ಕ್ರೌರ್ಯ ಹಿಮ್ಮೆಟ್ಟಿಸುವ ಹೋರಾಟಕ್ಕೆ ಹೊಸ ರೂಪ ಕೊಡಿ: ಕೆ.ಆರ್.ರಮೇಶ್‌ಕುಮಾರ್

7
ಎನ್.ಮುನಿಸ್ವಾಮಿ ಬದುಕು- ಬರಹ-ಹೋರಾಟ ಕುರಿತು ವಿಚಾರಗೋಷ್ಠಿ

ಕ್ರೌರ್ಯ ಹಿಮ್ಮೆಟ್ಟಿಸುವ ಹೋರಾಟಕ್ಕೆ ಹೊಸ ರೂಪ ಕೊಡಿ: ಕೆ.ಆರ್.ರಮೇಶ್‌ಕುಮಾರ್

Published:
Updated:
Prajavani

ಕೋಲಾರ: ‘ಅಂಬೇಡ್ಕರ್ ಮಾನವೀಯ ಚಿಂತನೆಗಳನ್ನು ಸೋಲಿಸಲು ಸಂವಿಧಾನದ ಹೆಸರಿನಲ್ಲಿ ನಡೆಯುತ್ತಿರುವ ಕ್ರೌರ್ಯವನ್ನು ಹಿಮ್ಮೆಟ್ಟಿಸುವ ಹೋರಾಟಕ್ಕೆ ಹೊಸ ರೂಪ ಕೊಡಬೇಕಾದ ಅಗತ್ಯವಿದೆ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇಲ್ಲಿ ಭಾನುವಾರ ಆಯೋಜಿಸಿದ್ದ ದಲಿತ ಮುಖಂಡ ಎನ್.ಮುನಿಸ್ವಾಮಿ ಬದುಕು- ಬರಹ-ಹೋರಾಟ ಕುರಿತು ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿ, ‘ಸಮಾಜದಲ್ಲಿನ ಓರೆ ಕೋರೆಗಳನ್ನು ತಿದ್ದುವ ಹೋರಾಟವನ್ನು ಗೌರವಿಸುವ ಸಂಸ್ಥೆಗಳು ನಮ್ಮ ವ್ಯವಸ್ಥೆಯಲ್ಲಿ ತೀರಾ ಕಡಿಮೆಯಾಗಿವೆ’ ಎಂದು ವಿಷಾದಿಸಿದರು.

‘ಸಂಸದೀಯ ವೇದಿಕೆಗಳ ಒಳ ಮತ್ತು ಹೊರಗೆ ಧ್ವನಿ ಇಲ್ಲದವರ ಬಗ್ಗೆ ಯಾರೂ ವಿಚಾರ ಮಾಡುತ್ತಿಲ್ಲ. ಅವರಿಗೆ ತಿಳುವಳಿಕೆ ಮೂಡಿಸುತ್ತಿಲ್ಲ. ಅವರ ಪರವಾಗಿ ನಾವೇ ತೀರ್ಮಾನ ಕೈಗೊಳ್ಳದಿದ್ದರೆ ಹೇಗೆ’ ಎಂದು ಪ್ರಶ್ನಿಸಿದರು.

‘ನ್ಯಾಯಯುತ ಸಂವಿಧಾನವನ್ನು ಅನ್ಯಾಯವಾಗಿ ಪರಿವರ್ತಿಸಲು ಶ್ರಮಿಸುತ್ತಿದ್ದೇವೆ. ಗೆಲ್ಲುವ ಧಾವಂತದಲ್ಲಿ ಸಿದ್ದಾಂತಗಳು ನೆನಪಾಗದೆ ಹೊಂದಾಣಿಕೆ ಅನಿವಾರ್ಯವಾಗುತ್ತಿದೆ. ಇಂತ ಸನ್ನಿವೇಶದಲ್ಲಿ ಹೋರಾಟಗಾರರು ಅವಶೇಷಗಳಾಗದೆ ಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕು’ ಎಂದು ಸಲಹೆ ನೀಡಿದರು.

‘ಹೋರಾಟದಲ್ಲಿ ಸಾಂದರ್ಭಿಕ, ಸ್ವಾರ್ಥ ಮತ್ತು ಸಮಾಜಕ್ಕಾಗಿ ಹೋರಾಟ. ಆದರೆ, ಎನ್.ಮುನಿಸ್ವಾಮಿಯವರ ಬದುಕು, ಬರಹ ಮತ್ತು ಹೋರಾಟ ಒಂದೇ ಆಗಿದೆ. ಅವರ ಹಾಡುಗಳು ಬೀಜ ಪ್ರಸಾರದಂತೆ ಸಮಾಜದಲ್ಲಿ ಹರಡಬೇಕಾಗಿದೆ. ಗೊತ್ತಿಲ್ಲದಂತೆ ಅವರು ಸಮಾಜಕ್ಕೆ ಕೊಟ್ಟಿರುವ ಆಸ್ತಿಯನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಹೋರಾಟಗಾರರ ಮೇಲಿದೆ’ ಎಂದು ಹೇಳಿದರು.

‘ಮೀಸಲಾತಿ ಇಲ್ಲದಿದ್ದಾಗಲೇ ಅಂಬೇಡ್ಕರ್ ಅನೇಕ ಸ್ಥಾನಮಾನಗಳನ್ನು ಗಳಿಸಿದರು. ಮಹಿಳೆಯರ ಬಗ್ಗೆ ದೊಡ್ಡ ಧ್ವನಿ ಎತ್ತಿದ್ದರು. ಆದರೆ, ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ಸಾಧ್ಯವಾಗುತ್ತಿಲ್ಲ. ಕಲ್ಪಿಸಿರುವ ಮೀಸಲಾತಿ ಸಾಗಾಗುತ್ತಿಲ್ಲ ಎಂದು ಅರಿವಿಲ್ಲದೆ ಈಗಲೂ ಹೋರಾಟ ನಡೆಸಲಾಗುತ್ತಿದೆ’ ಎಂದರು.

ಎನ್.ಮುನಿಸ್ವಾಮಿ ಬದುಕು ಹೋರಾಟ ಕುರಿತು ಮಾತನಾಡಿದ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ, ‘ನೇಗಿಲ ಉಳುಮೆಯಲ್ಲೂ ನಾಶನಾಗದೆ ಮೊಳಕೆಯೊಡೆಯುವ ಗರಿಕೆ ಹುಲ್ಲಿನಂತೆ ಚಳವಳಿ ಮರುಹುಟ್ಟು ಪಡೆದುಕೊಳ್ಳಬೇಕಾದ ಅಗತ್ಯವಿದೆ’ ಎಂದು ತಿಳಿಸಿದರು.

‘ಜಾತಿ ಮತ್ತು ಉಪಜಾತಿಗಳು ಬಲಿಯುತ್ತಿದೆ. ಯಮಗೋಳಿನ ನಡುವೆ ಮಗನ ಮದುವೆ ಎಂಬಂತೆ, ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಎನ್.ಮುನಿಸ್ವಾಮಿ ಕುರಿತ ನಡೆಯುತ್ತಿದೆ. ತಮಗಿಂತಲೂ ಪ್ರತಿಭಾವಂತರಾಗಿರುವ ಎನ್.ಮುನಿಸ್ವಾಮಿ ಸಂಪೂರ್ಣವಾಗಿ ಅರಳಿದ್ದರೆ ಸ್ಥಳೀಯವಾಗಿ ಉಳಿಯುತ್ತಿರಲಿಲ್ಲ, ಗ್ಲೋಬಲ್ ಆಗಿ ಬಿಡುತ್ತಿದ್ದರು’ ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಲಕ್ಷ್ಮೀಪತಿ ಕೋಲಾರ ಮಾತನಾಡಿ, ‘ಧರ್ಮಾಂಧತೆ ಮತ್ತು ಕೋಮುವಾದದಲ್ಲಿ ದೇಶದಲ್ಲಿ ಮನೋರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಎನ್.ಮುನಿಸ್ವಾಮಿ ತಮ್ಮನ್ನು ತಾವೇ ತೇದುಕೊಂಡು ಸಮಾಜಕ್ಕೆ ಅರಿವಿನ ಬೆಳೆಕನ್ನು ಹರಡಿಸಿದ್ದಾರೆ’ ಎಂದು ತಿಳಿಸಿದರು.

ಎನ್.ಮುನಿಸ್ವಾಮಿ ರಚಿಸಿದ ಹಾಡುಗಳ ಪದ ಪದವೂ ಹಾಡೇನವ್ವಾ ಪುಸ್ತಕವನ್ನು ಬಿಡುಗಡೆಗೊಳಿಸಿದರು.

ಕನ್ನಡ ಸಂಸ್ಕೃತಿ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಹಿರಿಯ ದಲಿತ ಮುಖಂಡ ಸಿ.ಎಂ.ಮುನಿಯಪ್ಪ, ಹ.ಮಾ.ರಾಮಚಂದ್ರ, ಗಾಯಕ ಗೊಲ್ಲಹಳ್ಳಿ ಶಿವಪ್ರಸಾದ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !