ಗಣರಾಜ್ಯೋತ್ಸವ: ಚ್ಯುತಿ ಬಾರದಂತೆ ಎಚ್ಚರವಹಿಸಿ

7
ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೂಚನೆ

ಗಣರಾಜ್ಯೋತ್ಸವ: ಚ್ಯುತಿ ಬಾರದಂತೆ ಎಚ್ಚರವಹಿಸಿ

Published:
Updated:
Prajavani

ಕೋಲಾರ: ‘ನಗರದಲ್ಲಿ ಜ.26ರಂದು ಆಚರಿಸುವ ಗಣರಾಜ್ಯೋತ್ಸವಕ್ಕೆ ಸಿದ್ಧತೆ ಕೈಗೊಳ್ಳಬೇಕು. ಕಾರ್ಯಕ್ರಮಕ್ಕೆ ಚ್ಯುತಿ ಬಾರದಂತೆ ಎಚ್ಚರವಹಿಸಬೇಕು ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೂಚಿಸಿದರು.

ಗಣರಾಜ್ಯೋತ್ಸವ ಸಂಬಂಧ ನಗರದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ನಗರದ ಸರ್ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಚರಿಸಲಾಗುತ್ತಿದ್ದು, ವಿವಿಧ ಸಮಿತಿಗಳಿಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು’ ಎಂದು ಹೇಳಿದರು.

‘ಜಿಲ್ಲಾ ಮಟ್ಟದ ಅಧಿಕಾರಿಗಳು ಬೆಳಿಗ್ಗೆ 8ಕ್ಕೆ ತಮ್ಮ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಿ ನಗರದ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣಕ್ಕೆ ಬರಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಬೆಳಿಗ್ಗೆ 9ಕ್ಕೆ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಮಾಡುತ್ತಾರೆ. ಎಲ್ಲಾ ಅಧಿಕಾರಿಗಳು ಹಾಗೂ ನೌಕರರು ಕಡ್ಡಾಯವಾಗಿ ಹಾಜರಿರಬೇಕು’ ಎಂದು ಸೂಚಿಸಿದರು.

‘ಜನಪ್ರತಿನಿಧಿಗಳು, ಅಧಿಕಾರಿಗಳು, ಸ್ವಾತಂತ್ರ್ಯ ಹೋರಾಟಗಾರರು, ಪತ್ರಕರ್ತರು ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಬೇಕು. ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಪಥಸಂಚಲನ, ಸಾಮೂಹಿಕ ವ್ಯಾಯಾಮ ಕಾರ್ಯಕ್ರಮ ಆಯೋಜಿಸಬೇಕು. ಶಿಕ್ಷಣ ಇಲಾಖೆ ಅಧಿಕಾರಿಗಳು ನುರಿತ ನೃತ್ಯ ಸಂಯೋಜಕರನ್ನು ನಿಯೋಜಿಸಿ ಮಕ್ಕಳಿಗೆ ನೃತ್ಯಾಭ್ಯಾಸ ಮಾಡಿಸಬೇಕು’ ಎಂದು ಹೇಳಿದರು.

‘ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಸಾರ್ವಜನಿಕರಿಗೆ, ಶಾಲಾ ಕಾಲೇಜು ಮಕ್ಕಳಿಗೆ ಕೆಎಸ್‌ಆರ್‌ಟಿಸಿಯಿಂದ ಹೆಚ್ಚುವರಿ ಬಸ್‌ ವ್ಯವಸ್ಥೆ ಮಾಡಬೇಕು. ತೋಟಗಾರಿಕೆ ಇಲಾಖೆಯವರು ಕ್ರೀಡಾಂಗಣದಲ್ಲಿ ವರ್ಣರಂಜಿತ ರಂಗೋಲಿ, ಹೂಕುಂಡಗಳ ಅಲಂಕಾರ ಮಾಡಬೇಕು. ಸ್ವಾತಂತ್ರ್ಯ ಹೋರಾಟಗಾರರು, ಚುನಾಯಿತ ಪ್ರತಿನಿಧಿಗಳಿಗೆ ಸಕಾಲಕ್ಕೆ ಆಹ್ವಾನ ಪತ್ರಿಕೆ ತಲುಪಿಸಬೇಕು’ ಎಂದು ತಿಳಿಸಿದರು.

‘ಗಣರಾಜ್ಯೋತ್ಸವ ದಿನದಂದು ಪ್ಲಾಸ್ಟಿಕ್ ಧ್ವಜಗಳ ಬಳಕೆ ನಿರ್ಬಂಧಿಸಬೇಕು. ನಗರಸಭೆ ಅಧಿಕಾರಿಗಳು ನಗರದಲ್ಲಿ ಕಾರ್ಯಾಚರಣೆ ನಡೆಸಿ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವವರ ಅಂಗಡಿ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಎಲ್ಲಾ ಸರ್ಕಾರಿ ಕಚೇರಿ ಕಟ್ಟಡಗಳಿಗೆ ಕಡ್ಡಾಯವಾಗಿ ವಿದ್ಯುತ್‌ ದೀಪಾಲಂಕಾರ ಮಾಡಬೇಕು. ಟಿ.ಚನ್ನಯ್ಯ ರಂಗಮಂದಿರದಲ್ಲಿ ಸಂಜೆ 5.30ಕ್ಕೆ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಶಿಕ್ಷಣ ಇಲಾಖೆಯಿಂದ ನಡೆಸಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರೋಹಿಣಿ ಕಟೋಚ್ ಸಪೆಟ್, ಉಪ ವಿಭಾಗಾಧಿಕಾರಿ ಕೆ.ಶುಭ ಕಲ್ಯಾಣ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !