ಶೈತ್ಯಾಗಾರ ಆರಂಭದ ಕನಸಿಗೆ ಜೀವ

7
ಜಿಲ್ಲೆಯ ಟೊಮೆಟೊ ಬೆಳೆಗಾರರ ಬಹು ವರ್ಷದ ಬೇಡಿಕೆ

ಶೈತ್ಯಾಗಾರ ಆರಂಭದ ಕನಸಿಗೆ ಜೀವ

Published:
Updated:
Prajavani

ಕೋಲಾರ: ಜಿಲ್ಲೆಯ ಟೊಮೆಟೊ ಬೆಳೆಗಾರರ ಬಹು ವರ್ಷಗಳ ಬೇಡಿಕೆಯಾದ ಶೈತ್ಯಾಗಾರ ಆರಂಭದ ಕನಸಿಗೆ ಜೀವ ಬಂದಿದ್ದು, ಕೇಂದ್ರ ಸರ್ಕಾರವು ‘ಆಪರೇಷನ್ ಗ್ರೀನ್ಸ್‌’ ಯೋಜನೆಯಡಿ ಶೈತ್ಯಾಗಾರ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಲು ಮುಂದಾಗಿದೆ.

ಕೇಂದ್ರ ಸರ್ಕಾರವು ಟೊಮೆಟೊ, ಈರುಳ್ಳಿ ಹಾಗೂ ಆಲೂಗಡ್ಡೆ ಬೆಳೆಗಾರರ ಹಿತರಕ್ಷಣೆಗಾಗಿ ಹಿಂದಿನ ವರ್ಷದ ಬಜೆಟ್‌ನಲ್ಲಿ ಆಪರೇಷನ್‌ ಗ್ರೀನ್ಸ್‌ ಯೋಜನೆ ಘೋಷಣೆ ಮಾಡಿತ್ತು. ಕೊಯ್ಲಿನ ನಂತರ ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆಯು ಬೇಗನೆ ಕೊಳೆತು ರೈತರಿಗೆ ನಷ್ಟವಾಗುವುದನ್ನು ತಪ್ಪಿಸಲು ಕೇಂದ್ರವು ಶೈತ್ಯಾಗಾರ ಆರಂಭಕ್ಕೆ ಚಿಂತನೆ ನಡೆಸಿತ್ತು.

ಮಹತ್ವಾಕಾಂಕ್ಷೆಯ ಆಪರೇಷನ್‌ ಗ್ರೀನ್ಸ್‌ ಯೋಜನೆಗಾಗಿ ಕೇಂದ್ರವು ದೇಶದ 8 ರಾಜ್ಯಗಳಿಗೆ ₹ 500 ಕೋಟಿ ಮೀಸಲಿಟ್ಟಿದ್ದು, ಈ ಪೈಕಿ ಕರ್ನಾಟಕವೂ ಸೇರಿದೆ. ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಲೂಗಡ್ಡೆ ಬೆಲೆಯುವ ಹಾಸನ, ಈರುಳ್ಳಿ ಹೆಚ್ಚಾಗಿ ಬೆಳೆಯುವ ಬಳ್ಳಾರಿ ಮತ್ತು ಟೊಮೆಟೊ ಬೆಳೆಯುವ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಶೈತ್ಯಾಗಾರ ಆರಂಭಕ್ಕೆ ಸಿದ್ಧತೆ ನಡೆದಿದೆ.

ರಾಜ್ಯದಲ್ಲಿ ಅತಿ ಹೆಚ್ಚು ಟೊಮೆಟೊ ಬೆಳೆಯುವ ಜಿಲ್ಲೆಗಳ ಪೈಕಿ ಕೋಲಾರ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಸುಮಾರು 9 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತಿದ್ದು, 40 ಸಾವಿರ ಮಂದಿ ಟೊಮೆಟೊ ಬೆಳೆಗಾರರಿದ್ದಾರೆ.

ಸ್ಥಳೀಯ ಮಾರುಕಟ್ಟೆಗಳಲ್ಲಿ ವಾರ್ಷಿಕ ಸುಮಾರು ₹ 200 ಕೋಟಿ ಮೊತ್ತದ ಟೊಮೆಟೊ ವಹಿವಾಟು ನಡೆಯತ್ತದೆ. ಜಿಲ್ಲೆಯಿಂದ ರಾಜಸ್ತಾನ, ಕೇರಳ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ದೆಹಲಿ, ಜಾರ್ಖಂಡ್‌, ಒಡಿಶಾ, ಬಿಹಾರ, ಮಧ್ಯಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್‌, ಮಹಾರಾಷ್ಟ್ರಕ್ಕೆ ಪ್ರತಿನಿತ್ಯ ಟೊಮೆಟೊ ಪೂರೈಕೆಯಾಗುತ್ತದೆ. ಅಲ್ಲದೇ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಚೀನಾ ದೇಶಕ್ಕೂ ರಫ್ತಾಗುತ್ತದೆ.

ದೊಡ್ಡ ಸವಾಲು: ಬೆಲೆ ಕುಸಿತ ಹಾಗೂ ಹೆಚ್ಚಿನ ಫಸಲು ಬಂದ ಸಂದರ್ಭದಲ್ಲಿ ಟೊಮೆಟೊ ಬೆಳೆಗಾರರು ನಷ್ಟ ಅನುಭವಿಸುವುದು ಸಾಮಾನ್ಯವಾಗಿದೆ. ಬೇಗನೆ ಕೊಳೆತು ಹೋಗುವ ಟೊಮೆಟೊ ರಕ್ಷಿಸುವುದು ರೈತರಿಗೆ ನಿಜಕ್ಕೂ ದೊಡ್ಡ ಸವಾಲು.

ಈ ಹಿನ್ನೆಲೆಯಲ್ಲಿ ಟೊಮೆಟೊ ಕೆಡದಂತೆ ಹೆಚ್ಚಿನ ದಿನಗಳವರೆಗೆ ಸಂರಕ್ಷಿಸಲು ಶೈತ್ಯಾಗಾರ ಆರಂಭಿಸಬೇಕು ಎಂಬುದು ರೈತರ ಒತ್ತಾಯವಾಗಿತ್ತು. ಜತೆಗೆ ಟೊಮೆಟೊ ಹಣ್ಣಿನಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ಉತ್ಪಾದಿಸಬೇಕೆಂಬ ಕೂಗು ಬಲವಾಗಿತ್ತು. ಇದಕ್ಕೆ ಪೂರಕವಾಗಿ ಕೇಂದ್ರವು ‘ರೈತ ಉತ್ಪಾದಕರ ಸಂಸ್ಥೆ’ (ಎಫ್‌ಪಿಒ) ರಚನೆ, ಆಧುನಿಕ ತಾಂತ್ರಿಕತೆ ಅಳವಡಿಕೆ, ಕೊಯ್ಲೋತ್ತರ ನಿರ್ವಹಣೆ, ಮೌಲ್ಯವರ್ಧನೆ, ಮಾರುಕಟ್ಟೆ ಹಾಗೂ ರಫ್ತು ಕ್ಷೇತ್ರಕ್ಕೆ ಉತ್ತೇಜನ ನೀಡಲು ಮುಂದಾಗಿದೆ.

3 ಕಡೆ ಶೈತ್ಯಾಗಾರ: ಜಿಲ್ಲೆಯ ಶ್ರೀನಿವಾಸಪುರ ಎಪಿಎಂಸಿ ಬಳಿ, ಕೋಲಾರ ತಾಲ್ಲೂಕಿನ ಹೋಳೂರು ಮತ್ತು ಮಾಲೂರು ತಾಲ್ಲೂಕಿನ ರಾಜೇನಹಳ್ಳಿಯಲ್ಲಿ ಶೈತ್ಯಾಗಾರ ನಿರ್ಮಿಸಲು ಯೋಜನೆ ಸಿದ್ಧವಾಗಿದೆ. ಸನ್‌ಸಿಪ್‌ ಪ್ರೈವೇಟ್‌ ಲಿಮಿಟೆಡ್‌, ಹೋಳೂರು ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆ ಮತ್ತು ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ರೈತ ಉತ್ಪಾದಕರ ಸಂಸ್ಥೆಯು ಶೈತ್ಯಾಗಾರ ನಿರ್ಮಾಣಕ್ಕೆ ಬಂಡವಾಳ ಹೂಡಲು ಮುಂದೆ ಬಂದಿದ್ದು, ಕೇಂದ್ರದ ಆಹಾರ ಸಂಸ್ಕರಣಾ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿವೆ.

ಒಟ್ಟಾರೆ 3 ಶೈತ್ಯಾಗಾರಗಳಿಗೆ ಸುಮಾರು ₹ 35.14 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. 14 ತಿಂಗಳಲ್ಲಿ ಶೈತ್ಯಾಗಾರ ನಿರ್ಮಿಸುವ ಗುರಿ ಇದ್ದು, ಕೇಂದ್ರವು ಖಾಸಗಿ ಸಹಭಾಗಿತ್ವದ ಶೈತ್ಯಾಗಾರಕ್ಕೆ ಶೇ 50 ಮತ್ತು ರೈತ ಉತ್ಪಾದಕ ಸಂಸ್ಥೆಯ ಸಹಭಾಗಿತ್ವದ ಘಟಕಕ್ಕೆ ಶೇ 30ರಷ್ಟು ಹಣಕಾಸು ನೆರವು ನೀಡಲಿದೆ. 4 ಕಂತುಗಳಲ್ಲಿ ಸಹಾಯಧನ ಬಿಡುಗಡೆಯಲಾಗಿದ್ದು. ಶೈತ್ಯಾಗಾರ ಆರಂಭಕ್ಕೆ ಚಾಲನೆ ದೊರೆತಿರುವುದು ಟೊಮೆಟೊ ಬೆಳೆಗಾರರಲ್ಲಿ ಸಂತಸ ಮೂಡಿಸಿದೆ.

**
ತಾಲ್ಲೂಕುವಾರು ಟೊಮೆಟೊ ಬೆಳೆ ವಿಸ್ತೀರ್ಣ (ಹೆಕ್ಟೇರ್‌ನಲ್ಲಿ)
ತಾಲ್ಲೂಕು             ವಿಸ್ತೀರ್ಣ
ಬಂಗಾರಪೇಟೆ          739
ಕೆಜಿಎಫ್‌               493
ಕೋಲಾರ             2,244
ಮಾಲೂರು            1,152
ಮುಳಬಾಗಿಲು         2,731
ಶ್ರೀನಿವಾಸಪುರ        1,150

ಅಂಕಿ ಅಂಶ.....
* 15 ಸಾವಿರ ಮಂದಿ ಟೊಮೆಟೊ ಬೆಳೆಗಾರರು
* 9 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಟೊಮೆಟೊ ಬೆಳೆ
* ₹ 200 ಕೋಟಿ ವಾರ್ಷಿಕ ಟೊಮೆಟೊ ವಹಿವಾಟು
* ₹ 35.14 ಕೋಟಿ ಶೈತ್ಯಾಗಾರಗಳ ನಿರ್ಮಾಣ ವೆಚ್ಚ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !