ಕೋಲಾರ: ಬಂದ್‌ಗೆ ವ್ಯಾಪಕ ಬೆಂಬಲ, ಜನಜೀವನ ಅಸ್ತವ್ಯಸ್ತ

7
ಮೋಟಾರು ವಾಹನ ಮಸೂದೆ ಹಿಂಪಡೆಯಲು ಒತ್ತಾಯ: ಕೇಂದ್ರದ ವಿರುದ್ಧ ಆಕ್ರೋಶ

ಕೋಲಾರ: ಬಂದ್‌ಗೆ ವ್ಯಾಪಕ ಬೆಂಬಲ, ಜನಜೀವನ ಅಸ್ತವ್ಯಸ್ತ

Published:
Updated:
Prajavani

ಕೋಲಾರ: ಮೋಟಾರು ವಾಹನ (ತಿದ್ದುಪಡಿ) ಮಸೂದೆ ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಭಾರತ ಬಂದ್‌ಗೆ ಕರೆ ಕೊಟ್ಟಿದ್ದರಿಂದ ಜಿಲ್ಲೆಯಾದ್ಯಂತ ಮಂಗಳವಾರ ವಾಣಿಜ್ಯ ವಹಿವಾಟು ಹಾಗೂ ಬಸ್‌ ಸೇವೆ ಸ್ಥಗಿತಗೊಂಡು ಜನಜೀವನ ಅಸ್ತವ್ಯಸ್ತವಾಯಿತು.

ಬಂದ್‌ ಹಿನ್ನೆಲೆಯಲ್ಲಿ ಇಡೀ ದಿನ ಅಂಗಡಿಗಳು ಮುಚ್ಚಿದ್ದವು. ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಡಿಪೊದಲ್ಲೇ ನಿಲ್ಲಿಸಲಾಗಿತ್ತು. ಖಾಸಗಿ ಬಸ್‌ಗಳು ರಸ್ತೆಗೆ ಇಳಿಯಲೇ ಇಲ್ಲ. ಆಟೊ ಹಾಗೂ ಸರಕು ಸಾಗಣೆ ವಾಹನಗಳ ಸೇವೆಯಲ್ಲಿ ವ್ಯತ್ಯಯವಾಗಿ ಜನಜೀವನಕ್ಕೆ ತೀವ್ರ ತೊಂದರೆಯಾಯಿತು.

ಬ್ಯಾಂಕ್‌ಗಳು, ಅಂಚೆ ಕಚೇರಿ, ಬಿಎಸ್‌ಎನ್‌ಎಲ್‌ ಸೇರಿದಂತೆ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕೆಲ ಹೊತ್ತು ಕಾರ್ಯ ಚಟುವಟಿಕೆಗಳು ನಡೆದವು. ಬಳಿಕ ವಿವಿಧ ಸಂಘಟನೆಗಳ ಸದಸ್ಯರು ಬ್ಯಾಂಕ್‌, ಖಾಸಗಿ ಕಂಪನಿ ಹಾಗೂ ಸರ್ಕಾರಿ ಕಚೇರಿಗಳನ್ನು ಬಲವಂತವಾಗಿ ಮುಚ್ಚಿಸಿದರು. ಅಲ್ಲದೇ, ಲಾರಿ, ಆಟೊಗಳನ್ನು ತಡೆದು ಬಂದ್‌ ಬೆಂಬಲಿಸುವಂತೆ ಒತ್ತಾಯಿಸುತ್ತಿದ್ದ ದೃಶ್ಯ ಹಲವೆಡೆ ಕಂಡುಬಂತು.

ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಬಸ್‌ಗಾಗಿ ಗಂಟೆಗಟ್ಟಲೇ ಕಾಯುತ್ತಾ ಕುಳಿತಿದ್ದರು. ಕೊನೆಗೂ ಬಸ್‌ ಬಾರದಿದ್ದರಿಂದ ಪ್ರಯಾಣ ಮೊಟಕುಗೊಳಿಸಿ ಮನೆಯತ್ತ ಹೆಜ್ಜೆ ಹಾಕಿದರು.

ಸಾರ್ವಜನಿಕರು ಅನಿವಾರ್ಯವಾಗಿ ಸರಕು ಸಾಗಣೆ ಆಟೊಗಳಲ್ಲಿ ಸಂಚರಿಸುತ್ತಿದ್ದ ದೃಶ್ಯ ಹಲವೆಡೆ ಕಂಡುಬಂತು. ರೋಗಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಆಟೊ ಸಿಗದೆ ನಡೆದೇ ಆಸ್ಪತ್ರೆ ತಲುಪುವಂತಾಯಿತು. ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಹಾಜರಾತಿ ಕಡಿಮೆ ಇತ್ತು.

ಶಾಲೆಗಳಿಗೆ ರಜೆ: ಜಿಲ್ಲಾಡಳಿತವು ಖಾಸಗಿ ಹಾಗೂ ಸರ್ಕಾರಿ ಶಾಲಾ ಕಾಲೇಜುಗಳಿಗೆ ಮುಂಚೆಯೇ ರಜೆ ಘೋಷಿಸಿತ್ತು. ಹೀಗಾಗಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳತ್ತ ಸುಳಿಯಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಎಟಿಎಂ ಕೇಂದ್ರಗಳನ್ನು ಮುಚ್ಚಲಾಗಿತ್ತು. ಇದರಿಂದ ಗ್ರಾಹಕರು ತೊಂದರೆ ಅನುಭವಿಸಿದರು.

ಆಸ್ಪತ್ರೆಗಳು, ಔಷಧ ಮಾರಾಟ ಮಳಿಗೆಗಳು ಸೇವೆ ಒದಗಿಸಿದವು. ಚಿತ್ರಮಂದಿರಗಳಲ್ಲಿ ಎಂದಿನಂತೆ ಚಿತ್ರ ಪ್ರದರ್ಶನ ನಡೆಯಿತು. ಆದರೆ, ಪ್ರೇಕ್ಷಕರ ಸಂಖ್ಯೆ ತುಂಬಾ ಕಡಿಮೆ ಇತ್ತು. ಪೆಟ್ರೋಲ್‌ ಬಂಕ್‌ಗಳನ್ನು ಇಡೀ ದಿನ ಮುಚ್ಚಲಾಗಿತ್ತು. ಹೀಗಾಗಿ ವಾಹನ ಸವಾರರು ಪೆಟ್ರೋಲ್‌ ಮತ್ತು ಡೀಸೆಲ್‌ಗಾಗಿ ಬಂಕ್‌ನಿಂದ ಬಂಕ್‌ಗೆ ಅಲೆಯುವಂತಾಯಿತು.

ಕತ್ತೆ ಮೆರವಣಿಗೆ: ಬೈಕ್‌ ರ‍್ಯಾಲಿ ಮತ್ತು ಆಟೊ ಮೆರವಣಿಗೆ ನಡೆಸಿದ ಕಾರ್ಮಿಕ ಸಂಘಟನೆಗಳ ಸದಸ್ಯರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಬಂದ್‌ ಬೆಂಬಲಿಸಿ ಕತ್ತೆಗಳ ಮೆರವಣಿಗೆ ಮಾಡಿದರು.

ಸದಾ ಜನಜಂಗುಳಿ ಮತ್ತು ವಾಹನ ದಟ್ಟಣೆಯಿಂದ ಗಿಜಿಗುಡುತ್ತಿದ್ದ ಮಾರುಕಟ್ಟೆಗಳು ಬಿಕೋ ಎನ್ನುತ್ತಿದ್ದವು. ಮಕ್ಕಳು ಕೆಎಸ್‌ಆರ್‌ಟಿಸಿ ನಿಲ್ದಾಣದೊಳಗೆ ಮತ್ತು ಮಾರುಕಟ್ಟೆ ಆವರಣದಲ್ಲೇ ಕ್ರಿಕೆಟ್‌ ಆಡಿ ಸಂಭ್ರಮಿಸಿದರು. ಸರ್ಕಾರಿ ಕಚೇರಿಗಳು, ಬಸ್‌ ನಿಲ್ದಾಣ, ರೈಲು ನಿಲ್ದಾಣ, ಪ್ರಮುಖ ವೃತ್ತ, ರಸ್ತೆಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಜತೆಗೆ ಪೊಲೀಸ್‌ ಗಸ್ತು ಹೆಚ್ಚಿಸಲಾಗಿತ್ತು. ಹಿರಿಯ ಪೊಲೀಸ್‌ ಅಧಿಕಾರಿಗಳು ನಿಯಮಿತವಾಗಿ ಗಸ್ತು ನಡೆಸುತ್ತಲೇ ಇದ್ದರು.

ಸಂಘಟನೆಗಳ ಬೆಂಬಲ: ಸಿಪಿಎಂ, ಸಾರಿಗೆ ನೌಕರರು, ಬಿಇಎಂಎಲ್, ವರ್ತಕರು, ಹೋಟೆಲ್ ಮಾಲೀಕರ ಸಂಘ, ರೈತ ಮತ್ತು ದಲಿತ ಸಂಘಟನೆಗಳು, ಕರ್ನಾಟಕ ಪ್ರಾಂತ ರೈತ ಸಂಘ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್‌, ಆಟೊ ಚಾಲಕರ ಒಕ್ಕೂಟ, ಸಿಐಟಿಯು, ವಿದ್ಯಾರ್ಥಿ ಸಂಘಟನೆಗಳು, ಮಹಿಳಾ ಸಂಘಟನೆಗಳು, ಕೆಎಸ್‌ಆರ್‌ಟಿಸಿ ನೌಕರರ ಒಕ್ಕೂಟ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಮುಷ್ಕರಕ್ಕೆ ಬೆಂಬಲ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !