ಗುರುವಾರ , ಮಾರ್ಚ್ 4, 2021
26 °C

ಹಿಂಸೆ ಬಿಟ್ಟು ಮುಖ್ಯವಾಹಿನಿಗೆ ಬನ್ನಿ: ಭಯೋತ್ಪಾದಕರಿಗೆ ಸೇನಾ ಮುಖ್ಯಸ್ಥರ ಕರೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಇನ್ನು ಸಹಿಸಲು ಸಾಧ್ಯವಿಲ್ಲ. ಶಾಂತಿ ಸ್ಥಾಪಿಸುವುದಕ್ಕಾಗಿ ಅಲ್ಲಿನ ಎಲ್ಲರೊಂದಿಗೆ ಮಾತುಕತೆ ನಡೆಸಲು ಸೇನೆ ಸಿದ್ಧವಿದೆ’ ಎಂದು ಸೇನಾಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ತಿಳಿಸಿದ್ದಾರೆ.

ಸೇನಾ ದಿನದ ಮುನ್ನ ದಿನ ನಡೆದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತದೊಳಗೆ ನುಸುಳಲು ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಸುಮಾರು 300 ಭಯೋತ್ಪಾದಕರು ಕಾಯುತ್ತಿದ್ದಾರೆ’ ಎಂದು ಹೇಳಿದರು.

‘ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಭದ್ರತಾ ಸಿಬ್ಬಂದಿ ನಾನಾ ಕಾರ್ಯತಂತ್ರವನ್ನು ಪ್ರಯೋಗಿಸುತ್ತಿದೆ.‌ ಶಾಂತವಾಗಿ ಮತ್ತು ಕಠಿಣವಾಗಿ.. ಹೀಗೆ ಎರಡನ್ನೂ ನಾವು ಅಳವಡಿಸಿಕೊಳ್ಳುತ್ತಿದ್ದೇವೆ. ಹಿಂಸೆಯನ್ನು ಬಿಟ್ಟು ಮುಖ್ಯವಾಹಿನಿ ಬರುವ ಅವಕಾಶವನ್ನು ನಾವು ನಿಮಗೆ ನೀಡುತ್ತಿದ್ದೇವೆ. ಒಂದು ವೇಳೆ ಇದು ನೆರವೇರಿದರೆ, ರಾಜ್ಯದ ಜನರಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದು ತಿಳಿಸಿದರು.

‘ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವುದಕ್ಕಾಗಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಆದರೂ, ಪ್ರತ್ಯೇಕವಾದಿಗಳೂ ಹಿಂಸೆಯನ್ನು ನಿಲ್ಲಿಸದಿದ್ದರೆ ನಾವು ಕಠಿಣ ನಿಲುವು ತಾಳಬೇಕಾಗುತ್ತದೆ. ಈ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ. ರಂಜಾನ್‌ ಸಂದರ್ಭದಲ್ಲಿ ಶಸ್ತ್ರಾಸ್ತ್ರ ತ್ಯಜಿಸಲು ಪ್ರತ್ಯೇಕವಾದಿಗಳಿಗೆ ಅವಕಾಶ ನೀಡಿದ್ದೇವೆ. ಒಂದು ವೇಳೆ ಯಾರಾದರೂ ಬಂದೂಕು ಕೈಗೆತ್ತಿಕೊಂಡರೆ ನಾವು ಕ್ರಮಕೈಗೊಳ್ಳುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಪಂಜಾಬ್‌ ಗಡಿಯಿಂದ ಭಯೋತ್ಪಾದಕರು ದೇಶದೊಳಗೆ ನುಸುಳ ಬಹುದಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಂತಹ ಚಟುವಟಿಕೆಯನ್ನು ನಿಯಂತ್ರಿಸಲು ನಮ್ಮ ಬಳಿ ತಂತ್ರಜ್ಞಾನವಿದೆ. ಉತ್ತರದಲ್ಲಿನ ಸೇನಾ ಪಡೆಗೆ ಸ್ನಿಪ್ಪರ್‌ ರೈಫಲ್‌ಗಳನ್ನು ನೀಡುತ್ತಿದ್ದೇವೆ. ಜೊತೆಗೆ ಗಡಿ ವೀಕ್ಷಣೆಗಾಗಿ ಕ್ವಾಡ್‌ಕಾಪ್ಟರ್‌ (ಕ್ಯಾಮೆರಾ ಡ್ರೋನ್) ಬಳಸುತ್ತಿದ್ದಾರೆ. ಈ ಅತ್ಯಾಧುನಿಕ ಉಪಕರಣಗಳು ಸ್ಪೋಟಕಗಳನ್ನು ಪತ್ತೆ ಹಚ್ಚುತ್ತವೆ’ ಎಂದು ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು