ಭಾಷಾ ಮಾಧ್ಯಮ ವಿಚಾರದಲ್ಲಿ ಸ್ಪಷ್ಟತೆ ಅಗತ್ಯ: ಎಚ್‌ಡಿಕೆಗೆ ಸಿದ್ದರಾಮಯ್ಯ ಕಿವಿಮಾತು

7

ಭಾಷಾ ಮಾಧ್ಯಮ ವಿಚಾರದಲ್ಲಿ ಸ್ಪಷ್ಟತೆ ಅಗತ್ಯ: ಎಚ್‌ಡಿಕೆಗೆ ಸಿದ್ದರಾಮಯ್ಯ ಕಿವಿಮಾತು

Published:
Updated:
Prajavani

ಅಂಬಿಕಾತನಯದತ್ತ ಪ್ರಧಾನ ವೇದಿಕೆ (ಧಾರವಾಡ): ‘ಶಿಕ್ಷಣ ಪಡೆಯುವ ಭಾಷೆ ಮತ್ತು ಮಾಧ್ಯಮದ ಬಗೆಗೆ ನಮ್ಮಲ್ಲಿ ಸ್ಪಷ್ಟತೆ ಇರಬೇಕು. ಮಕ್ಕಳ ಜ್ಞಾನಾರ್ಜನೆಯ ದೃಷ್ಟಿಯಿಂದ ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ ಇರಬೇಕು’ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪರೋಕ್ಷವಾಗಿ ಕಿವಿಮಾತು ಹೇಳಿದರು.

ಭಾನುವಾರ ನಡೆದ 84ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ‘ಭಾಷಾ ಮಾಧ್ಯಮದ ಕುರಿತು ಗೊಂದಲ ಮೂಡಿದೆ. ಈ ಕುರಿತು ಕುಮಾರಸ್ವಾಮಿ ಅವರೊಂದಿಗೆ ಮಾತನಾಡುತ್ತೇನೆ. ಶಿಕ್ಷಣ ಭಾಷಾ ಮಾಧ್ಯಮದ ವಿಚಾರದಲ್ಲಿ ಬಹುಸಂಖ್ಯಾತ ಜನರ ಅಭಿಪ್ರಾಯಕ್ಕೆ ವಿರುದ್ಧವಾಗಿ ಹೋಗುವುದು ಸರಿಯಲ್ಲ ಎಂಬುದನ್ನು ಮನವರಿಕೆ ಮಾಡಲು ಪ್ರಯತ್ನಿಸುತ್ತೇನೆ’ ಎಂದರು.

‘ಇತ್ತೀಚಿನ ಬೆಳವಣಿಗೆಗಳ ಕುರಿತು ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲೇ ಚರ್ಚೆಯಾಗಿದೆ. ಪ್ರೊ.ಚಂದ್ರಶೇಖರ ಪಾಟೀಲರು ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ. ಸಭೆ ಕರೆಯುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಅವರು ಸಭೆ ಕರೆದಾಗ ನಮ್ಮ ನಿಲುವನ್ನು ಸ್ಪಷ್ಟವಾಗಿ ಹೇಳೋಣ’ ಎಂದು ವೇದಿಕೆಯಲ್ಲಿದ್ದ ಸಾಹಿತಿಗಳನ್ನುದ್ದೇಶಿಸಿ ಹೇಳಿದರು.

ಭಾಷೆ ಮತ್ತು ಶಿಕ್ಷಣ ಮಾಧ್ಯಮದ ವಿಚಾರದಲ್ಲಿ ಸ್ಪಷ್ಟತೆ ಅಗತ್ಯ. ಭಾಷೆಯೇ ಜ್ಞಾನ ಅಲ್ಲ. ಅದು ಜ್ಞಾನಾರ್ನೆಗೆ ಒಂದು ಸಾಧನವಷ್ಟೇ. ಮಾತೃಭಾಷಾ ಮಾಧ್ಯಮದಲ್ಲೇ ಪ್ರಾಥಮಿಕ ಶಿಕ್ಷಣ ನೀಡಿದರೆ ಮಕ್ಕಳು ಹೆಚ್ಚು ಜ್ಞಾನ ಸಂಪಾದಿಸಲು ಸಾಧ್ಯ. ಇಂಗ್ಲಿಷ್‌ನಲ್ಲಿ ಶಿಕ್ಷಣ ಪಡೆದವರಷ್ಟೇ ಬುದ್ಧಿವಂತರು ಎಂಬುದು ತಪ್ಪು ಅಭಿಪ್ರಾಯ ಎಂದರು.

2,500 ವರ್ಷಗಳ ಇತಿಹಾಸವಿರುವ ಕನ್ನಡ ಜಗತ್ತಿನ ಅತ್ಯಂತ ಹಿರಿಯ ಭಾಷೆಗಳಲ್ಲಿ ಒಂದು. ಇಂಗ್ಲಿಷ್ ಕನ್ನಡದ ನಂತರ ಹುಟ್ಟಿದ ಭಾಷೆ. ಇಂಗ್ಲಿಷ್‌ ಭಾಷೆ ಬಳಕೆಗೆ ಬರುವ ಮುನ್ನವೇ ಕನ್ನಡದಲ್ಲಿ ಕಾವ್ಯಮೀಮಾಂಸೆ, ವ್ಯಾಕರಣಶಾಸ್ತ್ರ, ಅರ್ಥಶಾಸ್ತ್ರ, ಗಣಿತಶಾಸ್ತ್ರ, ತರ್ಕಶಾಸ್ತ್ರಗಳು ಇದ್ದವು. ಕನ್ನಡ ಭಾಷೆ ಇಂಗ್ಲಿಷ್‌ಗಿಂತ ಕೆಳಕ್ಕೆ ಇದೆ ಎಂಬ ಭಾವನೆ ಬೇಡ ಎಂದು ಹೇಳಿದರು.

‘ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯವುದು ಉಸಿರಾಟದಷ್ಟೇ ಮುಖ್ಯ ಎಂದು ಸ್ವಾಮಿ ವಿವೇಕಾನಂದ ಪ್ರತಿಪಾದಿಸಿದ್ದರು. ವಿವೇಕಾನಂದ, ಮಹಾತ್ಮ ಗಾಂಧಿ, ಕುವೆಂಪು, ವಿಶ್ವೇಶ್ವರಯ್ಯ ಎಲ್ಲರೂ ಮಾತೃಭಾಷೆಯಲ್ಲೇ ಶಿಕ್ಷಣ ಪಡೆದವರು. ಕನ್ನಡದಲ್ಲಿ ಕಲಿತ ಪ್ರೊ.ಸಿ.ಎನ್‌.ಆರ್‌.ರಾವ್‌ ಜಗತ್‌ಪ್ರಸಿದ್ಧ ವಿಜ್ಞಾನಿ ಆಗಿಲ್ಲವೇ’ ಎಂದು ಪ್ರಶ್ನಿಸಿದರು.

ಸಂವಿಧಾನ ತಿದ್ದುಪಡಿಗೆ ಆಗ್ರಹ: ‘ಪ್ರಾದೇಶಿಕ ಭಾಷೆಗಳ ರಕ್ಷಣೆಗಾಗಿ ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಬೇಕೆಂಬ ಚಂದ್ರಶೇಖರ ಕಂಬಾರರ ನಿಲುವು ಸರಿಯಾಗಿದೆ. ಭಾಷಾ ಮಾಧ್ಯಮಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ತೀರ್ಪು ಬಂದಾಗ ನಾನು ಈ ವಿಚಾರವನ್ನು ಪ್ರಧಾನಿಯವರ ಗಮನಕ್ಕೆ ತಂದಿದ್ದೆ. ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿದೆ. ಶಿಕ್ಷಣದ ರಾಷ್ಟ್ರೀಕರಣ ಮಾಡಬೇಕಾದರೆ ಕೇಂದ್ರ ಸರ್ಕಾರವು ರಾಜ್ಯಗಳ ಸಹಮತ ಪಡೆದು ಸಂವಿಧಾನಕ್ಕೆ ತಿದ್ದುಪಡಿ ತರಬೇಕು’ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಹಿಂದೆಯೇ ಈ ಒತ್ತಾಯ ಮಾಡಲಾಗಿತ್ತು. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಮನವಿ ಮಾಡಲಾಗಿತ್ತು. ಆದರೆ, ಪ್ರಧಾನಿ ಸ್ಪಂದಿಸಲಿಲ್ಲ. ಪ್ರಾಥಮಿಕ ಶಿಕ್ಷಣದ ರಾಷ್ಟ್ರೀಕರಣವಾದರೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡುವುದನ್ನು ಕಡ್ಡಾಯ ಮಾಡಬಹುದು. ಆಗ ಪ್ರಾದೇಶಿಕ ಭಾಷೆಗಳನ್ನು ರಕ್ಷಿಸಬಹುದು. ಈ ವಿಚಾರದಲ್ಲಿ ಮತ್ತೊಮ್ಮೆ ಕೇಂದ್ರದ ಮೇಲೆ ಒತ್ತಡ ತರಲಾಗುವುದು ಎಂದರು.

‘ನಾನು ಅಧಿಕಾರದಲ್ಲಿದ್ದ ಎಲ್ಲ ಸಂದರ್ಭಗಳಲ್ಲಿ ನಾಡಿನ ನೆಲ, ಜಲ ಮತ್ತು ಭಾಷೆಯ ರಕ್ಷಣೆಗೆ ಬದ್ಧನಾಗಿ ಕೆಲಸ ಮಾಡಿದ್ದೇನೆ. ಮುಂದೆಯೂ ಯಾವುದೇ ಅದೇ ಬದ್ಧತೆಯಿಂದ ಕೆಲಸ ಮಾಡುತ್ತೇನೆ. ಕನ್ನಡಿಗರಾಗಿ ನಾವು ಭಾಷೆಯನ್ನು ಪ್ರೀತಿಸಿ, ಗೌರವಿಸಬೇಕು. ನಮ್ಮಲ್ಲಿ ನಿರಭಿಮಾನ ಮೂಡಿದರೆ ಪರ ಭಾಷಿಕರಿಂದ ನಮ್ಮ ಭಾಷೆಗೆ ಗೌರವ ದೊರೆಯುವುದಿಲ್ಲ’ ಎಂದು ಹೇಳಿದರು.

ರಾಜಕಾರಣಿಗಳ ಕುಚೋದ್ಯ

‘ಪ್ರತ್ಯೇಕತೆಯ ಕೂಗು ಜನರಿಂದ ಯಾವತ್ತೂ ಕೇಳಿಬಂದಿಲ್ಲ. ಕೆಲವು ಅತೃಪ್ತ ರಾಜಕಾರಣಿಗಳು ಈ ಕುಚೋದ್ಯದ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ತಲೆಕೆಡಿಸಿಕೊಳ್ಳದೇ ನಾವು ಅಖಂಡ ಕರ್ನಾಟಕದ ಅಭಿವೃದ್ಧಿ ಮಾಡಬೇಕು’ ಎಂದು ಸಿದ್ದರಾಮಯ್ಯ ಹೇಳಿದರು.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !