ಸಾಹಿತ್ಯ ಕೆಲವರ ಅಂಗಳದಲ್ಲೇ ಇರಬೇಕೆ?

7
ಸಂಶೋಧಕ ಡಾ.ನಟರಾಜ ಬೂದಾಳು ಪ್ರಶ್ನೆ

ಸಾಹಿತ್ಯ ಕೆಲವರ ಅಂಗಳದಲ್ಲೇ ಇರಬೇಕೆ?

Published:
Updated:

ಶಂ.ಬಾ.ಜೋಶಿ ವೇದಿಕೆ (ಧಾರವಾಡ): ‘ಜೈನರು, ವೀರಶೈವರು ಮತ್ತು ವೈದಿಕರ ಅಂಗಳದಲ್ಲಿನ ಸಾಹಿತ್ಯಕ್ಕೆ ಮಾತ್ರ ಶತಮಾನಗಳ ಕಾಲ ಮನ್ನಣೆ ನೀಡಲಾಯಿತು. ಕನ್ನಡ ಸಾಹಿತ್ಯ ಕೆಲವರ ಅಂಗಳದಲ್ಲೇ ಇರಬೇಕೆ’ ಎಂದು ಸಂಶೋಧಕ ಡಾ.ನಟರಾಜ ಬೂದಾಳು ಪ್ರಶ್ನಿಸಿದರು.

ಸಮಾನಾಂತರ ವೇದಿಕೆಯಲ್ಲಿ ಶನಿವಾರ ನಡೆದ ‘ವಿಶಿಷ್ಟ ಸಾಹಿತ್ಯ ಪ್ರಭೇದಗಳು’ ಗೋಷ್ಠಿಯಲ್ಲಿ ತತ್ವಪದಗಳ ಕುರಿತು ವಿಚಾರ ಮಂಡಿಸಿದ ಅವರು, ‘ಈ ಮೂರು ಸಮುದಾಯಗಳಲ್ಲದ ಜನರು ರಚಿಸಿದ ಮತ್ತು ದೇಸೀಯವಾಗಿ ರೂಪುಗೊಂಡ ಸಾಹಿತ್ಯ ಪ್ರಭೇದಗಳನ್ನು ನಿರಂತರವಾಗಿ ಅವಜ್ಞೆಯಿಂದ ನೋಡಲಾಯಿತು. ಈಗ ತಮ್ಮವರನ್ನೇ ಮನೆಯೊಳಕ್ಕೆ ಕರೆಯುವ ಕೆಲಸವನ್ನು ಸಾಹಿತ್ಯ ಕ್ಷೇತ್ರ ಮಾಡುತ್ತಿದೆ’ ಎಂದರು.

ತತ್ವಪದಗಳಲ್ಲಿ ಅತ್ಯಂತ ಶ್ರೇಷ್ಠವಾದ ಮೌಲ್ಯಗಳು ಅಡಗಿವೆ. ತಡರಾತ್ರಿಯ ಕತ್ತಲಿನಲ್ಲಿ ಸೃಷ್ಟಿಯಾದ ಈ ಸಾಹಿತ್ಯವನ್ನು ದೀರ್ಘಕಾಲ ಕತ್ತಲೆಯಲ್ಲೇ ಇಡಲಾಗಿತ್ತು. ಮೌಖಿಕ ಪರಂಪರೆಯ ಮೂಲಕ ಜಗತ್ತಿಗೆ ದೊರೆತ ತತ್ವಪದಗಳಲ್ಲಿ ಜಾತಿ, ಧರ್ಮ, ಬಣ್ಣಗಳ ತಾರತಮ್ಯದ ಹಂಗು ಇಲ್ಲ. ಸಂಸಾರವನ್ನು ಅತ್ಯಂತ ಗೌರವದಿಂದ ಕಾಣುವ ತತ್ವಪದ ಪರಂಪರೆ, ಪ್ರಪಂಚದ ಎಲ್ಲ ವ್ಯಕ್ತಿಗಳು ಮತ್ತು ಅಧಿ
ಕಾರ ಸಂಸ್ಥೆಗಳು ಮೊದಲು ಕುಟುಂಬಕ್ಕೆ ಉತ್ತರದಾಯಿ ಆಗಿರಬೇಕು ಎಂಬ ಉನ್ನತ ಮೌಲ್ಯಗಳನ್ನು ಸಾರಿವೆ ಎಂದರು.

ತತ್ವಪದಗಳು ಮಾತ್ರವಲ್ಲ, ಮೌಖಿಕ ಪರಂಪರೆಯ ಹಾಗೂ ಅಂಚಿನಲ್ಲಿರುವ ಸಮುದಾಯಗಳನ್ನು ಪ್ರತಿನಿಧಿಸುವ ಸಾಹಿತ್ಯ ಪ್ರಭೇದಗಳನ್ನು ಶತಮಾನಗಳ ಕಾಲದಿಂದ ದೂರವೇ ಇರಿಸಲಾಗಿತ್ತು. ಅವುಗಳನ್ನು ಪರಿಚಯಿಸುವ ಪ್ರಯತ್ನವೂ ಆಗಿರಲಿಲ್ಲ. ಕಳೆದುಕೊಳ್ಳುತ್ತಾ ಕಟ್ಟಿಕೊಳ್ಳುವುದನ್ನು ಕಲಿಸುವ ಈ ಸಾಹಿತ್ಯ ಪರಂಪರೆಯನ್ನು ಕನ್ನಡದ ಮನೆಯೊಳಕ್ಕೆ ತರುವ ಕೆಲಸ ಆಗಬೇಕು ಎಂದರು.

ಸ್ವರ ವಚನಗಳ ಕುರಿತು ಮಾತನಾಡಿದ ಬೀದರ್‌ನ ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ತಾಯಿ, ‘ಶರಣರು ಸ್ವಂತ ಅನುಭವಗಳನ್ನು ಆಧರಿಸಿ ರಚಿಸಿದ ಸಾಹಿತ್ಯವೇ ಸ್ವರ ವಚನಗಳು. ಇವು ಒಲಿದು ಹಾಡಿದ ಗೀತೆಗಳು. ತಾವು ಮಾಡಿದ ಕಾಯಕದ ಕುರಿತೇ ಸಾಹಿತ್ಯ ರಚಿಸಿದ್ದಾರೆ. 900 ವರ್ಷಗಳಿಂದಲೂ ಈ ವಚನಗಳು ಜನಮಾನಸದಲ್ಲಿ ಉಳಿದಿವೆ. ಈ ಕಾಲದ ಬಿಕ್ಕಟ್ಟುಗಳಿಗೂ ಸ್ವರ ವಚನಗಳಲ್ಲಿ ಉತ್ತರವಿದೆ’ ಎಂದು ಹೇಳಿದರು.

ಬಹಳ ಮುಂದುವರಿಯುತ್ತಿದ್ದೇವೆ ಎಂಬ ಭಾವನೆ ಜನರಲ್ಲಿದೆ. ಆದರೆ, ಪುರೋಹಿತಷಾಹಿಗಳು ಸಮಾಜವನ್ನು ಹಿಂದಕ್ಕೆ ಕೊಂಡೊಯ್ಯುತ್ತಿದ್ದಾರೆ. ಜನಾಕರ್ಷಣೆಯ ತೀರ್ಥಕ್ಷೇತ್ರಗಳು ಶೋಷಣೆಯ ಕೇಂದ್ರಗಳಾಗುತ್ತಿವೆ. ಮುಟ್ಟಿನಂತಹ ವಿಚಾರಗಳನ್ನು ಮುಂದಿಟ್ಟು ಹಿಂಸಿಸಲಾಗುತ್ತಿದೆ. ಈ ಎಲ್ಲ ವಿಚಾರಗಳ ಬಗ್ಗೆಯೂ ಶರಣರು ಒಂಬತ್ತು ಶತಮಾನಗಳಷ್ಟು ಹಿಂದೆಯೇ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಉತ್ತರ ನೀಡಿದ್ದರು ಎಂದರು

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !