ಪ್ರತಿಯೊಬ್ಬರೂ ಸಂವಿಧಾನ ಅರ್ಥ ಮಾಡಿಕೊಳ್ಳಿ: ಎಚ್.ಎನ್.ನಾಗಮೋಹನ್ ದಾಸ್ ಸಲಹೆ

7
‘ಸಂವಿಧಾನ ಓದು ಅಭಿಯಾನ’ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ

ಪ್ರತಿಯೊಬ್ಬರೂ ಸಂವಿಧಾನ ಅರ್ಥ ಮಾಡಿಕೊಳ್ಳಿ: ಎಚ್.ಎನ್.ನಾಗಮೋಹನ್ ದಾಸ್ ಸಲಹೆ

Published:
Updated:
Prajavani

ಚಿಕ್ಕಬಳ್ಳಾಪುರ: ‘ಕುಟುಂಬಕ್ಕೆ ತಾಯಿ ಇದ್ದಂತೆ ದೇಶಕ್ಕೊಂದು ಸಂವಿಧಾನ ಇರುತ್ತದೆ. ತಾಯಿಯನ್ನು ಅರ್ಥ ಮಾಡಿಕೊಂಡರೆ ಕುಟುಂಬ ಹೇಗೆ ಗಟ್ಟಿಯಾಗಿರುತ್ತದೊ ಹಾಗೆ ಸಂವಿಧಾನವನ್ನು ಅರ್ಥ ಮಾಡಿಕೊಂಡರೆ ದೇಶ ಗಟ್ಟಿಯಾಗಿರುತ್ತದೆ’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು.

ನಗರದಲ್ಲಿ ಸೋಮವಾರ ದಲಿತ ಸಂಘರ್ಷ ಸಮಿತಿ, ರೈತ ಸಂಘ, ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ‘ಸಂವಿಧಾನ ಓದು ಅಭಿಯಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮ ಸಂವಿಧಾನ ದೇಶದ 130 ಕೋಟಿ ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉಪಯುಕ್ತವಾಗಿದೆ. ಅದರಿಂದ ಶಿಕ್ಷಣ, ಆರೋಗ್ಯ, ವಸತಿ, ರಸ್ತೆಯಂತಹ ಮೂಲಸೌಕರ್ಯಗಳು ಸಿಕ್ಕಿವೆ. ಸಂವಿಧಾನದ ನೆರವಿನಿಂದ ದಲಿತನ ಮಗ ರಾಷ್ಟ್ರಪತಿ, ಹಿಂದುಳಿದ ವ್ಯಕ್ತಿ ಪ್ರಧಾನಿ ಆಗಲು ಸಾಧ್ಯವಾಗಿದೆ. ಎಲ್ಲ ವರ್ಗದವರಿಗೂ ಶಿಕ್ಷಣ ಮುಕ್ತವಾಗಿ ಸಿಕ್ಕ ಕಾರಣಕ್ಕೆ ವೈಜ್ಞಾನಿಕ ಆವಿಷ್ಕಾರಗಳು ಹೆಚ್ಚಿವೆ’ ಎಂದು ಹೇಳಿದರು.

‘ಶೈಕ್ಷಣಿಕ ಕ್ರಾಂತಿಯಿಂದ ಎಲ್ಲಾ ವರ್ಗಕ್ಕೂ ಸಾಂವಿಧಾನಿಕ ಹಕ್ಕುಗಳು ದಕ್ಕುತ್ತಿರುವುದು ಬಿ.ಆರ್‌.ಅಂಬೇಡ್ಕರ್‌ ಅವರ ಬಹುದೊಡ್ಡ ಕೊಡುಗೆ. ನಮ್ಮಲ್ಲಿ ಉತ್ಕೃಷ್ಟ ಸಂವಿಧಾನ ಅಳವಡಿಸಿಕೊಂಡರೂ ಇನ್ನೂ ದೇಶದ ದಲಿತರು ದಯನೀಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಹಲವಾರು ಕ್ಷೇತ್ರದ ಪ್ರಗತಿ ಕುಂಠಿತವಾಗಿದೆ. ಇದಕ್ಕೆ ಸಂವಿಧಾನ ಅನುಷ್ಠಾನಗೊಳಿಸುವಲ್ಲಿ ಇರುವ ಇಚ್ಛಾಶಕ್ತಿಯ ಕೊರತೆಯೇ ಕಾರಣ’ ಎಂದು ಬೇಸರ ವ್ಯಕ್ತಪಡಿಸಿದರು.

‘ದೇಶ ಎಂದರೆ ಅದು ಕೇವಲ ಭಾರತದ ಭೂಪಟ, ಕೇವಲ ಮಣ್ಣಲ್ಲ. ಅದು ಜನರ ಇತಿಹಾಸ. ಆ ಇತಿಹಾಸ ತಿಳಿದು ಕೊಟ್ಟಿರುವ ನ್ಯಾಯವೇ ಸಂವಿಧಾನ. ಈ ದೇಶವನ್ನು ಅರ್ಥ ಮಾಡಿಕೊಳ್ಳದಿದ್ದರೆ ನಮಗೆ ನಮ್ಮ ಸಂವಿಧಾನ ಅರ್ಥವಾಗುವುದಿಲ್ಲ. ಸಂವಿಧಾನ ಉಳಿಸಬೇಕಾದರೆ ಸಂವಿಧಾನವನ್ನೇ ಓದಬೇಕು. ದೇಶದಲ್ಲಿ 4,635 ಜಾತಿಗಳಿವೆ. ಅವುಗಳಲ್ಲಿ ಅತಿ ಹೆಚ್ಚು ಬಡವರು ಇರುವುದು ಕೆಳಜಾತಿಗಳಲ್ಲಿ ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು’ ಎಂದರು.

ಕಾನೂನು ಇಲಾಖೆಯ ವಿಶೇಷ ಕಾರ್ಯದರ್ಶಿ ಎಚ್.ಕೆ.ಜಗದೀಶ್ ಮಾತನಾಡಿ, ‘ಒಬ್ಬ ವ್ಯಕ್ತಿ ಬಗ್ಗೆ ತಿಳಿಯಬೇಕಾದರೆ ಆತನ ಹಿನ್ನಲೆ ತಿಳಿದುಕೊಳ್ಳುವಂತೆ, ನಾವು ನಮ್ಮ ದೇಶದ ಇತಿಹಾಸ ತಿಳಿದುಕೊಳ್ಳಬೇಕಾದರೆ ಮೊದಲು ಎಲ್ಲರೂ ಸಂವಿಧಾನ ಓದಿ ಅದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಸಮುದಾಯ ಕರ್ನಾಟಕ ಸಂಘಟನೆ ಸಹ ಕಾರ್ಯದರ್ಶಿ ಕೆ.ಎಸ್.ವಿಮಲಾ ಮಾತನಾಡಿ, ‘ಈ ದೇಶದ ದುರಂತವೆಂದರೆ ವಿಜ್ಞಾನವನ್ನು ಬೋಧಿಸಬೇಕಾದ ಸಮಯದಲ್ಲಿ ಮೌಢ್ಯವನ್ನು ತುಂಬಲಾಗುತ್ತಿದೆ. ನಾವು ಮಹಾಪುರುಷರ ಅಭಿಮಾನಿಗಳು ಆಗುವುದು ಬೇಡ. ಅವರ ಅನುಯಾಯಿಗಳಾಗಿ ಅವರು ಹಾಕಿದ ಮಾರ್ಗದಲ್ಲಿ ನಡೆಯಬೇಕಿದೆ’ ಎಂದು ಹೇಳಿದರು.

ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ತಮ್ಮೇಗೌಡ, ಜಚನಿ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಶಿವಜ್ಯೋತಿ, ಚಿಂತಕ ಡಾ.ಅನಿಲ್ ಕುಮಾರ್, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎನ್.ಮುನಿಸ್ವಾಮಿ, ಹಿರಿಯ ಮುಖಂಡ ಎನ್.ವೆಂಕಟೇಶ್, ರಾಜ್ಯ ಕೂಲಿ ಕಾರ್ಮಿಕರ ಸಂಘದ ರಾಜ್ಯ ಘಟಕ ಸದಸ್ಯ ಎಂ.ಪಿ ಮುನಿವೆಂಕಟಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ರಂಗಸ್ವಾಮಿ, ವಕೀಲ ಯಾಕೂಬ್ ಷರೀಪ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !