ಮೇಕೆದಾಟು: ಅವಿಭಜಿತ ಜಿಲ್ಲೆ ಸೇರಿಸಿ

7
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟಮುನಿಯಪ್ಪ ಒತ್ತಾಯ

ಮೇಕೆದಾಟು: ಅವಿಭಜಿತ ಜಿಲ್ಲೆ ಸೇರಿಸಿ

Published:
Updated:

ಕೋಲಾರ: ‘ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಮೇಕೆದಾಟು ಯೋಜನೆಯಲ್ಲಿ ಸೇರ್ಪಡೆ ಮಾಡಬೇಕು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಒತ್ತಾಯಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಅವಿಭಜಿತ ಕೋಲಾರ ಜಿಲ್ಲೆಯು ಹಲವು ದಶಕಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದೆ. ಈ ಜಿಲ್ಲೆಗಳ ಜನ ಸರ್ಕಾರ ಯಾವಾಗ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ’ ಎಂದರು.

‘ಮೇಕೆದಾಟು ಯೋಜನೆಯ ಆರಂಭದಲ್ಲಿ ಅವಿಭಜಿತ ಕೋಲಾರ ಜಿಲ್ಲೆಗೂ ನೀರು ಕೊಡುವ ಪ್ರಸ್ತಾಪವಿತ್ತು. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಚಿವ ಡಿ.ಕೆ.ಶಿವಕುಮಾರ್ ಸಂಚು ಮಾಡಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಯೋಜನೆಯಿಂದ ಕೈಬಿಟ್ಟಿದ್ದಾರೆ’ ಎಂದು ಆರೋಪಿಸಿದರು.

‘ಎರಡೂ ಜಿಲ್ಲೆಗಳನ್ನು ಮೇಕೆದಾಟು ಯೋಜನೆಯಲ್ಲಿ ಸೇರ್ಪಡೆ ಮಾಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪಕ್ಷದಿಂದ ಮನವಿ ಸಲ್ಲಿಸುತ್ತೇವೆ. ಜ.11 ಮತ್ತು 12ರಂದು ನಡೆಯುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳುತ್ತಿದ್ದು, ಆಗ ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಿ ಮನವಿ ಮಾಡುತ್ತೇವೆ’ ಎಂದು ಹೇಳಿದರು.

ಭವಿಷ್ಯದಲ್ಲಿ ಹಾಹಾಕಾರ: ‘ಮೇಕೆದಾಟು ಯೋಜನೆ ಸಾಧ್ಯತಾ ವರದಿಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಕೈ ಬಿಟ್ಟಿದ್ದು, ಮುಂದಿನ ವಿಸ್ತೃತ ವರದಿಯಲ್ಲಿ 2 ಜಿಲ್ಲೆಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಅವಳಿ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಿಸಬೇಕಾಗುತ್ತದೆ’ ಎಂದು ಮಾಜಿ ಸಚಿವ ಎ.ನಾಗರಾಜು ಎಚ್ಚರಿಸಿದರು.

‘ರಾಜ್ಯದಲ್ಲಿ ಹಿಂದಿನ ವರ್ಷ ಸಾಕಷ್ಟು ಮಳೆಯಾಗಿದ್ದರಿಂದ ತಮಿಳುನಾಡಿಗೆ ಸುಮಾರು 178 ಟಿಎಂಸಿ ನೀರು ಹರಿದಿದೆ. ಈ ಪೈಕಿ 150 ಟಿಎಂಸಿ ನೀರನ್ನು ಮಾತ್ರ ತಮಿಳುನಾಡು ಬಳಸಿಕೊಂಡಿದ್ದು, ಉಳಿಕೆ 28 ಟಿಎಂಸಿ ನೀರು ಸಮುದ್ರದ ಪಾಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮೇಕೆದಾಟು ಯೋಜನೆಯಲ್ಲಿ ಕೆಆರ್‍ಎಸ್‌ಗಿಂತಲೂ ಹೆಚ್ಚು ನೀರು ಸಂಗ್ರಹ ಸಾಮರ್ಥ್ಯದ ಅಂದರೆ 67 ಟಿಎಂಸಿ ನೀರು ಹಿಡಿದಿಟ್ಟುಕೊಳ್ಳುವ ಅಣೆಕಟ್ಟೆ ನಿರ್ಮಿಸಲಾಗುತ್ತದೆ. ₹ 6 ಸಾವಿರ ಕೋಟಿ ಅಂದಾಜು ವೆಚ್ಚದ ಯೋಜನೆ ಅನುಷ್ಠಾನಕ್ಕೆ 5 ಸಾವಿರ ಎಕರೆ ಅರಣ್ಯ ಭೂಮಿ ಅಗತ್ಯವಿದೆ. ಈ ಪೈಕಿ 200 ಎಕರೆ ಸರ್ಕಾರದ್ದು ಮತ್ತು 200 ಎಕರೆ ರೈತರದ್ದು’ ಎಂದು ವಿವರಿಸಿದರು.

10 ಟಿಎಂಸಿ ಹರಿಸಿ: ‘ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಜನಸಂಖ್ಯೆ 26 ಲಕ್ಷವಿದೆ. ಕಾವೇರಿ ನದಿಯಿಂದ 19.5 ಟಿಎಂಸಿ ನೀರನ್ನು ಆ ಜಿಲ್ಲೆಗೆ ಕುಡಿಯುವ ಉದ್ದೇಶಕ್ಕೆ ಕೊಡಲಾಗುತ್ತದೆ. 24 ಲಕ್ಷ ಜನಸಂಖ್ಯೆ ಇರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಕುಡಿಯಲು 18 ಟಿಎಂಸಿ ನೀರು ಅಗತ್ಯವಿದ್ದು, ಈ ಪೈಕಿ ಕನಿಷ್ಠ 10 ಟಿಎಂಸಿ ನೀರನ್ನಾದರೂ ಮೇಕೆದಾಟು ಯೋಜನೆಯಿಂದ ಹರಿಸಬೇಕು’ ಎಂದು ಆಗ್ರಹಿಸಿದರು.

‘ಎತ್ತಿನಹೊಳೆ ಯೋಜನೆಯಿಂದ ಜಿಲ್ಲೆಗೆ ನೀರು ಬರುವುದು ಅನುಮಾನ. ಕೆ.ಸಿ ವ್ಯಾಲಿ ಯೋಜನೆ ನೀರಿನ ವಿವಾರವಾಗಿ ಯಾವುದೇ ಆಕ್ಷೇಪವಿಲ್ಲ. ಬೆಂಗಳೂರಿಗೆ ರೂಪಿಸುತ್ತಿರುವ ಉಪ ನಗರ ರೈಲ್ವೆ ಯೋಜನೆಯಡಿ ಜಿಲ್ಲೆಯ ಬಂಗಾರಪೇಟೆಯನ್ನು ಸೇರಿಸಬೇಕು. ಬಂಗಾರಪೇಟೆ, ಕೆಜಿಎಫ್‌ ಮತ್ತು ಕೋಲಾರದಿಂದ ಬೆಂಗಳೂರಿಗೆ ಪ್ರತಿನಿತ್ಯ ಸುಮಾರು 50 ಸಾವಿರ ಮಂದಿ ಪ್ರಯಾಣಿಸುತ್ತಿದ್ದು, ಇವರಿಗೆ ಪ್ರಯೋಜನವಾಗಲಿದೆ’ ಎಂದರು.

ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಓಂಶಕ್ತಿ ಚಲಪತಿ, ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ವಿಜಯಕುಮಾರ್, ನರಸಿಂಹರಾಜು, ಪ್ರಧಾನ ಕಾರ್ಯದರ್ಶಿ ವಾಸುದೇವ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !