ವೈಜ್ಞಾನಿಕವಾಗಿ ಚಿಂತಿಸಿ ಅಭಿವೃದ್ಧಿಗೆ ಶ್ರಮಿಸಿ: ಡಿಡಿಪಿಐ ರತ್ನಯ್ಯ ಕಿವಿಮಾತು

7
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ

ವೈಜ್ಞಾನಿಕವಾಗಿ ಚಿಂತಿಸಿ ಅಭಿವೃದ್ಧಿಗೆ ಶ್ರಮಿಸಿ: ಡಿಡಿಪಿಐ ರತ್ನಯ್ಯ ಕಿವಿಮಾತು

Published:
Updated:
Prajavani

ಕೋಲಾರ: ‘ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಚಿಂತಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಕಿವಿಮಾತು ಹೇಳಿದರು.

ಜಿಲ್ಲಾಡಳಿತ ಮತ್ತು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ಲೋಬಲ್ ಸೆಷನ್–2019 ಕಾರ್ಯಕ್ರಮದಲ್ಲಿ ಮಾತನಾಡಿ, ‘ಯಾವುದೇ ವಿಷಯ ತಿಳಿಯುವ ಮೊದಲು ಪ್ರಶ್ನಿಸುವ ಮನೋಭಾವ ಬೆಳೆಯಬೇಕು. ಆಗ ಅದರೆ ಬಗ್ಗೆ ಹೆಚ್ಚು ಮಾಹಿತಿ ಪಡೆಯಲು ಸಹಾಯವಾಗುತ್ತದೆ’ ಎಂದು ಸಲಹೆ ನೀಡಿದರು.

‘ಜಿಲ್ಲೆಯಲ್ಲಿ ತೀವ್ರ ಬರಗಾಲ ಎದುರಾಗಿದ್ದರೂ ರೈತರು ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದಾರೆ. ಲಭ್ಯವಿರುವ ಅಲ್ಪಸ್ವಲ್ಪ ನೀರಿನಲ್ಲಿ ತರಕಾರಿ ಬೆಳೆದು ರಾಜ್ಯ ಮತ್ತು ದೇಶಕ್ಕೆ ಸರಬರಾಜು ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ’ ಎಂದರು.

‘ಕೃಷಿ ಅಥವಾ ತೋಟಗಾರಿಕೆ ಕ್ಷೇತ್ರಕ್ಕೆ ಇಸ್ರೇಲ್ ಕೃಷಿ ಸೇರಿದಂತೆ ಯಾವುದೇ ಮಾದರಿ ಪರಿಚಯಿಸಿದರೂ ರೈತರ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಅವರು ಬೆಳೆಯುವ ಬೆಳೆಗಳಿಗೆ ಮೊದಲು ಬೆಂಬಲ ಬೆಲೆ ನೀಡಿದರೆ ಮಾತ್ರ ರೈತರು ಚೇತರಿಸಿಕೊಳ್ಳುತ್ತಾರೆ. ದೇಶಕ್ಕೆ ಅಗತ್ಯವಿರುವ ಆಹಾರ ಉತ್ಪಾದನೆ ಮಾಡಿ, ಸಂಪನ್ಮೂಲ ಅಭಿವೃದ್ಧಿಗೂ ಕೈಜೋಡಿಸುತ್ತಾರೆ’ ಎಂದು ಅಭಿಪ್ರಾಯಪಟ್ಟರು.

‘ವಿಜ್ಞಾನದ ಹೆಸರಿನಲ್ಲಿ ಮೋಜು ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಪರಿಸರ ನಾಶವಾಗುತ್ತಿದೆ. ಪರಿಸರ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಂಡು ಮುಂದಿನ ಪೀಳಿಗೆಯನ್ನು ಉಳಿಸಬೇಕು’ ಎಂದು ತಿಳಿಸಿದರು.

ಮಾಹಿತಿ ಪಡೆಯಿರಿ: ‘ಕಾಲಕ್ಕೆ ತಕ್ಕಂತೆ ಬೆಳೆ ಬಿತ್ತನೆ ಮಾಡುವ ಬಗ್ಗೆ ರೈತರು ಮಾಹಿತಿ ಪಡೆದಾಗ ಆರ್ಥಿಕವಾಗಿ ಸಬಲರಾಗಬಹುದು’ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಪ್ರೊ.ಬಿ.ಜಿ.ಪ್ರಕಾಶ್ ಹೇಳಿದರು.

‘ಪ್ರತಿ ಬೆಳೆಯಲ್ಲೂ ಹೊಸ ಸಂಶೋಧನೆ ನಡೆದಿದೆ. ಇದರ ಪ್ರಯೋಗ ಸಹ ಯಶಸ್ವಿಯಾಗಿದ್ದು, ಈ ಕುರಿತು ರೈತರಿಗೆ ಕೃಷಿ ವಿಜ್ಞಾನ ಕೇಂದ್ರದ ಮೂಲಕ ಮಾಹಿತಿ ನೀಡಲಾಗುತ್ತಿದೆ. ರೈತರ ಇದರ ಪ್ರಯೋಜನ ಪಡೆಯಬೇಕು’ ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಅಂಗವಾಗಿ ನಡೆದ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಯಿತು. ಕರ್ನಾಟಕ ಕಲಾದರ್ಶಿನಿ ಕಲಾ ತಂಡದ ಕಲಾವಿದರು ರಾಜ್ಯ ಸರ್ಕಾರದ ಲಾಂಭನದ ಗೀತೆಗೆ ಯಕ್ಷಗಾನ ಪ್ರದರ್ಶಿಸಿದರು.

ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಉಪಾಧ್ಯಕ್ಷ ಉಮೇಶ್‌ ಬಣಕಾರ್, ವ್ಯವಸ್ಥಾಪಕ ಎಂ.ಬಿ.ಚಿದಾನಂದ, ಸಮಾಜ ವಿಜ್ಞಾನಿ ರವೀಂದ್ರನಾಥ್, ಮೆಥೋಡಿಸ್ಟ್‌ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಬಿ.ಶಾಲಿನಿ ಇಡಿತ್‌ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !