ಬಂದ್‌ಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ

7
ರಸ್ತೆಗಿಳಿಯದ ಬಸ್‌ಗಳು, ಬಿಕೋ ಎಂದ ಬಸ್‌ ನಿಲ್ದಾಣಗಳು, ಬಾಗಿಲು ಮುಚ್ಚಿದ ಅಂಗಡಿಗಳು, ಶಾಲಾ ಕಾಲೇಜುಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಣೆ

ಬಂದ್‌ಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ

Published:
Updated:
Prajavani

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಎರಡು ದಿನಗಳ ‘ಭಾರತ ಬಂದ್‌’ಗೆ ಮೊದಲ ದಿನವಾದ ಮಂಗಳವಾರ ಜಿಲ್ಲೆಯಲ್ಲಿ ಉತ್ತಮ ಪತ್ರಿಕ್ರಿಯೆ ವ್ಯಕ್ತವಾಯಿತು.

ಬಂದ್‌ಗೆ ಜಿಲ್ಲೆಯಲ್ಲಿ ಸಿಪಿಎಂ, ಸಿಐಟಿಯು, ಪ್ರಾಂತ ರೈತ ಸಂಘ ಹಾಗೂ ಬಿಸಿಯೂಟ ನೌಕರರ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ರೈತ ಸಂಘ, ಅಂಗನವಾಡಿ ನೌಕರರ ಸಂಘ ಸೇರಿದಂತೆ ಅನೇಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ ಕಾರಣ ಬಂದ್‌ ಭಾಗಶಃ ಯಶಸ್ವಿಯಾಯಿತು.

ಸಿಐಟಿಯು, ಪ್ರಾಂತ ರೈತ ಸಂಘ, ಅಂಗನವಾಡಿ ನೌಕರರ ಸಂಘ, ರೈತ ಸಂಘದ ಕಾರ್ಯಕರ್ತರು ಜಿಲ್ಲಾ ಕೇಂದ್ರವಾದ ನಗರದ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಬಳಿ ನಗರದ ಪ್ರಮುಖ ರಸ್ತೆಯಲ್ಲಿ ಬೈಕ್‌ ರ್‍ಯಾಲಿ, ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಪೂರ್ಣವಾಗಿ ಸಂಚಾರ ಸ್ಥಗಿತಗೊಳಿಸಿದ್ದವು. ಪರಿಣಾಮ, ಬಸ್‌ ನಿಲ್ದಾಣಗಳು ಬಿಕೋ ಎಂದವು. ಖಾಸಗಿ ಬಸ್‌ಗಳು ಸೇರಿದಂತೆ ಪ್ರಯಾಣಿಕರ ವಾಹನಗಳು ಸಂಚಾರ ಸ್ಥಗಿತಗೊಳಿಸಿದ್ದವು. ಆಟೊಗಳ ಸಂಚಾರ ವಿರಳವಾಗಿ ಕಂಡುಬಂತು. ಬಸ್‌ಗಳಿಲ್ಲದೆ ಅಲ್ಲಲ್ಲಿ ಪ್ರಯಾಣಿಕರು ಪರದಾಡಿದ ದೃಶ್ಯಗಳು ಗೋಚರಿಸಿದವು.

ಔಷಧಿ ಮಳಿಗೆ, ಆಸ್ಪತ್ರೆಗಳು ಎಂದಿನಂತೆ ಬಾಗಿಲು ತೆರೆದಿದ್ದವು. ಉಳಿದಂತೆ ನಗರದ ಬಹುಪಾಲು ಅಂಗಡಿ, ಮಳಿಗೆಗಳು, ಹೊಟೇಲ್‌ಗಳು ಬಾಗಿಲು ಮುಚ್ಚಿದ್ದವು. ಪೆಟ್ರೋಲ್ ಬಂಕ್‌ಗಳು ವಹಿವಾಟು ನಿಲ್ಲಿಸಿದ್ದವು. ಸರ್ಕಾರಿ ಕಚೇರಿಗಳು, ಅಂಚೆ ಕಚೇರಿಗಳು ಬಾಗಿಲು ತೆರೆದರೂ ಜನರಿಲ್ಲದೆ ಭಣಗುಡುತ್ತಿದ್ದವು. ಬ್ಯಾಂಕ್‌ ಶಾಖೆಗಳು ಬೀಗ ಹಾಕಿದ್ದವು. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಜಿಲ್ಲಾಡಳಿತ ಮಂಗಳವಾರ ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿತ್ತು.

ಬಂದ್‌ ಪ್ರಯುಕ್ತ ನಗರದ ಪ್ರಮುಖ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು. ಮಧ್ಯಾಹ್ನದ ನಂತರ ನಗರ ಸಹಜ ಸ್ಥಿತಿಗೆ ಮರಳುತ್ತ ಬಂತು. ಸಂಜೆ ವೇಳೆಗೆ ವಾಹನಗಳು, ಬಸ್ ಸಂಚಾರ ಆರಂಭಗೊಂಡಿತ್ತು.

ಕೇಂದ್ರದ ವಿರುದ್ಧ ಆಕ್ರೋಶ

ಪ್ರತಿಭಟನೆಯಲ್ಲಿ ಮಾತನಾಡಿದ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ‘ನಾಲ್ಕು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಆಶ್ವಾಸನೆಗಳು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಅವರು ಅನುಸರಿಸುತ್ತಿರುವ ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ನೀತಿಗಳು ದೇಶವನ್ನು ಅಧೋಗತಿಗೆ ತೆಗೆದುಕೊಂಡು ಹೋಗಿವೆ’ ಎಂದು ಆರೋಪಿಸಿದರು.

‘ನೀತಿ ಆಯೋಗದ ವರದಿ ಪ್ರಕಾರ ಕೈಗಾರಿಕಾ ರಂಗದಲ್ಲಿ ಶೇ 30 ರಷ್ಟು ಉದ್ಯೋಗ ಕಡಿತವಾಗಿವೆ. ಕೃಷಿ ರಂಗ ಅವಸಾನದ ಅಂಚಿಗೆ ತಲುಪುತ್ತಿದೆ. ಆಹಾರ ಉತ್ಪಾದನೆ ಸಂಪೂರ್ಣವಾಗಿ ಕಡಿಮೆಯಾಗಿದೆ. ಆಹಾರ ಉತ್ಪಾದನೆ ಕುಂಠಿತಗೊಂಡಿದೆ. ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಕೃಷಿ ರಂಗ ಸಂಪೂರ್ಣ ದಿವಾಳಿಯಾಗಿದೆ’ ಎಂದು ತಿಳಿಸಿದರು.

‘ಕಪ್ಪು ಹಣ ದೇಶಕ್ಕೆ ವಾಪಸ್‌ ತಂದು ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಹಾಕುತ್ತೇನೆ ಎಂದು ಹೇಳಿದ ಮೋದಿ ಅವರು, ಒಂದು ರೂಪಾಯಿ ಸಹ ಹಾಕಲಿಲ್ಲ. ಅವರೇ ಹೇಳಿದ ಪ್ರಕಾರ ₹13 ಸಾವಿರ ಕೋಟಿ ಕಪ್ಪುಹಣ ಹಿಂದಕ್ಕೆ ತರುವಲ್ಲಿ ವಿಫಲವಾಗಿದ್ದಾರೆ. ಈಗ ವಿದೇಶದಲ್ಲಿ ಕಪ್ಪುಹಣದ ಪ್ರಮಾಣ ಶೇ 40 ರಷ್ಟು ಜಾಸ್ತಿಯಾಗಿದೆ’ ಎಂದು ಆಪಾದಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಿನಾರಾಯಣ ರೆಡ್ಡಿ ಮಾತನಾಡಿ, ‘ಚುನಾವಣೆ ಪೂರ್ವದಲ್ಲಿ ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದ್ದ ಮೋದಿ, ಅಧಿಕಾರ ಸಿಗುತ್ತಿದ್ದಂತೆ ಸುಪ್ರೀಂ ಕೋರ್ಟ್‌ನಲ್ಲಿ ಸ್ವಾಮಿನಾಥನ್ ವರದಿ ಜಾರಿ ಸಾಧ್ಯವಿಲ್ಲ ಎಂದು ಪ್ರಮಾಣಪತ್ರ ಸಲ್ಲಿಸುವ ಮೂಲಕ ರೈತರಿಗೆ ಮೋಸ ಮಾಡಿದ್ದಾರೆ. ಎಲ್ಲಾ ಕೃಷಿ ಉತ್ಪನ್ನಗಳಿಗೆ ಒಟ್ಟು ಉತ್ಪಾದನಾ ವೆಚ್ಚದ ಮೇಲೆ ಶೇ 50ರಷ್ಟು ಲಾಭಾಂಶ ನಿಗದಿಪಡಿಸುವ ಬೆಂಬಲ ಬೆಲೆ ಕಾಯ್ದೆಯನ್ನು ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.

‘ಮೋದಿ ಸರ್ಕಾರದಲ್ಲಿ ಬಂಡವಾಳಶಾಹಿಗಳಿಗೆ, ಕಾರ್ಪೊರೇಟ್‌ ಕುಳಗಳಿಗೆ, ಲೂಟಿಕೋರರಿಗೆ ಒಳ್ಳೆಯ ದಿನಗಳು ಬಂದಿವೆ. ರೈತರಿಗೆ, ಸಾಮಾನ್ಯ ಜನರಿಗೆ ಒಳ್ಳೆಯ ದಿನಗಳು ಬರಲಿಲ್ಲ. ಪರಿಣಾಮ, ಕೃಷಿರಂಗ ಸಂಪೂರ್ಣ ದಿವಾಳಿ, ಕೈಗಾರಿಕಾ ಕ್ಷೇತ್ರ ನಾಶವಾಗಿದೆ. ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಪ್ರತಿ ವರ್ಷ ಒಂದು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಮೋದಿ ಹೇಳಿದ್ದರು. ವಾಸ್ತವದಲ್ಲಿ ವರ್ಷಕ್ಕೆ ಒಂದು ಕೋಟಿ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ’ ಎಂದು ತಿಳಿಸಿದರು.

‘ಪ್ರಧಾನಿ ಮೋದಿ ಅವರು ಕಳೆದ ನಾಲ್ಕುವರೆ ವರ್ಷಗಳಲ್ಲಿ ನದಿ ಜೋಡಣೆಯ ವಿಚಾರವಾಗಿ ಚಕಾರ ಎತ್ತಲಿಲ್ಲ. ನೋಟು ಅಮಾನ್ಯೀಕರಣ, ಜಿಎಸ್‌ಟಿ ಜಾರಿಗೊಳಿಸುವ ಮೂಲಕ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುವ ಕೆಲಸ ಮಾಡಿದರು. ಇತ್ತೀಚೆಗೆ ದೆಹಲಿಯಲ್ಲಿ 50 ಸಾವಿರಕ್ಕೂ ಅಧಿಕ ರೈತರು ಪ್ರತಿಭಟಿಸಿದರೆ ಮನವಿ ಸ್ವೀಕರಿಸಲು ಒಬ್ಬೇ ಒಬ್ಬ ಅಧಿಕಾರ ಬರಲಿಲ್ಲ. ಇದಕ್ಕಿಂತ ದುರಂತ ಇನ್ನೇನಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಸಿಯೂಟ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಮಂಜುಳಾ, ರೈತ ಸಂಘದ ರಾಜ್ಯ ವಿಭಾಗೀಯ ಮಟ್ಟದ ಉಪಾಧ್ಯಕ್ಷೆ ಅನಸೂಯಮ್ಮ, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸುಜಾತ, ಮುಖಂಡರಾದ ವೆಂಕಟರಮಣಪ್ಪ,ರಾಮಾಂಜಪ್ಪ, ಸರಸ್ವತಿ, ವೆಂಕಟೇಶ್‌, ಯಶವಂತ್‌ ಕುಮಾರ್, ಎಂ.ವೆಂಕಟಸ್ವಾಮಿ, ಶ್ರೀನಿವಾಸ್, ಮುನಿಲಕ್ಷಮ್ಮ, ಭಾಗ್ಯಮ್ಮ, ಉಮಾ, ಗಾಯತ್ರಿ, ಮುನಿರತ್ನಮ್ಮ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !