ತೆರಿಗೆ ವಸೂಲಿ ಮಾಡದಿದ್ದರೆ ಶಿಸ್ತುಕ್ರಮ:ಜಿ.ಪಂ ಸಿಇಒ ಜಗದೀಶ್‌ ಖಡಕ್‌ ಎಚ್ಚರಿಕೆ

7
ಕಾರ್ಯಾಗಾರದಲ್ಲಿ ಪಿಡಿಒಗಳಿಗೆ

ತೆರಿಗೆ ವಸೂಲಿ ಮಾಡದಿದ್ದರೆ ಶಿಸ್ತುಕ್ರಮ:ಜಿ.ಪಂ ಸಿಇಒ ಜಗದೀಶ್‌ ಖಡಕ್‌ ಎಚ್ಚರಿಕೆ

Published:
Updated:
Prajavani

ಕೋಲಾರ: ‘ಗ್ರಾಮೀಣ ಭಾಗದಲ್ಲಿ ಸಮರ್ಪಕವಾಗಿ ತೆರಿಗೆ ವಸೂಲಿ ಮಾಡದಿದ್ದರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಖಡಕ್‌ ಎಚ್ಚರಿಕೆ ನೀಡಿದರು.

ಇಲ್ಲಿ ಗುರುವಾರ ನಡೆದ ಜಿಲ್ಲೆಯ ಗ್ರಾ.ಪಂಗಳ ತೆರಿಗೆ ಪರಿಷ್ಕರಣೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿ, ‘ಸಮರ್ಪಕವಾಗಿ ತೆರಿಗೆ ವಸೂಲಿ ಮಾಡದ ಕರಸಂಗ್ರಹಗಾರರ ಸಂಬಳ ತಡೆ ಹಿಡಿಯುವಂತೆ ಸೂಚಿಸಿದ್ದರೂ ಪಿಡಿಒಗಳು ಕ್ರಮ ಕೈಗೊಂಡಿಲ್ಲ. ಇನ್ನಾದರೂ ಎಚ್ಚೆತ್ತು ಕರಸಂಗ್ರಹಗಾರರಿಂದ ಉತ್ತಮವಾಗಿ ಕೆಲಸ ಮಾಡಿಸದಿದ್ದರೆ ನಿಮ್ಮ ಸಂಬಳ ತಡೆ ಹಿಡಿಯುತ್ತೇವೆ’ ಎಂದರು.

‘ಪಂಚತಂತ್ರಾಂಶದಲ್ಲಿ ಮಾಹಿತಿ ತುಂಬದ ಕಾರಣ ಸಾಧನೆ ಶೂನ್ಯವಾಗಿದೆ. ಪ್ರತಿ ಆಸ್ತಿಯ ಮಾಹಿತಿಯನ್ನು ಪಂಚತಂತ್ರಾಂಶದಲ್ಲಿ ಅಡಕ ಮಾಡಬೇಕು. ಈ ಜವಾಬ್ದಾರಿಯನ್ನು ಎಲ್ಲಾ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು ನಿರ್ವಹಿಸಬೇಕು. ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಹೇಳಿದರು.

‘ಅನೇಕ ಪಿಡಿಒಗಳು ನಿವೃತ್ತಿಯ ಹಂತದಲ್ಲಿದ್ದಾರೆ. ಅವರಿಗೆ ತೆರಿಗೆ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಕೇಳಿದರೂ ತಡಬಡಿಸುತ್ತಾರೆ. ಅನೇಕರಿಗೆ ಕೆಲಸ ಮಾಡುವ ಆಸಕ್ತಿ ಇದ್ದರೂ ಅರಿವಿನ ಕೊರತೆಯಿಂದ ಬಹಳಷ್ಟು ತಪ್ಪು ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ವಸೂಲಿ ಏರಿಕೆ: ‘ಸಾಕಷ್ಟು ಗ್ರಾ.ಪಂಗಳಲ್ಲಿ ತೆರಿಗೆ ವಸೂಲಿ ಪ್ರಮಾಣವನ್ನು ಶೇ 60ರಷ್ಟು ತೋರಿಸಲಾಗುತ್ತಿದೆ. ನಾನು ಜಿಲ್ಲೆಗೆ ಬಂದಾಗ ತೆರಿಗೆ ವಸೂಲಾತಿ ಪ್ರಮಾಣ ಕೇವಲ ಶೇ 17ರಷ್ಟಿತ್ತು. 3 ತಿಂಗಳ ಅವಧಿಯಲ್ಲಿ ಶೇ 31ಕ್ಕೆ ಏರಿಕೆಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ನರೇಗಾ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆಯು ಶೇ 100ರಷ್ಟು ಪ್ರಗತಿ ಸಾಧಿಸಿ ರಾಜ್ಯದಲ್ಲೇ ಪ್ರಥಮ ಸ್ಥಾನಕ್ಕೇರಿದೆ. ಇದಕ್ಕೆ ಸಚಿವರು ಸಂತಸ ವ್ಯಕ್ತಪಡಿಸಿದ್ದು, ಎಲ್ಲಾ ಸಿಬ್ಬಂದಿಯ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಜಿಲ್ಲೆಯ ಪ್ರತಿಯೊಂದು ಅಂಗನವಾಡಿ, ಶಾಲೆಯಲ್ಲಿ ಕಡ್ಡಾಯವಾಗಿ ಕಾಂಪೌಂಡ್, ಶೌಚಾಲಯ ಹಾಗೂ ಆಟದ ಮೈದಾನ ವ್ಯವಸ್ಥೆ ಮಾಡಬೇಕು. ಕಲ್ಯಾಣಿ ಸ್ವಚ್ಛತೆಗೆ ಗ್ರಾ.ಪಂಗಳು ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಸೂಚಿಸಿದರು.

ಅಭಿವೃದ್ಧಿಗೆ ಸಹಕರಿಸಿ: ‘ಗ್ರಾ.ಪಂ ಕಚೇರಿಗಳಲ್ಲಿ ಸಕಾಲಕ್ಕೆ ಕೆಲಸ ಆಗದಿರುವ ಸಂಬಂಧ ಸಾರ್ವಜನಿಕರು ದೂರು ಹೇಳುತ್ತಾರೆ. ಅಧಿಕಾರಿಗಳು ಸರ್ಕಾರದ ಕೆಲಸವನ್ನು ದೇವರ ಕೆಲಸವೆಂದು ಭಾವಿಸಿ, ಬದ್ಧತೆಯಿಂದ ಕೆಲಸ ಮಾಡಬೇಕು. ತೆರಿಗೆ ವಸೂಲಿಯು ಸಿಬ್ಬಂದಿಯ ಜವಾಬ್ದಾರಿ. ಈ ಕೆಲಸವನ್ನು ಸರಿಯಾಗಿ ಮಾಡುವ ಮೂಲಕ ಗ್ರಾಮೀಣಾಭಿವೃದ್ಧಿಗೆ ಸಹಕರಿಸಿ’ ಎಂದು ಜಿ.ಪಂ ಅಧ್ಯಕ್ಷೆ ಗೀತಮ್ಮ ಕಿವಿಮಾತು ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (ಆರ್‌ಡಿಪಿಆರ್) ನಿರ್ದೇಶಕ ಕೆಂಪೇಗೌಡ, ತುಮಕೂರು ಜಿಲ್ಲೆಯ ಅಬ್ಬೆಗಟ್ಟ ಗ್ರಾ.ಪಂ ಪಿಡಿಒ ಸುಬ್ಬರಾಜ ಅರಸ್ ತೆರಿಗೆ ಪರಿಷ್ಕರಣೆ ಕುರಿತು ಮಾಹಿತಿ ನೀಡಿದರು. ಜಿ.ಪಂ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !