ಬೆಂಕಿ ಪಾಲಾಗುತ್ತಿದೆ ಕಟಾವಿಗೆ ಬಂದ ಕಬ್ಬು

7
ತಿಂಗಳಲ್ಲಿ 20ಕ್ಕೂ ಹೆಚ್ಚು ಅಗ್ನಿ ಅನಾಹುತ, ಇಲಾಖೆಗಳ ಸಮನ್ವಯತೆ ಕೊರತೆ, ಸಿಗದ ಪರಿಹಾರ

ಬೆಂಕಿ ಪಾಲಾಗುತ್ತಿದೆ ಕಟಾವಿಗೆ ಬಂದ ಕಬ್ಬು

Published:
Updated:
Prajavani

ಮಂಡ್ಯ: ಕಟಾವಿಗೆ ಬಂದ ಕಬ್ಬು ಬೆಂಕಿಗೆ ಆಹುತಿಯಾಗುವ ಘಟನೆಗಳು ಜಿಲ್ಲೆಯಾದ್ಯಂತ ಸಾಮಾನ್ಯವಾಗುತ್ತಿವೆ. ಪ್ರತಿನಿತ್ಯ ಒಂದಲ್ಲಾ ಒಂದು ಕಡೆ ಬೆಂಕಿ ಅನಾಹುತ ಸಂಭವಿಸುತ್ತಿದ್ದು ರೈತರು ನಷ್ಟ ಅನುಭವಿಸುತ್ತಿದ್ದಾರೆ. ವಿದ್ಯುತ್‌ ಶಾರ್ಟ್‌ ಸರ್ಕಿಟ್‌ ಅಥವಾ ಕಿಡಿಗೇಡಿಗಳ ಕೃತ್ಯದಿಂದಾಗಿ ಕೈಗೆ ಬಂದ ಕಬ್ಬು ಅಗ್ನಿಯ ತುತ್ತಾಗುತ್ತಿದೆ.

ತಾಲ್ಲೂಕಿನ ರಾಜೇಗೌಡನದೊಡ್ಡಿ, ಬೆಳ್ಳುಂಡಗೆರೆ, ಕೊಮ್ಮೇರಹಳ್ಳಿ, ಶ್ರೀರಂಗಪಟ್ಟಣ ತಾಲ್ಲೂಕಿನ ನಗುವನಹಳ್ಳಿ, ಕೆ.ಆರ್‌.ಪೇಟೆ ತಾಲ್ಲೂಕಿನ ನಗರೂರು, ಬಿಲ್ಲೇನಹಳ್ಳಿ, ಮತ್ತಿಘಟ್ಟ, ಮದ್ದೂರು ತಾಲ್ಲೂಕಿನ ಭಾರತೀನಗರ, ಕೌಡ್ಲೆ, ಕುದರಗುಂಡಿ, ಪಾಂಡವಪುರ ಮುಂತಾದೆಡೆ ಕಬ್ಬಿಗೆ ಬೆಂಕಿ ಬಿದ್ದಿದೆ. ತಿಂಗಳಲ್ಲಿ 20ಕ್ಕೂ ಹೆಚ್ಚು ಕಡೆ ಬೆಂಕಿ ಬಿದ್ದಿರುವ ಕುರಿತು ವಿವಿಧ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಾಗಿವೆ. ಹೆಚ್ಚಿನ ಪ್ರಕರಣಗಳು ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದ ಘಟನೆ ನಡೆಯುತ್ತಿವೆ. ಕಿಡಿಗೇಡಿಗಳು ದ್ವೇಷಕ್ಕೆ ಬೆಂಕಿ ಹಚ್ಚಿರುವ ಕುರಿತೂ ದೂರು ದಾಖಲಾಗಿವೆ.

ಮೈಷುಗರ್‌, ಪಿಎಸ್‌ಎಸ್‌ಕೆ ಸೇರಿ ಜಿಲ್ಲೆಯ ಹಲವು ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುತ್ತಿಲ್ಲ. ಕಟಾವಿಗೆ ಬಂದ ಕಬ್ಬು ಗದ್ದೆಯಲ್ಲೇ ಉಳಿದಿದೆ. ಸೂಲಂಗಿ (ಕಬ್ಬಿನ ಹೂವು) ಎತ್ತರಕ್ಕೆ ಬೆಳೆದು ವಿದ್ಯುತ್‌ ತಂತಿಗೆ ಸ್ಪರ್ಶಿಸುತ್ತಿದೆ. ತಂತಿಯಿಂದ ವಿದ್ಯುತ್‌ ಕಿಡಿ ಉತ್ಪತ್ತಿಯಾಗಿ ಇಡೀ ಕಬ್ಬಿನ ಗದ್ದೆಗೆ ಬೆಂಕಿ ಆವರಿಸುತ್ತಿದೆ. ಕೆಲವೆಡೆ ನಾಲ್ಕೈದು ರೈತರಿಗೆ ಸೇರಿದ ಐದಾರು ಎಕರೆ ಕಬ್ಬು ಭಸ್ಮವಾಗಿದೆ.

ಪರಿಹಾರ ವಿತರಣೆ ಇಲ್ಲ: ಕಬ್ಬಿಗೆ ಬೆಂಕಿ ಬಿದ್ದು ರೈತರು ನಷ್ಟ ಅನುಭವಿಸಿದ್ದರೂ ಅವರಿಗೆ ಪರಿಹಾರ ನೀಡುವ ಯಾವುದೇ ಪ್ರಕ್ರಿಯೆ ಆರಂಭ ಆಗಿಲ್ಲ. ರೈತರಿಗೆ ಸೆಸ್ಕ್‌ ಪರಿಹಾರ ನೀಡಬೇಕು. ಅದಕ್ಕೂ ಮೊದಲು ಕೃಷಿ ಇಲಾಖೆ ನಷ್ಟದ ಸಮೀಕ್ಷಾ ವರದಿಯನ್ನು ಸೆಸ್ಕ್‌ಗೆ ಸಲ್ಲಿಸಬೇಕು. ಕಳೆದೆರಡು ತಿಂಗಳಿಂದ ಕೃಷಿ ಇಲಾಖೆಯಿಂದ ಬೆಂಕಿ ಅನಾಹುತ ಕುರಿತು ಯಾವುದೇ ಸಮೀಕ್ಷಾ ಸೆಸ್ಕ್‌ಗೆ ತಲುಪಿಲ್ಲ. ಹೀಗಾಗಿ ಪರಿಹಾರ ವಿತರಣೆಯೂ ಆಗಿಲ್ಲ.

‘ವಿದ್ಯುತ್‌ ತಂತಿಗಳು ಕೈಗೆ ಎಟುಕುವ ಅಂತರದಲ್ಲಿ ನೇತಾಡುತ್ತಿವೆ. ಸೆಸ್ಕ್‌ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಅನಾಹುತ ಸಂಭವಿಸುತ್ತಿವೆ. ಕಳೆದ ವರ್ಷ ನಡೆದ ಬೆಂಕಿ ಅನಾಹುತ ಘಟನೆಗಳಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ’ ಎಂದು ರೈತ ಚಂದ್ರಶೇಖರ್‌ ಹೇಳಿದರು.

ಸಮನ್ವಯತೆ ಕೊರತೆ: ಕೃಷಿ ಮತ್ತು ಸೆಸ್ಕ್‌ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ ಇದ್ದು ರೈತರು ಕಷ್ಟ ಅನುಭವಿಸುವಂತಾಗಿದೆ. ಕಬ್ಬು ನಷ್ಟವಾಗಿರುವುದು ಕಣ್ಣಿಗೆ ಕಾಣುತ್ತಿದ್ದರೂ ಸೆಸ್ಕ್‌ ಅಧಿಕಾರಿಗಳು ಕೃಷಿ ಇಲಾಖೆಯ ಸಮೀಕ್ಷೆಗೆ ಕಾಯುತ್ತಿದ್ದಾರೆ. ಆದರೆ ಕೃಷಿ ಇಲಾಖೆ ಅಧಿಕಾರಿಗಳು ಸೆಸ್ಕ್‌ನಿಂದ ಪತ್ರ ಬರಬೇಕು ಎಂದು ಹೇಳುತ್ತಿದ್ದಾರೆ. ಹೀಗಾಗಿ ಪರಿಹಾರದ ವಿಷಯ ಕಗ್ಗಂಟಾಗಿದೆ.

‘ಕೃಷಿ ಇಲಾಖೆ ಅಧಿಕಾರಿಗಳು ಕೇವಲ ನಷ್ಟದ ಮೌಲ್ಯವನ್ನಷ್ಟೇ ಕಳುಹಿಸುತ್ತಿದ್ದಾರೆ. ಇದರಿಂದ ಪರಿಹಾರ ನೀಡಲು ಸಾಧ್ಯವಿಲ್ಲ. ಬೆಂಕಿ ಅನಾಹುತದಲ್ಲಿ ಎಷ್ಟು ಎಕರೆ ಕಬ್ಬು ಸಂಪೂರ್ಣವಾಗಿ ಭಸ್ಮವಾಗಿದೆ, ಎಷ್ಟು ಬಾಗಶಃ ಸುಟ್ಟು ಹೋಗಿದೆ. ಮರಗಳು ಎಷ್ಟಿದ್ದವು ಎಲ್ಲದರ ಮಾಹಿತಿ ನೀಡಬೇಕು. ಆಗ ಮಾತ್ರ ನಾವು ನಷ್ಟ ಪರಿಹಾರ ಕೊಡಲು ಸಾಧ್ಯ. ಮೂರು ತಿಂಗಳಿಂದ ಇಂತಹ ಯಾವುದೇ ವರದಿ ಕೃಷಿ ಇಲಾಖೆಯಿಂದ ಬಂದಿಲ್ಲ’ ಎಂದು ಸೆಸ್ಕ್‌ ಕಾರ್ಯಪಾಲಕ ಎಂಜಿನಿಯರ್‌ ಡಿ.ಎಲ್‌.ನರಸಿಂಹಮೂರ್ತಿ ಹೇಳಿದರು.

‘ವಿದ್ಯುತ್‌ ನಿಗಮದಿಂದ ಸಮೀಕ್ಷೆ ಕೋರಿ ಪತ್ರ ಬಂದರೆ ಮಾತ್ರ ನಮ್ಮ ಸಿಬ್ಬಂದಿ ಸಮೀಕ್ಷೆ ನಡೆಸುತ್ತಾರೆ. ತಹಶೀಲ್ದಾರ್‌ ಮೂಲಕ ಮನವಿ ಪತ್ರ ಬರಬೇಕು. ಇಲ್ಲಿಯವರೆಗೆ ಯಾವುದೇ ಪತ್ರ ಬಂದಿಲ್ಲ. ಮುಂದೆ ಬಂದರೆ ಸಮೀಕ್ಷೆ ನಡೆಸಿ ವರದಿ ನೀಡಲಾಗುವುದು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಸುಲೋಚನಾ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !