ಜ.10ರಂದು ಸಾಮಾಜಿಕ ನ್ಯಾಯಕ್ಕೆ ಸಾಂಕೇತಿಕ ಧರಣಿ

7
ವಾಲ್ಮೀಕಿ ನಾಯಕ ಸ್ವಾಭಿಮಾನಿ ಚಳವಳಿ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ರಾಜಣ್ಣ ಹೇಳಿಕೆ

ಜ.10ರಂದು ಸಾಮಾಜಿಕ ನ್ಯಾಯಕ್ಕೆ ಸಾಂಕೇತಿಕ ಧರಣಿ

Published:
Updated:

ಕೋಲಾರ: ‘ಸಾಮಾಜಿಕ ನ್ಯಾಯ ಮತ್ತು ಸಂವಿಧಾನಬದ್ಧ ಹಕ್ಕುಗಳಿಗಾಗಿ ಸಂಘಟನೆ ವತಿಯಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಜ.10ರಂದು ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗಿದೆ’ ಎಂದು ವಾಲ್ಮೀಕಿ ನಾಯಕ ಸ್ವಾಭಿಮಾನಿ ಚಳವಳಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಪಿ.ರಾಜಣ್ಣ ತಿಳಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಧರಣಿಗೂ ಮೊದಲು ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಮೆರವಣಿಗೆ ನಡೆಸಲಾಗುವುದು. ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿ ಧರಣಿಯಲ್ಲಿ ಪಾಲ್ಗೊಳ್ಳಬೇಕು’ ಎಂದು ಕೋರಿದರು.

‘ದಲಿತರ ಕಾಲೊನಿಗಳು ಹಾಗೂ ಸಮುದಾಯದ ಅಭಿವೃದ್ಧಿಗೆ ಸರ್ಕಾರಗಳು ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ (ಎಸ್‌ಸಿಪಿ–-ಟಿಎಸ್‌ಪಿ) ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿವೆ. ಆದರೆ, ಅಧಿಕಾರಿಗಳು ಅನುದಾನ ದುರುಪಯೋಗಪಡಿಸಿಕೊಂಡು ದಲಿತರನ್ನು ವಂಚಿಸುತ್ತಿದ್ದಾರೆ’ ಎಂದು ದೂರಿದರು.

‘ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ವಾಲ್ಮೀಕಿ ಜನಾಂಗವು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿದೆ. ಸಮುದಾಯದ ಜನಸಂಖ್ಯೆ 70 ಲಕ್ಷವಿದೆ. ಈ ಹಿಂದೆ ಇದ್ದ ಶೇ 3ರ ಮೀಸಲಾತಿಯನ್ನೇ ಅವೈಜ್ಞಾನಿಕವಾಗಿ ಮುಂದುವರಿಸಲಾಗಿದೆ. ನಕಲಿ ಜಾತಿ ಪ್ರಮಾಣಪತ್ರ ವಿತರಣೆ ಮೂಲಕ ಸಮುದಾಯಕ್ಕೆ ವಂಚಿಸಲಾಗುತ್ತಿದೆ. ಅಧಿಕಾರಿಗಳು ಈ ಅಕ್ರಮ ನೋಡಿಕೊಂಡು ಸುಮ್ಮನಿದ್ದಾರೆ’ ಎಂದು ಆರೋಪಿಸಿದರು.

ಪಕ್ಷಗಳು ವಿಫಲ: ‘170 ನಿಗಮ ಮಂಡಳಿಗಳಿದ್ದರೂ ಸಮುದಾಯದವರಿಗೆ ಯಾವುದೇ ಸ್ಥಾನಮಾನ ನೀಡದೆ ಶೋಷಿಸಲಾಗುತ್ತಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷವು ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸುವಲ್ಲಿ ವಿಫಲವಾಗಿವೆ’ ಎಂದು ಟೀಕಿಸಿದರು.

‘1991ರಲ್ಲಿ ಜಾರಿಯಾದ ಹೊಸ ಅರ್ಥಿಕ ನೀತಿ ಖಾಸಗೀಕರಣಗೊಂಡಿದೆ. ಹೊರ ಗುತ್ತಿಗೆಗೆ ಜೀತ ಪದ್ಧತಿಯ ಮತ್ತೊಂದು ಮುಖ. ಸಮುದಾಯದವರಿಗೆ ಸರ್ಕಾರಿ ಉದ್ಯೋಗವು ಮರಿಚೀಕೆಯಾಗಿದೆ. ಹೀಗಾಗಿ ಸಮುದಾಯದವರು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

ನಿರ್ಲಕ್ಷ್ಯ ತೋರಿದರು: ‘ರಮೇಶ್‌ ಜಾರಕಿಹೊಳಿ ಅವರು ಸಚಿವರಾಗಿದ್ದಾಗ ವಾಲ್ಮೀಕಿ ಜನಾಂಗಕ್ಕೆ 7.5ರಷ್ಟು ಮೀಸಲಾತಿ ನೀಡುವಂತೆ ಶಿಫಾರಸು ಮಾಡಿದ್ದರು. ಈ ಸಂಬಂಧ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶ ನೀಡಿದ್ದರೂ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮೀಸಲಾತಿ ಅನುಷ್ಠಾನಗೊಳಿಸಲು ನಿರ್ಲಕ್ಷ್ಯ ತೋರಿದರು’ ಎಂದು ಸಂಘಟನೆಯ ರಾಜ್ಯ ಘಟಕದ ಸಂಚಾಲಕ ಉಮಾಪತಿ ಅಸಮಾಧಾನ ವ್ಯಕ್ತಪಡಿಸಿದರು.

ಸಂಘಟನೆಯ ಸಂಘಟನಾ ಕಾರ್ಯದರ್ಶಿ ಲಕ್ಷ್ಮೀಪತಿ, ಸದಸ್ಯರಾದ ವೆಂಕಟಸ್ವಾಮಿ, ನಾರಾಯಣಸ್ವಾಮಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !