ಬಂದ್‌: ಶಾಲಾ–ಕಾಲೇಜುಗಳಿಗೆ ರಜೆ

7
ಆಟೊ ಸಿಗುವುದಿಲ್ಲ, ಸಾರಿಗೆ ಬಸ್‌ಗಳು ರಸ್ತೆಗೆ ಇಳಿಯುವುದಿಲ್ಲ

ಬಂದ್‌: ಶಾಲಾ–ಕಾಲೇಜುಗಳಿಗೆ ರಜೆ

Published:
Updated:
Prajavani

ಮಂಡ್ಯ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಾರ್ಮಿಕ ಸಂಘಟನೆಗಳು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲೆಯ ಎಲ್ಲಾ ಶಾಲಾ–ಕಾಲೇಜುಗಳಿಗೆ ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ ರಜೆ ಘೋಷಣೆ ಮಾಡಿದ್ದಾರೆ.

ಬಂದ್‌ಗೆ ಸಿಐಟಿಯು, ಕೆಎಸ್‌ಆರ್‌ಟಿಸಿ ನೌಕರರ ಒಕ್ಕೂಟ, ಆಟೊ ಚಾಲಕರ ಸಂಘ, ಬಿಸಿಯೂಟ ನೌಕರರ ಸಂಘ, ಗ್ರಾಮ ಪಂಚಾಯಿತಿ ನೌಕರರ ಸಂಘ, ಅಂಗನವಾಡಿ ಕಾರ್ಯಕರ್ತೆಯರು, ಜನವಾದಿ ಮಹಿಳಾ ಸಂಘಟನೆಯ ಸದಸ್ಯೆಯರು, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಡಿವೈಎಫ್‌ಐ ಸಂಘಟನೆಗಳು ಬೆಂಬಲ ಘೋಷಣೆ ಮಾಡಿದ್ದು ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಲಿದ್ದಾರೆ.

ಬಂದ್‌ ಹಿನ್ನೆಲೆಯಲ್ಲಿ ಸಿಐಟಿಯು ಸಂಘಟನೆ ಸದಸ್ಯರು ಸೋಮವಾರ ನಗರದಲ್ಲಿ ಬೈಕ್‌ ರ‍್ಯಾಲಿ ನಡೆಸಿ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ‘ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರ ಸೇವೆಯನ್ನು ಕಾಯಂಗೊಳಿಸಬೇಕು. ಅಸಂಘಟಿತ ಕಾರ್ಮಿಕರಿಗೆ ಸೇವಾ ಭದ್ರತೆ ನೀಡಬೇಕು. ಪ್ರತಿ ತಿಂಗಳು ₹ 6 ಸಾವಿರ ವೇತನ ನಿಗದಿ ಮಾಡಬೇಕು. ಬೋನಸ್‌ ಮಿತಿ ರದ್ದುಗೊಳಿಸಬೇಕು. ಸಾರ್ವಜನಿಕ ಉದ್ಯಮಗಳ ಖಾಸಗೀಕರಣ, ಬ್ಯಾಂಕ್‌, ವಿಮೆ, ರಕ್ಷಣಾ ವಲಯದಲ್ಲಿ ವಿದೇಶಿ ಬಂಡಾವಾಳ ಹೂಡಿಕೆಯನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿ ಬಂದ್‌ ಆಚರಿಸಲಾಗುತ್ತಿದೆ’ ಎಂದು ಹೇಳಿದರು.

ಬಿಗಿ ಭದ್ರತೆ :‘ಬಂದ್ ಅಂಗವಾಗಿ ಜಿಲ್ಲೆಯಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮೂರು ಕೆಆಎಸ್‌ಆರ್‌ಪಿ ತುಕಡಿ, ಎಂಟು ಜಿಲ್ಲಾ ಶಸಸ್ತ್ರ ಮೀಸಲು ಪಡೆಯ ತುಕಡಿ ಸಿಬ್ಬಂದಿಯನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಸ್ಥಳೀಯ ಪೊಲೀಸರ ನೇತೃತ್ವದಲ್ಲಿ ಎಲ್ಲಾ ಚಟುವಟಿಕೆಯ ಮೇಲೆ ನಿಗಾ ಇಡಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜ್‌ ಹೇಳಿದರು.

ಬಂದ್‌ ಅಂಗವಾಗಿ ಕೆಎಸ್‌ಆರ್‌ಟಿಸಿ ರಸ್ತೆಗೆ ಇಳಿಯುವುದಿಲ್ಲ. ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುವುದಿಲ್ಲ. ಆಟೊ ಮಾಲೀಕರು– ಚಾಲಕರ ಸಂಘಟನೆಗಳು ಬೆಂಬಲ ನೀಡಿರುವ ಕಾರಣ ಆಟೊ ಕೂಡ ಸಿಗುವುದಿಲ್ಲ. ಆಸ್ಪತ್ರೆ ಮತ್ತು ಔಷಧಿ ಅಂಗಡಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

ಪರೀಕ್ಷೆ ಮುಂದೂಡಿಕೆ: ನಗರದ ಸರ್ಕಾರಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಾಗೂ ಬುಧವಾರ ನಡೆಯಬೇಕಾಗಿದ್ದ ಪರೀಕ್ಷೆಗಳನ್ನು ಬಂದ್‌ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !