ಸಮರೋಪಾದಿಯಲ್ಲಿ ಬರ ಎದುರಿಸಲು ಸಿದ್ಧರಾಗಿ

7
ತಾಲ್ಲೂಕು ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಿಡಿಒಗಳಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ಸಲಹೆ

ಸಮರೋಪಾದಿಯಲ್ಲಿ ಬರ ಎದುರಿಸಲು ಸಿದ್ಧರಾಗಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ಜಿಲ್ಲೆಯಲ್ಲಿ ತಲೆದೋರಿರುವ ಬರ ಪರಿಸ್ಥಿತಿ ಎದುರಿಸಲು ನಮ್ಮಲ್ಲಿ ಹಣದ ಕೊರತೆ ಇಲ್ಲ. ಆದ್ದರಿಂದ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಬರವನ್ನು ಸಮರೋಪಾದಿಯಲ್ಲಿ ಎದುರಿಸಲು ಸಿದ್ಧರಾಗಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ತಿಳಿಸಿದರು.

ತಾಲ್ಲೂಕು ಪಂಚಾಯಿತಿಯಲ್ಲಿ ಸೋಮವಾರ ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಸದ್ಯ 21 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಆ ಪೈಕಿ 12 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮುಖಾಂತರ ನೀರು ಒದಗಿಸುತ್ತಿದ್ದೇವೆ ಹಾಗೂ 9 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ’ ಎಂದು ಹೇಳಿದರು.

‘ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ 20 ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಸಲು ಈಗಾಗಲೇ ಕ್ರಿಯಾ ಯೋಜನೆ ರೂಪಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ನಮ್ಮಲ್ಲಿ ಸಾಕಷ್ಟು ಹಣ ಇದೆ. ಆದ್ದರಿಂದ ಅಧಿಕಾರಿಗಳು ಆದ್ಯತೆ ಮೆರೆಗೆ ಕುಡಿಯುವ ನೀರು, ಮೇವು ಕೊರತೆಯಾಗದಂತೆ ಒದಗಿಸುವ ಕೆಲಸ ಮಾಡಬೇಕು’ ಎಂದು ಸೂಚಿಸಿದರು.

‘ಮುಂದಿನ ಮೂರು ತಿಂಗಳು ಕುಡಿಯುವ ನೀರಿನ ಪರಿಸ್ಥಿತಿ ಗಂಭೀರವಾಗಬಹುದು. ಆದ್ದರಿಂದ ಗ್ರಾಮ ಪಂಚಾಯಿತಿಯಲ್ಲಿ ಕುಡಿಯುವ ನೀರಿಗೆ ಸಾಧ್ಯವಾದಷ್ಟು ಹೆಚ್ಚಿನ ಹಣ ಇಟ್ಟುಕೊಳ್ಳಿ. ಕುಡಿಯುವ ನೀರು ಪೂರೈಸುವ ಟ್ಯಾಂಕರ್‌ಗಳ ಬಿಲ್‌ಗಳನ್ನು 15 ದಿನಗಳ ಒಳಗಾಗಿ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಬೇಕು. ಟ್ಯಾಂಕರ್‌ ನೀರು ಪೂರೈಕೆ ವಿಚಾರದಲ್ಲಿ ಅಕ್ರಮಗಳು ನಡೆದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆ ಮಾಡಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಈಗಾಗಲೇ ಕೊರೆಸಿರುವ ಕೊಳವೆ ಬಾವಿಗಳಿಗಳಿಗೆ ಅತೀ ಶೀಘ್ರವಾಗಿ ಪೈಪ್‌, ಮೋಟರ್‌ ಅಳವಡಿಸುವ ಕೆಲಸಗಳಾಗಬೇಕು. ತಾಲ್ಲೂಕಿನ ತಿಪ್ಪೇನಹಳ್ಳಿ, ಅಂಕಣಗೊಂದಿ, ಮೋಟ್ಲೂರು, ನಲ್ಲಕದಿರೇನಹಳ್ಳಿ, ದಿನ್ನೇಹೊಸಹಳ್ಳಿ ಸೇರಿದಂತೆ ಆರು ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿಯಲ್ಲಿ ಒಂದು ತಿಂಗಳ ಒಳಗಾಗಿ ನೀರು ಒದಗಿಸಲಾಗುತ್ತದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗುರುದತ್ ಹೆಗಡೆ ಮಾತನಾಡಿ, ‘ಯಾವ ಗ್ರಾಮದಲ್ಲಿ, ಯಾವ ಕಾಮಗಾರಿ ಮಾಡಲಾಗಿದೆ ಎಷ್ಟು ಹಣ ಖರ್ಚು ಮಾಡಲಾಗಿದೆ ಎಂಬ ಬಗ್ಗೆ ಅಧಿಕಾರಿಗಳು ದಾಖಲಾತಿ ಇಟ್ಟುಕೊಳ್ಳಬೇಕು. ನಾವು ಕೇಳಿದಾಕ್ಷಣ ಅವುಗಳನ್ನು ಒದಗಿಸಬೇಕು. ಮಾರ್ಚ್ ಒಳಗೆ ಬಾಕಿ ಇರುವ ಎಲ್ಲಾ ಕಾಮಗಾರಿ ಮುಗಿಸಬೇಕು’ ಎಂದು ಸೂಚಿಸಿದರು.

‘ಹೊಸದಾಗಿ ಕೊರೆಯಿಸಿದ ಕೊಳವೆ ಬಾವಿಗಳಿಂದ ಸಾರ್ವಜನಿಕರಿಗೆ ನೇರವಾಗಿ ನೀರು ಪೂರೈಕೆ ಮಾಡಬಾರದು. ಮೊದಲು ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿ, ಕುಡಿಯಲು ಯೋಗ್ಯವಿದೆ ಎಂದು ವರದಿ ನೀಡಿದ ಬಳಿಕವಷ್ಟೇ ನೀರು ಸರಬರಾಜು ಮಾಡಬೇಕು. 90 ದಿನಗಳ ಒಳಗೆ ಮನೆ ನಿರ್ಮಾಣ ಕಾಮಗಾರಿ ಆರಂಭಿಸಿದ ವಿವಿಧ ವಸತಿ ಯೋಜನೆಗಳ ಅಡಿ ಆಯ್ಕೆಯಾದ ಫಲಾನುಭವಿಗಳು ಯೋಜನೆಯಿಂದ ಕೈಬಿಡಿ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಸಿ .ರಾಜಾಕಾಂತ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಪಿ.ಸಂಜೀವಪ್ಪ, ನರೇಗಾ ಯೋಜನೆ ಸಹಾಯಕ ನಿರ್ದೇಶಕ ಮುನಿರಾಜು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !