ತೈಲ ಬೆಲೆ ಏರಿಕೆ ಖಂಡಿಸಿ ಧರಣಿ

7
ಬಿಜೆಪಿ ಕಾರ್ಯಕರ್ತರಿಂದ ಧರಣಿ, ರಸ್ತೆ ತಡೆ

ತೈಲ ಬೆಲೆ ಏರಿಕೆ ಖಂಡಿಸಿ ಧರಣಿ

Published:
Updated:
Prajavani

ಕೋಲಾರ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್ ಮತ್ತು ಸಚಿವ ಪುಟ್ಟರಂಗಶೆಟ್ಟಿ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಭಾನುವಾರ ಧರಣಿ ನಡೆಸಿದರು.

ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ವೃತ್ತದಲ್ಲಿ ರಸ್ತೆ ತಡೆ ಮಾಡಿ ಧರಣಿ ನಡೆಸಿದ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೊಷಣೆ ಹಾಕಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಎರಡು ಪಕ್ಷಗಳ ನಡುವೆ ಹೊಂದಾಣಿಕೆಯಿಲ್ಲದೆ ಅಭಿವೃದ್ಧಿ ಕಡೆ ಗಮನಹರಿಸುತ್ತಿಲ್ಲ. ಬೀದಿಗೆ ಬಂದು ಜಗಳವಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಜೆಡಿಎಸ್-ಕಾಂಗ್ರೆಸ್ ಸರಕಾರದ ವೈಫಲ್ಯತೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ತಿಂಗಳಿಗೆ 2-3 ಅನಾಹುತಗಳು ರಾಜ್ಯದಲ್ಲಿ ನಡೆಯುತ್ತಿದ್ದು, ವಿಧಾನಸೌದದ ಒಳಗೆ 25 ಲಕ್ಷರೂ ಲಂಚ ಎಂದರೆ ಹೊರಗೆ ಇನ್ನೆಷ್ಟು ನಡೆಯುತ್ತಿರಬಹುದು’ ಎಂದು ಪ್ರಶ್ನಿಸಿದರು.

‘ವಿಧಾನಸೌಧದಲ್ಲಿ ಹಣ ಸಿಕ್ಕಿದ್ದ ಬಗ್ಗೆ ವರದಿ ಮಾಡುವ ಮಾಧ್ಯಮಗಳ ಬಗ್ಗೆ ಸಚಿವರು ಬೇಜವಾಬ್ದಾರಿತನದಿಂದ ಮಾತನಾಡಿರುವುದು ಸರಿಯಲ್ಲ. ಇಷ್ಟಾದರೂ ಕ್ರಮಕೈಗೊಳ್ಳದ ಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೆ ನೀಡಿ ಮನೆಗೆ ತೆರಳಲಿ’ ಎಂದು ಒತ್ತಾಯಿಸಿದರು.

‘ಮಂತ್ರಿಗಳು ಮನಬಂದಂತೆ ಮಾಧ್ಯಮಗಳ ಬಗ್ಗೆ ಮಾತನಾಡಿದ್ದಾರೆ. 25 ಲಕ್ಷರೂಗಳ ಲಂಚವನ್ನು ಕೆಪಿಸಿಸಿ ಅಧ್ಯಕ್ಷರು ಲೆಕ್ಕಕ್ಕೆ ಇಲ್ಲ ಎನ್ನುತ್ತಾರೆ. ಇವೆಲ್ಲವನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ರೈತ, ಜನವಿರೋಧಿ ಸರ್ಕಾರವನ್ನು ವಜಾ ಮಾಡಬೇಕು. ಸಚಿವ ಪುಟ್ಟರಂಗಶೆಟ್ಟಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

‘₨ 900ಇದ್ದ ಗ್ಯಾಸ್ ಬೆಲೆಯನ್ನು ಪ್ರಧಾನಮಂತ್ರಿ ಮೋದಿಯವರು ₨ 620ಗೆ ಇಳಿಸಿ ಜನತೆಗೆ ಅನುಕೂಲ ಕಲ್ಪಿಸಿದ್ದಾರೆ. ಆದರೆ, ರಾಜ್ಯ ಸರ್ಕಾರವು ಬೆಲೆ ಏರಿಕೆ ಮಾಡಿ ಅನಾನುಕೂಲತೆ ಸೃಷ್ಠಿಸುತ್ತಿರುವುದು ಸರಿಯಲ್ಲ’ ಎಂದು ಕೆಜಿಎಫ್ ಮಾಜಿ ಶಾಸಕ ವೈ.ಸಂಪಂಗಿ ದೂರಿದರು.

‘ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಹೀನಾಯವಾಗಿ ನಡೆದುಕೊಳ್ಳುತ್ತಿದೆ. ಸಚಿವರ ಕಚೇರಿಯ ಸಿಬ್ಬಂದಿ ಬಳಿ ₨ 25 ಲಕ್ಷ ಪತ್ತೆಯಾಗಿದ್ದರೂ ಸಚಿವರು ಸರ್ವಾಧಿಕಾರಿ ಹೇಳಿಕೆ ನೀಡಿರುವುದು ಸರಿಯಲ್ಲ’ ಎಂದು ಆಕ್ರೋಶವ್ಯಕ್ತಪಡಿಸಿದರು.

‘ಆಡಳಿತ ಪಕ್ಷ ಭರವಸೆಗಳನ್ನು ಈಡೇರಿಸುತ್ತಿಲ್ಲ. ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿಗಳಾಗುತ್ತಿಲ್ಲ. ಸರ್ಕಾರ ರಚನೆಯಾಗಿ 7-8 ತಿಂಗಳು ಕಳೆದರೂ ಹೊಂದಾಣಿಕೆಯಿಲ್ಲದೆ ಕಿತ್ತಾಡುತ್ತಿದ್ದಾರೆ. ಇವೆಲ್ಲವೂ ಬದಲಾಗಿ ಜನರಿಗೆ ಅನುಕೂಲವಾಗುವ ಆಡಳಿತ ರಾಜ್ಯಕ್ಕೆ ಅಗತ್ಯವಿದೆ’ ಎಂದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಪಿ.ನಾರಾಯಣಸ್ವಾಮಿ, ಜಿಲ್ಲಾ ಘಟಕದ ಉಪಾಧ್ಯಕ್ಷೆ ಮಮತಾ, ಪದಾಧಿಕಾರಿಗಳಾದ ಸಿ.ಡಿ.ರಾಮಚಂದ್ರ, ವೆಂಕಟೇಶ್, ನಾರಾಯಣಸ್ವಾಮಿ, ವಿಜಯ್‌ಕುಮಾರ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !