ಜಯದ ಲಯ ಮುಂದುವರಿಸುವತ್ತ ಪಾಂಡೆ ಬಳಗದ ಚಿತ್ತ

7
ರಣಜಿ ಕ್ರಿಕೆಟ್: ವಡೋದರದಲ್ಲಿ ಇಂದಿನಿಂದ ಕರ್ನಾಟಕ–ಬರೋಡಾ ಹಣಾಹಣಿ

ಜಯದ ಲಯ ಮುಂದುವರಿಸುವತ್ತ ಪಾಂಡೆ ಬಳಗದ ಚಿತ್ತ

Published:
Updated:
Prajavani

ವಡೋದರ: ಈ ಬಾರಿಯ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಎಂಟರ ಘಟ್ಟದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಕರ್ನಾಟಕ ತಂಡವು ಇನ್ನೊಂದು ಪುಟ್ಟ ಹೆಜ್ಜೆ ಇಡಬೇಕಿದೆ.

ಸೋಮವಾರ ಇಲ್ಲಿಯ ಮೋತಿಭಾಗ್ ಕ್ರೀಡಾಂಗಣದಲ್ಲಿ ನಡೆಯಲಿರುವ ಎಲೀಟ್ ಗುಂಪಿನ ಪಂದ್ಯದಲ್ಲಿ ಗೆಲುವಿನದ ಛಲದೊಂದಿಗೆ ಮನೀಷ್ ಪಾಂಡೆ ಬಳಗವು ಕಣಕ್ಕಿಳಿಯಲಿದೆ. ಹೋದ ವಾರ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಛತ್ತೀಸಗಡ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಗೆದ್ದಿದ್ದ ಕರ್ನಾಟಕ ತಂಡವು ಎಲೀಟ್ ಗುಂಪಿನಲ್ಲಿ ಒಟ್ಟು 27 ಅಂಕಗಳನ್ನು ಗಳಿಸಿದೆ. ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದೆ. ಮೊದಲ ಸ್ಥಾನದಲ್ಲಿ ವಿದರ್ಭ ಇದೆ.  ಈ ವರ್ಷದ ನಿಯಮದ ಪ್ರಕಾರ  ಈ ಗುಂಪಿನಿಂದ ಐದು ಅಗ್ರ ಐದು ತಂಡಗಳು ಮಾತ್ರ ಕ್ವಾರ್ಟರ್‌ಫೈನಲ್‌ಗೆ ಪ್ರವೇಶ ಪಡೆಯಲಿವೆ. ಗುಜರಾತ್ ಮತ್ತು ಸೌರಾಷ್ಟ್ರ ತಂಡಗಳು ತಲಾ 26  ಅಂಕಗಳನ್ನು ಗಳಿಸಿವೆ. ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. 24 ಅಂಕಗಳೊಂದಿಗೆ ಮಧ್ಯಪ್ರದೇಶವು ಐದನೇ ಸ್ಥಾನದಲ್ಲಿದೆ. ಗುಜರಾತ್ ತನ್ನ ಪಾಲಿನ ಎಂಟು ಪಂದ್ಯಗಳನ್ನು ಆಡಿದೆ.

ಆದರೆ ಉಳಿದ ತಂಡಗಳು ಎಂಟನೇ ಸುತ್ತಿನಲ್ಲಿ ಆಡುತ್ತಿವೆ. ಆದ್ದರಿಂದ ನಾಕೌಟ್ ಪ್ರವೇಶಕ್ಕೆ ತುರುಸಿನ ಸ್ಪರ್ಧೆ ಏರ್ಪಟ್ಟಿವೆ. 20 ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿರುವ ಬರೋಡ ತಂಡವು ಮನೀಷ್ ಬಳಗವನ್ನು ಎದುರಿಸಲಿದೆ.  ಎಂಟರ ಘಟ್ಟದ ಆಸೆಯನ್ನು ಜೀವಂತವಾಗಿ ಉಳಿಸಿಕೊಳ್ಳಲು ಬೋನಸ್ ಅಂಕದೊಂದಿಗೆ ಗೆಲುವು ಸಾಧಿಸುವ ಒತ್ತಡದಲ್ಲಿದೆ. ಆದರೆ ಕರ್ನಾಟಕ ತಂಡವು ಪಂದ್ಯದಲ್ಲಿ ಗೆದ್ದರೆ ಪಾಯಿಂಟ್ ಪಟ್ಟಿಯ ಅಗ್ರಸ್ಥಾನಕ್ಕೆ ಏರುವ ಅವಕಾಶ ಇದೆ. ಕೊನೆ ಪಕ್ಷ ಇನಿಂಗ್ಸ್‌ ಮುನ್ನಡೆಯೊಂದಿಗೆ ಡ್ರಾ ಮಾಡಿಕೊಂಡು ಮೂರು ಅಂಕ ಗಳಿಸಿದರೂ ಎಂಟರ ಘಟ್ಟದ ಸ್ಥಾನ ಭದ್ರವಾಗಲಿದೆ.

ಯುವ ಆಟಗಾರರ ಗಮ್ಮತ್ತು: ಈ ಬಾರಿಯ ಟೂರ್ನಿಯಲ್ಲಿ ಈಗಾಗಲೇ ಏಳು ಆಟಗಾರರು ಪದಾರ್ಪಣೆ ಮಾಡಿದ್ದಾರೆ. ಬಹುತೇಕ ಎಲ್ಲರೂ ಉತ್ತಮವಾಗಿ ಆಡಿದ್ದಾರೆ. ಕೆ.ವಿ. ಸಿದ್ಧಾರ್ಥ್ ಎರಡು ಶತಕ ಗಳಿಸಿ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಮೂರು ಶತಕ ಬಾರಿಸಿರುವ ಡೇಗಾ ನಿಶ್ಚಲ್,  ಆಲೂರು ಪಂದ್ಯದಲ್ಲಿ ಶತಕ ಬಾರಿಸಿದ ಮನೀಷ್ ಪಾಂಡೆ, ಆಲ್‌ರೌಂಡ್ ಆಟವಾಡುತ್ತಿರುವ ಆರ್. ವಿನಯಕುಮಾರ್ ಉತ್ತಮ ಲಯದಲ್ಲಿದ್ದಾರೆ. ಈ ಖುತುವಿನಲ್ಲಿ ಮೂರು ಬಾರಿ ಐದು ವಿಕೆಟ್‌ಗಳ ಗೊಂಚಲು ಗಳಿಸಿರುವ ಬೆಳಗಾವಿಯ ರೋನಿತ್ ಮೋರೆ, ಮಧ್ಯಮವೇಗಿ ಅಭಿಮನ್ಯು ಮಿಥುನ್ ಅವರು ಫಾರ್ಮ್‌ನಲ್ಲಿದ್ದಾರೆ. ಕೃಷ್ಣಪ್ಪ ಗೌತಮ್ ಅವರು ಗಾಯಗೊಂಡಿರುವುದರಿಂದ ಆಡುವುದು ಅನುಮಾನ. ಅವರ ಬದಲಿಗೆ ಹೊಸ ಹುಡುಗ ಶುಭಾಂಗ್ ಹೆಗ್ಡೆಗೆ ಸ್ಥಾನ ನೀಡಲಾಗಿದೆ. ಅವರಿಗ ಪದಾರ್ಪಣೆ ಅವಕಾಶ ಸಿಗಬಹುದು. ಇಲ್ಲದಿದ್ದರೆ ಜೆ.ಸುಚಿತ್ ಕಣಕ್ಕಿಳಿಯಬಹುದು.

ಮೊದಲ ಪಂದ್ಯದಲ್ಲಿ ಶತಕ ಬಾರಿಸಿ ಸುದ್ದಿ ಮಾಡಿದ್ದ ವಿಕೆಟ್‌ ಕೀಪರ್ ಬಿ.ಆರ್. ಶರತ್ ಅವರು ನಂತರದ ನಾಲ್ಕು ಪಂದ್ಯಗಳಲ್ಲಿ ಗಮನ ಸೆಳೆಯುವಂತಹ ಅಟವಾಡಿರಲಿಲ್ಲ. ಆದ್ದರಿಂದ ಕಳೆದ ಮೂರು ಪಂದ್ಯಗಳಲ್ಲಿ ಶರತ್ ಶ್ರೀನಿವಾಸ  ಅವಕಾಶ ಪಡೆದಿದ್ದರು. ಆದರೆ ಅವರು ಬ್ಯಾಟಿಂಗ್‌ನಲ್ಲಿ ದೊಡ್ಡ ಮೊತ್ತ ಗಳಿಸಿಲ್ಲ. ಇದರಿಂದಾಗಿ ಬಿ.ಆರ್.ಶರತ್ ಮರಳಿ ಗ್ಲೌಸ್‌ ಧರಿಸಿದರೂ ಅಚ್ಚರಿಯೇನಿಲ್ಲ. ಅನುಭವಿ ಆಟಗಾರರಾದ ಕರುಣ್ ನಾಯರ್ ಮತ್ತು ಆರ್. ಸಮರ್ಥ್ ತಂಡಕ್ಕೆ ಮರಳಿದ್ದಾರೆ. ಅವರಿಗೂ ಇಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಅವಕಾಶ ಸಿಗಬಹುದು.

ತಂಡಗಳು ಇಂತಿವೆ
ಕರ್ನಾಟಕ:
ಮನೀಷ್ ಪಾಂಡೆ (ನಾಯಕ), ಕರುಣ್ ನಾಯರ್, ಡಿ. ನಿಶ್ಚಲ್,ಕೆ.ವಿ. ಸಿದ್ಧಾರ್ಥ್, ಆರ್. ವಿನಯಕುಮಾರ್, ಅಭಿಮನ್ಯು ಮಿಥುನ್, ಜೆ.ಸುಚಿತ್, ಆರ್. ಸಮರ್ಥ್, ರೋನಿತ್ ಮೋರೆ, ಶರತ್ ಶ್ರೀನಿವಾಸ್, ಎಚ್.ಎಸ್. ಶರತ್, ಎಂ. ಪ್ರಸಿದ್ಧಕೃಷ್ಣ, ಶುಭಾಂಗ್ ಹೆಗ್ಡೆ, ಶ್ರೇಯಸ್ ಗೋಪಾಲ್, ಪವನ್ ದೇಶಪಾಂಡೆ. ದೇವದತ್ತ ಪಡಿಕ್ಕಲ್.

ಬರೋಡಾ: ಕೇದಾರ್ ದೇವಧರ್ (ನಾಯಕ), ಮಿತೇಶ್ ಪಟೇಲ್ (ವಿಕೆಟ್‌ಕೀಪರ್), ಆದಿತ್ಯ ವಾಘ್ಮೋಡೆ, ವಿಷ್ಣು ಸೋಳಂಕಿ, ದೀಪಕ್ ಹೂಡಾ, ಕೃಣಾಲ್ ಪಾಂಡ್ಯ, ಯೂಸುಫ್ ಪಠಾಣ್, ಅತಿಥ್ ಶೇಠ್, ಸೊಯಬ್ ತೈ, ಭಾರ್ಗವ್ ಭಟ್, ಲಕ್ಮನ್ ಮೆರಿವಾಲಾ, ಸಾಗರ್ ಮಂಗಳೂರಕರ್, ಬಾಬಾಶಫಿ ಪಠಾಣ್, ಪ್ರತ್ಯುಷ್ ಕುಮಾರ್, ಪಿನಾಲ್ ಶಾ, ಸ್ವಪ್ನಿಲ್ ಸಿಂಗ್, ರಿಷಿ ಅರೋತೆ, ಶಿವಾಲಿಕ್ ಶರ್ಮಾ.

ಪಂದ್ಯ ಆರಂಭ: ಬೆಳಿಗ್ಗೆ 9.30
ಸ್ಥಳ; ಮೋತಿಭಾಗ್ ಕ್ರೀಡಾಂಗಣ, ವಡೋದರ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !