ಬಾಗಲಕೋಟೆ: ಬಸ್ ಸೇವೆಯಲ್ಲಿ ವ್ಯತ್ಯಯ; ಪ್ರಯಾಣಿಕರ ಪರದಾಟ

7
ಭಾರತ್ ಬಂದ್ ಎರಡನೇ ದಿನ

ಬಾಗಲಕೋಟೆ: ಬಸ್ ಸೇವೆಯಲ್ಲಿ ವ್ಯತ್ಯಯ; ಪ್ರಯಾಣಿಕರ ಪರದಾಟ

Published:
Updated:
Prajavani

ಬಾಗಲಕೋಟೆ: ಹೋರಾಟಗಾರರ ಬೆದರಿಕೆಗೆ ಮಣಿದು ಸಾರಿಗೆ ಸಂಸ್ಥೆಯ ಬಾಗಲಕೋಟೆ ಡಿಪೊ ತನ್ನ ಬಸ್‌ಗಳನ್ನು ರಸ್ತೆಗೆ ಇಳಿಸದ ಪರಿಣಾಮ ಭಾರತ್ ಬಂದ್‌ನ ಎರಡನೇ ದಿನವಾದ ಬುಧವಾರ ನಗರದಲ್ಲಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು.

ಜಿಲ್ಲೆಯ ಎಂಟು ಡಿಪೊಗಳ ಪೈಕಿ ಏಳರಲ್ಲಿ ಮುಂಜಾನೆಯೇ ಬಸ್ ಸೇವೆ ಆರಂಭವಾಯಿತು. ಬಾಗಲಕೋಟೆ ಡಿಪೊ ವ್ಯಾಪ್ತಿಯಲ್ಲಿ ಸಂಜೆ 4 ಗಂಟೆಗೆ ಬಸ್‌ಗಳು ಚಾಲನೆಗೊಂಡವು.

ಹಿಂದಿನ ದಿನ ರಾತ್ರಿ ಎರಡು ಬಸ್‌ಗಳಿಗೆ ಕಲ್ಲು ತೂರಿದ್ದು ಹಾಗೂ ನಸುಕಿನಲ್ಲಿ ಇಲ್ಲಿನ ಬಿಟಿಡಿಎ ಎದುರು ಬೆಳಗಾವಿ ಬಸ್‌ಗೆ ಕಲ್ಲೇಟು ಬಿದ್ದ ಪರಿಣಾಮ ಸಾರಿಗೆ ಸಂಸ್ಥೆ ಅಧಿಕಾರಿಗಳು ಬಸ್‌ಗಳ ಸಂಚಾರ ಆರಂಭಿಸಲು ಹಿಂದೇಟು ಹಾಕಿದರು.

ಆಲ್‌ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಆಹೋರಾತ್ರಿ ಧರಣಿ ನಡೆಸಿದರು. ಕೆಲವು ಹೋರಾಟಗಾರರು ಬಾಗಲಕೋಟೆ ಬಸ್‌ ನಿಲ್ದಾಣಕ್ಕೆ ಮುಂಜಾನೆ ಬಂದು ಬಸ್‌ಗಳನ್ನು ರಸ್ತೆಗೆ ಇಳಿಸದಂತೆ ಘೋಷಣೆ ಕೂಗಿ ತೆರಳಿದರು. ನಂತರ ಪೊಲೀಸರೊಂದಿಗೆ ಚರ್ಚಿಸಿದ ಸಾರಿಗೆ ಸಂಸ್ಥೆ ಅಧಿಕಾರಿಗಳು ಬಸ್‌ಗಳನ್ನು ರಸ್ತೆಗೆ ಇಳಿಸಲು ಮುಂದಾಗಲಿಲ್ಲ.

ಎರಡನೇ ದಿನ ಶಾಲಾ–ಕಾಲೇಜುಗಳು ಆರಂಭವಾದ ಕಾರಣ ಸುತ್ತಲಿನ ಹಳ್ಳಿಗಳಿಗೆ ಹೊರಟಿದ್ದ ಶಿಕ್ಷಕರು, ನಗರದ ಹೊರ ವಲಯದ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳು ಎಂದಿನಂತೆ ಬಸ್‌ ನಿಲ್ದಾಣಕ್ಕೆ ಬಂದರೂ ಬಸ್‌ಗಳು ಆರಂಭವಾಗದೇ ತೀವ್ರ ತೊಂದರೆಗೆ ಒಳಗಾದರು. ಈ ವೇಳೆ ಕೆಲವು ಮಕ್ಕಳು ಬಸ್ ಆರಂಭವಾಗದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಶಾಲಾ–ಕಾಲೇಜುಗಳು ಬಂದ್ ನಡುವೆಯೇ ಕಾರ್ಯನಿರ್ವಹಿಸಿದವು. ಬಾಗಲಕೋಟೆಯ ಸರ್ಕಾರಿ ಗಂಡು ಮಕ್ಕಳ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿದ ಪ್ರತಿಭಟನಾಕಾರರು, ಧರಣಿಗೆ ಶಾಲೆಯ ಅಕ್ಷರ ದಾಸೋಹ ಕಾರ್ಯಕರ್ತರನ್ನು ಕಳುಹಿಸದ ಕಾರಣಕ್ಕೆ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.

ನವನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ವೇಳೆ ಗುಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಅಮೀನಾ ಅಸ್ವಸ್ಥರಾಗಿದ್ದರು. ಜೊತೆಯಲ್ಲಿದ್ದ ಮಹಿಳೆಯರು ಆರೈಕೆ ಮಾಡಿದರು. ನಂತರ ಜಿಲ್ಲಾಡಳಿತ ಭವನದ ಎದುರು ಬೃಹತ್ ಮಾನವ ಸರಪಳಿ ನಿರ್ಮಿಸಲಾಯಿತು.

ಬ್ಯಾಂಕ್ ನೌಕರರ ಭಾಗಿ: ಎರಡನೇ ದಿನದ ಪ್ರತಿಭಟನೆಯಲ್ಲಿ ಬ್ಯಾಂಕ್‌ ನೌಕರರು ಪಾಲ್ಗೊಂಡಿದ್ದರು. ಅಖಿಲ ಭಾರತ ಗ್ರಾಮೀಣ ಬ್ಯಾಂಕ್ ನೌಕರರ ಸಂಘಟನೆ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳ ಒಕ್ಕೂಟ, ಬಾಗಲಕೋಟೆ ಜಿಲ್ಲಾ ಬ್ಯಾಂಕ್ ನೌಕರರ ಒಕ್ಕೂಟದಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !