವಿವರಿಸಲು ಬೆಳಗಾವಿಯಿಂದ ಸಚಿನ್‌ ಬಂದಿದ್ದಾರೆ. ಹೈಡ್ರೊಫೋನಿಕ್‌ ವಿಧಾನದಿಂದ ಪ್ರಾಣಿ ಸಾಕಾಣಿಕೆ ಸುಲಭ ಎಂಬುದನ್ನು ಅವರು ಮನವರಿಕೆ ಮಾಡುತ್ತಾರೆ.

ಖಡತ್ನಾಥ್‌ ಕೋಳಿ: ಕಬ್ಬಿನಾಂಶ ಹಾಗೂ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ಖಡತ್ನಾಥ್‌ ಕೋಳಿ ಪ್ರದರ್ಶನದಲ್ಲಿವೆ. ರಾಯಚೂರು ತಾಲ್ಲೂಕಿನ ಯರಗೇರಿ ರೈತ ಮೊಹಮ್ಮದ್‌ ಇಬ್ರಾಹಿಂ ಅವರು ಈ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಇದರ ಮೊಟ್ಟೆ ದರ ₹50. ಒಂದು ಕಿಲೋ ಮಾಂಸದ ದರ ₹1 ಸಾವಿರ.

ಮತ್ಸ್ಯ ಮೇಳ: ಮತ್ಸ್ಯ ಪ್ರದರ್ಶನದಲ್ಲಿ 50 ಕ್ಕೂ ಹೆಚ್ಚು ತಳಿಯ ಅಲಂಕಾರಿಕ ಮೀನುಗಳಿವೆ. ವಿವಿಧ ವಿಧಾನಗಳಲ್ಲಿ ಮೀನು ಸಾಕಾಣಿಕೆ ಮಾಡುವ ವಿಧಾನಗಳ ಮಾದರಿಗಳನ್ನು ಮಾಡಲಾಗಿದೆ.

ಅಕ್ವಾರಿಯಂ ಮಾರಾಟಕ್ಕೆ ಲಭ್ಯ ಇವೆ. ಹಡಗಿನ ಆಕಾರದಲ್ಲಿ ಪ್ರವೇಶದ್ವಾರವು ಕೈಬೀಸಿ ಕರೆಯುತ್ತಿದೆ. ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ರೈತರಿಗೆ ಇಲಾಖೆಯ ಯೋಜನೆಗಳನ್ನು ವಿವರಿಸುತ್ತುರುವುದು ಕಂಡಬಂತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !