ಜೀವನ ಶೈಲಿ ಬದಲಾದರೆ ರೋಗಮುಕ್ತ

7

ಜೀವನ ಶೈಲಿ ಬದಲಾದರೆ ರೋಗಮುಕ್ತ

Published:
Updated:
Prajavani

ಕೋಲಾರ: ‘ಬಡವರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಕಲ್ಪಿಸಲು ಉಚಿತವಾಗಿ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತಿದ್ದು, ಜನರು ಇದರ ಪ್ರಯೋಜನ ಪಡೆಯಬೇಕು’ ಎಂದು ಮದರ್ ಥೆರೆಸಾ ವಿದ್ಯಾ ಸಂಸ್ಥೆ ಸಂಸ್ಥಾಪಕ ಶ್ರೀಕೃಷ್ಣ ಮನವಿ ಮಾಡಿದರು.

ಆಯುಷ್ ಇಲಾಖೆ ಸಹಯೋಗದೊಂದಿಗೆ ಇಲ್ಲಿ ಮಂಗಳವಾರ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ‘ಶಿಬಿರಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸುವುದರಿಂದ ದೇಹದಲ್ಲಿನ ಕಾಯಿಲೆ ಪತ್ತೆಯಾಗುತ್ತದೆ. ಕಾಯಿಲೆಯ ಆರಂಭದಲ್ಲೇ ಚಿಕಿತ್ಸೆ ನೀಡಿದರೆ ಗುಣಮುಖವಾಗಬಹುದು’ ಎಂದರು.

‘ಬದಲಾಗುತ್ತಿರುವ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ಮನುಷ್ಯ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾನೆ. ಯಾಂತ್ರಿಕ ಜೀವನದಿಂದ ಮಾನಸಿಕ ಒತ್ತಡ ಹೆಚ್ಚಿ ಜನ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಜನರ ಆಹಾರ ಕ್ರಮ ಮತ್ತು ಜೀವನ ಶೈಲಿ ಬದಲಾದರೆ ರೋಗಮುಕ್ತ ಬದುಕು ಸಾಗಿಸಬಹುದು’ ಎಂದು ಕಿವಿಮಾತು ಹೇಳಿದರು.

ಆರೋಗ್ಯ ಮುಖ್ಯ: ‘ಹಣ ಸಂಪಾದನೆ, ಆಸ್ತಿ ಗಳಿಕೆಗಿಂತ ಆರೋಗ್ಯ ಮುಖ್ಯ. ಕೋಟಿಗಟ್ಟಲೇ ಹಣ, ಆಸ್ತಿ ಸಂಪಾದಿಸಿ ಆರೋಗ್ಯವೇ ಸರಿ ಇಲ್ಲದಿದ್ದರೆ ಪ್ರಯೋಜನವಿಲ್ಲ. ಆದ ಕಾರಣ ಜನ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಎದುರಾದರೂ ನಿರ್ಲಕ್ಷಿಸದೆ ಚಿಕಿತ್ಸೆ ಪಡೆಯಬೇಕು’ ಎಂದು ಜೆಡಿಎಸ್ ಮುಖಂಡ ಚಂದ್ರಮೌಳಿ ಸಲಹೆ ನೀಡಿದರು.

‘ಐಷಾರಾಮಿ ಬದುಕು, ದೈಹಿಕ ಪರಿಶ್ರಮವಿಲ್ಲದ ವೃತ್ತಿ, ಅಸಮತೋಲಿತ ಆಹಾರ ಮತ್ತು ಒತ್ತಡದ ಜೀವನ ಶೈಲಿಯಿಂದ ಜನರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಮಾನಸಿಕ ಒತ್ತಡ ನಿವಾರಣೆಗೆ ಪ್ರತಿನಿತ್ಯ ಯೋಗ, ವ್ಯಾಯಾಮ ಹಾಗೂ ಧ್ಯಾನ ಮಾಡಬೇಕು. ವೈದ್ಯರ ಬಳಿ ಹೋಗುವ ಬದಲು ಕಾಯಿಲೆ ಬರದಂತೆ ಮುಂಜಾಗ್ರತೆ ವಹಿಸಬೇಕು’ ಎಂದು ತಿಳಿಸಿದರು.

ಸಂಧಿವಾತ, ಚರ್ಮ ರೋಗ, ಹೊಟ್ಟೆ ನೋವು, ಆಮ್ಲಪಿತ್ತ, ನೆಗಡಿ, ಕೆಮ್ಮು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ತಪಾಸಣೆ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !