ಟೆಸ್ಟ್‌ ಕ್ರಿಕೆಟ್: ಕುಲದೀಪ್‌ಗೆ ಐದು ವಿಕೆಟ್, ಸರಣಿ ಜಯದ ಹೊಸ್ತಿಲಲ್ಲಿ ಭಾರತ

7

ಟೆಸ್ಟ್‌ ಕ್ರಿಕೆಟ್: ಕುಲದೀಪ್‌ಗೆ ಐದು ವಿಕೆಟ್, ಸರಣಿ ಜಯದ ಹೊಸ್ತಿಲಲ್ಲಿ ಭಾರತ

Published:
Updated:
Prajavani

ಸಿಡ್ನಿ: ಆಸ್ಟ್ರೇಲಿಯಾದ ನೆಲದಲ್ಲಿ ಟೆಸ್ಟ್ ಸರಣಿ ಜಯದ ಕನಸು ಕೈಗೂಡಲು ಇನ್ನೇನು ಕೆಲವೇ ಗಂಟೆಗಳಷ್ಟೇ ಉಳಿದಿವೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾರ್ಡರ್‌–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಗೆಲುವಿನ ಹಾದಿಯಿಂದ ಬಹುತೇಕ ಹೊರಬಿದ್ದಿದೆ. ‌ 

ಮೊದಲ ಇನಿಂಗ್ಸ್‌ನಲ್ಲಿ ಭಾರತದ 622 ರನ್‌ಗಳ ಉತ್ತರವಾಗಿ 300 ರನ್‌ಗಳಿಗೆ ಆಲೌಟ್ ಆದ ಆತಿಥೇಯ ತಂಡವು ಫಾಲೋ ಆನ್ ಪಡೆಯಿತು. ಇದರಿಂದಾಗಿ ಭಾನುವಾರ ಬೆಳಿಗ್ಗೆ ಎರಡನೇ ಇನಿಂಗ್ಸ್‌ ಆರಂಭಿಸಿತು.

ನಾಲ್ಕು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 6 ರನ್‌ ಗಳಿಸಿತು. ಈ ಹಂತದಲ್ಲಿ ಮಳೆ ಸುರಿದಿದ್ದರಿಂದ ದಿನದಾಟ ಸ್ಥಗಿತಗೊಳಿಸಲಾಯಿತು. ಬಾಕಿ ಚುಕ್ತಾ ಮಾಡಲು ಇನ್ನೂ 316 ರನ್‌ಗಳನ್ನು ಗಳಿಸಬೇಕು. ಆಸ್ಟ್ರೇಲಿಯಾ ತಂಡವು 1988ರಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಫಾಲೋ ಅನ್‌ ಪಡೆದಿತ್ತು. ಅದರ ನಂತರ ಈಗ ಮತ್ತೆ ನಿರಾಸೆ ಅನುಭವಿಸಿದೆ. 

ಇದರಿಂದಾಗಿ ಈ ಪಂದ್ಯದಲ್ಲಿ ಭಾರತ ಸೋಲುವುದಿಲ್ಲವೆಂಬುದು ದೃಢಫಟ್ಟಿದೆ. ಕೊನೆಯ ದಿನವಾದ ಸೋಮವಾರ ಮಳೆಯ ಆಟ ನಡೆಯದಿದ್ದರೆ ಆಸ್ಟ್ರೇಲಿಯಾದ ಹತ್ತು ವಿಕೆಟ್‌ಗಳನ್ನೂ ಕಬಳಿಸಿ ಜಯಿಸಿದರೆ 3–1ರಿಂದ ಸರಣಿಯ ಕಿರೀಟ ಮುಡಿಗೆ ಏರಬಹುದು. ಆತಿಥೇಯ ಬ್ಯಾಟ್ಸ್‌ಮನ್‌ಗಳು ತುಸು ಜಿಗುಟುತನ ತೋರಿದರೆ ಆಥವಾ ಮಳೆಯಿಂದ ದಿನದಾಟ ಅರ್ಧಕ್ಕೆ ನಿಂತರೆ ಡ್ರಾ ಆಗಬಹುದು. ಆಗಲೂ ವಿರಾಟ್ ಕೊಹ್ಲಿ ಬಳಗವು  2–1ರಿಂದ ಸರಣಿ ಜಯದ ಇತಿಹಾಸ ಬರೆಯಲಿದೆ. 1948ರಲ್ಲಿ ಲಾಲಾ ಅಮರನಾಥ್ ನಾಯಕತ್ವದ ಭಾರತ ತಂಡವು ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಡಾನ್ ಬ್ರಾಡ್ಮನ್ ಬಳಗದ ವಿರುದ್ಧ ಆಡಿತ್ತು. ಆದರೆ ಇಲ್ಲಿಯವರೆಗೂ ಸರಣಿ ಗೆದ್ದಿರಲಿಲ್ಲ.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಭಾರತ ತಂಡದ ಚೇತೇಶ್ವರ್ ಪೂಜಾರ, ರಿಷಭ್ ಪಂತ್ ಅವರ ಶತಕಗಳು, ಮಯಂಕ್ ಅಗರವಾಲ್ ಮತ್ತು ರವೀಂದ್ರ ಜಡೇಜ ಅವರ ಅರ್ಧಶತಕಗಳ ಬಲದಿಂದ ಬೃಹತ್ ಮೊತ್ತ ಗಳಿಸಿತ್ತು. ನಂತರ ಕುಲದೀಪ್‌ ಯಾದವ್‌ ಸ್ಪಿನ್ ದಾಳಿಗೆ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು ತತ್ತರಿಸಿದರು. ಆದರೆ ಭಾನುವಾರ ನಡೆದಿದ್ದು ಕೇವಲ 25.2 ಓವರ್‌ಗಳ ಆಟ ಮಾತ್ರ. 
ಊಟದ ಮೊದಲ ಅವಧಿಯು ಮಳೆಯಲ್ಲಿ ತೊಳೆದುಹೋಯಿತು. ಮಧ್ಯಾಹ್ನ 1.50ಕ್ಕೆ (ಆಸ್ಟ್ರೇಲಿಯಾ ಕಾಲಮಾನ) ಆಟ ಆರಂಭವಾದಾಗ ಭಾರತವು ಹೊಸ ಚೆಂಡಿನೊಂದಿಗೆ ದಾಳಿಗೆ ಇಳಿಯಿತು. 85ನೇ ಓವರ್‌ನಲ್ಲಿ  ಶಮಿ ಎಸೆತದಲ್ಲಿ ಪ್ಯಾಟ್ ಕಮಿನ್ಸ್‌ (25; 44ಎಸೆತ, 6 ಬೌಂಡರಿ) ಕ್ಲೀನ್‌ಬೌಲ್ಡ್‌ ಆದರು. ಮಿಷೆಲ್ ಸ್ಟಾರ್ಕ್‌ (ಔಟಾಗದೆ 29) ಸ್ವಲ್ಪಮಟ್ಟಿಗೆ ಹೋರಾಟ ತೋರಿದರು.

ಶನಿವಾರ ಮೂರು ವಿಕೆಟ್ ಗಳಿಸಿದ್ದ ಚೈನಾಮೆನ್ ಬೌಲರ್ ಕುಲದೀಪ್ ಯಾದವ್ ನೇಥನ್ ಲಯನ್ ಮತ್ತು ಜೋಶ್ ಹ್ಯಾಜಲ್‌ವುಡ್ (21 ರನ್) ಅವರ ವಿಕೆಟ್‌ಗಳನ್ನು ಕಬಳಿಸಿದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಎರಡನೇ ಬಾರಿ ಐದು ವಿಕೆಟ್‌ಗಳ ಗೊಂಚಲನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಕಾನ್ಪುರದ ಕುಲದೀಪ್‌ಗೆ ಇದು ಆರನೇ ಪಂದ್ಯ. 24 ವರ್ಷದ ಈ ಆಟಗಾರನ ಖಾತೆಯಲ್ಲಿ 25 ವಿಕೆಟ್‌ಗಳು ಇವೆ.

ಆಟಕ್ಕೆ ತಡೆ; ಮೈಕೆಲ್ ಕ್ಲಾರ್ಕ್ ಕಿಡಿ
ಭಾನುವಾರ ದಿನದಾಟದ ಎರಡನೇ ಅವಧಿಯಲ್ಲಿ ಮಳೆ ಇರಲಿಲ್ಲ. ಆದರೆ ಬೆಳಕಿನ ನೆಪವೊಡ್ಡಿ ಆಟವನ್ನು ಸ್ಥಗಿತಗೊಳಿಸಿದ್ದು ಸರಿಯಲ್ಲ. 
ಇದು ಟೆಸ್ಟ್ ಕ್ರಿಕೆಟ್‌ಗೆ ಮಾಡಿದ ಅವಮಾನ. ಕ್ರೀಡಾಂಗಣದಲ್ಲಿರುವ ಹೊನಲು ಬೆಳಕಿನ ವ್ಯವಸ್ಥೆಯನ್ನು ಬಳಸಿಕೊಳ್ಳಬೇಕಿತ್ತು ಎಂದು ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಮೈಕೆಲ್ ಕ್ಲಾರ್ಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕ್ರಿಕೆಟ್‌ ಮೈದಾನದಲ್ಲಿ ಕೋಟ್ಯಂತರ ದುಡ್ಡು ಖರ್ಚು ಮಾಡಿ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿರುತ್ತದೆ. ಪಂದ್ಯ ನೋಡಲು ಜನರು ಹಣ ಖರ್ಚು ಮಾಡಿರುತ್ತಾರೆ. ಟಿ.ವಿ. ಮತ್ತು ಪ್ರಾಯೋಜಕರು ದುಡ್ಡು ವಿನಿಯೋಗಿಸುತ್ತಾರೆ. ಅವರಿಗೆಲ್ಲ ನಿರಾಶೆಗೊಳಿಸಿದಂತಾಗಿದೆ. ಲೈಟ್‌ಗಳನ್ನು ಬೆಳಗಿಸಿ ಆಟ ಮುಂದುವರಿಸಬಹುದಿತ್ತು’ ಎಂದಿದ್ದಾರೆ. ಪಂದ್ಯದ ಅಂಪೈರ್ ಮತ್ತು ರೆಫರಿಗಳ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದಾರೆ. ಕ್ಲಾರ್ಕ್‌ ಅವರ ಹೇಳಿಕೆಗೆ ಸುನಿಲ್ ಗಾವಸ್ಕರ್ ಅವರೂ ಬೆಂಬಲ ವ್ಯಕ್ತಪಡಿಸಿದ್ದಾರೆ. 

ಆಸ್ಟ್ರೇಲಿಯಾ ತಂಡ ಆಟಕ್ಕೆ ಸಿಟ್ಟಿಗೆದ್ದ ಪಾಂಟಿಂಗ್‌
‘ಆಸ್ಟ್ರೇಲಿಯಾ ತಂಡವು ಪಂದ್ಯದಲ್ಲಿ ಗೆಲ್ಲಬೇಕು ಎಂಬ ಮನೋಭಾವದಿಂದ ಹೋರಾಡುತ್ತಿಲ್ಲ. ನೇಥನ್ ಲಯನ್  ಎಲ್‌ಬಿಡಬ್ಲ್ಯು ಆದಾಗ ಯುಡಿಆರ್‌ಎಸ್‌ ಬಳಸಿಕೊಳ್ಳಲು ಮನಸ್ಸು ಮಾಡಲಿಲ್ಲ. ಒಂದೊಮ್ಮೆ ಪಡೆದಿದ್ದರೆ ನಾಟೌಟ್‌ ಆಗಿದ್ದು ತಿಳಿಯುತ್ತಿತ್ತು. ಇದು ಸೋಲೊಪ್ಪಿಕೊಂಡ ಮನೋಭಾವ’ ಎಂದು ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ರಿಕಿ ಪಾಂಟಿಂಗ್ ಟೀಕಿಸಿದ್ದಾರೆ.

ಚಾನೆಲ್ ಸೆವೆನ್‌ಗೆ ನೀಡಿದ ಸಂದರ್ಶನದಲ್ಲಿ ಪಾಂಟಿಂಗ್ ಆಸ್ಟ್ರೇಲಿಯಾ  ಆಟಗಾರರನ್ನು ಕಟುವಾಗಿ ಟೀಕಿಸಿದ್ದಾರೆ.

‘ಲಯನ್ ಪ್ಯಾಡ್‌ಗೆ ಚೆಂಡು ಬಡಿದಾಗ ಇನ್ನೊಂದು ಬದಿಯಲ್ಲಿದ್ದ ಮೈಕೆಲ್ ಸ್ಟಾರ್ಕ್ ಅವರು ಗಮನಿಸಬೇಕಿತ್ತು. ಅಂಪೈರ್ ತೀರ್ಪಿನ ಬಗ್ಗೆ ಸಂದೇಹ ಹೊಂದಿದ್ದ ಲಯನ್ ಅವರು ಸ್ಟಾರ್ಕ್‌ಗೆ ಕೇಳಿದ್ದರು. ಆದರೆ ಸ್ಟಾರ್ಕ್ ಜಾರಿಕೊಂಡಿದ್ದು ತಪ್ಪು’ ಎಂದು ಪಾಂಟಿಂಗ್ ಹೇಳಿದ್ದಾರೆ. ಟಿವಿ ರಿಪ್ಲೇಗಳಲ್ಲಿ ಚೆಂಡಿನ ಗತಿಯು ಸ್ಟಂಪ್‌ಗಳ ಮೇಲೆ ಹಾದು ಹೋಗಿದ್ದು ಸ್ಪಷ್ಟವಾಗಿತ್ತು.

*
ತಂಡವು ಫಾಲೋ ಆನ್‌ ಅನುಭವಿಸಿದ್ದು ತೀವ್ರ ಬೇಸರ ತಂದಿದೆ. ಕೊನೆಯ ದಿನವಿಡೀ ಬ್ಯಾಟಿಂಗ್ ಮಾಡಿ ಪಂದ್ಯ ಡ್ರಾ ಮಾಡಿಕೊಳ್ಳಲು ಯತ್ನಿಸುತ್ತೇವೆ
–ಪೀಟರ್ ಹ್ಯಾಂಡ್ಸ್‌ಕಂಬ್,ಆಸ್ಟ್ರೇಲಿಯಾ ಆಟಗಾರ

*
ಈ ತಂಡವು ಅಮೋಘವಾಗಿ ಆಡಿದೆ. ಆಸ್ಟ್ರೇಲಿಯಾ ತಂಡವನ್ನು ಅವರ ನೆಲದಲ್ಲಿಯೇ ಸೋಲಿಸುವುದು ಮಹಾಸಾಧನೆ. ಅಲ್ಲಿಯ ವಾತಾವರಣದಲ್ಲಿ ಆಡುವುದು ಸರಳವಲ್ಲ.
–ದಿಲೀಪ್ ವೆಂಗಸರ್ಕಾರ್ , ಹಿರಿಯ ಕ್ರಿಕೆಟಿಗ

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !