ತೋಟಗಾರಿಕೆಯಲ್ಲಿ ಗೆಳೆಯರ ಗುಂಪಿನ ಸಾಧನೆ ಮಾದರಿ

7

ತೋಟಗಾರಿಕೆಯಲ್ಲಿ ಗೆಳೆಯರ ಗುಂಪಿನ ಸಾಧನೆ ಮಾದರಿ

Published:
Updated:
Prajavani

ಶಕ್ತಿನಗರ: ರಾಯಚೂರು ತಾಲ್ಲುಕಿನ ದೇವಸೂಗೂರು ಮತ್ತು ಚಂದ್ರಬಂಡಾ ಹೋಬಳಿ ವ್ಯಾಪ್ತಿಯ ನಿರುದ್ಯೋಗಿಯಾಗಿದ್ದ ರೈತ ಕುಟುಂಬದ ಯುವಕರು, ಒಟ್ಟಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆದು ಮಾದರಿ ರೈತರಾಗಿ ಬೆಳೆದಿದ್ದಾರೆ.

ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತ ಬಂಪರ್ ಆದಾಯ ಪಡೆಯುತ್ತಿದ್ದಾರೆ. ಎರಡು ಸಾವಿರ ಎಕರೆಯಲ್ಲಿ ಮಾವು, 600 ಎಕರೆಯಲ್ಲಿ ಪಪ್ಪಾಯಿ ಹಾಗೂ ಅಂಜೂರ 600 ಎಕರೆಯಲ್ಲಿ ಬೆಳೆಯುತ್ತಿದ್ದಾರೆ. ದಿನಕ್ಕೆ 2ರಿಂದ 3 ಟನ್‌ ಅವರು ಬೆಳೆದಿರುವ ಹಣ್ಣಗಳನ್ನು ಬೆಂಗಳೂರು, ಆಂಧ್ರಪ್ರದೇಶ,ತೆಲಂಗಾಣ,ಕೇರಳ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳ ಮಾರುಕಟ್ಟೆಗೆ ಕಳುಹಿಸುತ್ತಾರೆ.
ಅಂಜೂರ ಬಡ ರೈತರಿಗೆ ಸಾಕಷ್ಟು ಅನುಕೂಲವಾಗುವ ಬೆಳೆ ಎಂಬುದು ಅವರ ಅನಿಸಿಕೆ. ತೋಟಗಾರಿಕೆ ಇಲಾಖೆಯ ಸೌಲಭ್ಯ ಪಡೆದುಕೊಂಡು ಒಂದು ಎಕರೆ ಪ್ರದೇಶದಲ್ಲಿ ಅಂಜೂರ ನಾಟಿ ಮಾಡಲು 40 ಸಾವಿರ ಖರ್ಚು ಆಗುತ್ತದೆ. ಒಂದು ಎಕರೆಯಲ್ಲಿ ಬೆಳೆಯುವ ಅಂಜೂರದಿಂದ ರೈತ ಕನಿಷ್ಠ ತಿಂಗಳಿಗೆ ಒಂದು ಲಕ್ಷ ಆದಾಯ ಗಳಿಸಬಹುದು ಎನ್ನುತ್ತಾರೆ ಯುವ ರೈತ ಸುರೇಶಗೌಡ.

ಕಡಿಮೆ ಖರ್ಚಿನಲ್ಲಿ ರೈತರು ಬೆಳೆಯಬಹುದಾದ ಅಂಜೂರ ಸಸಿಗಳನ್ನು ರೈತರಿಗೆ ಉಚಿತವಾಗಿ ನೀಡುತ್ತಿದ್ದಾರೆ. ತರಕಾರಿಯಂತೆ ಎರಡು ದಿನಗಳಿಗೊಮ್ಮೆ ಅಂಜೂರವನ್ನು ಮಾರುಕಟ್ಟೆಗೆ ಸಾಗಿಸಿ ವರ್ಷಪೂರ್ತಿ ರೈತ ತನ್ನ ಕೈಯಲ್ಲಿ ಹಣ ನೋಡಬಹುದು. ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ತಂದು ಕೊಡುವ ಅಂಜೂರದ ಬಗ್ಗೆ ತಮ್ಮ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಯುವ ರೈತರು ಅರಿವು ಮೂಡಿಸುತ್ತಿದ್ದಾರೆ.

ರೈತರು ಬೆಳೆದ ಬೆಳಗಳಿಗೆ ಸೂಕ್ತ ಬೆಲೆ ದೊರೆತಿರಲಿಲ್ಲ. ಮಧ್ಯವರ್ತಿಗಳಿಗೆ ಹೆಚ್ಚಿನಲಾಭಂಶ ಪಡೆಯುತ್ತಿದ್ದರು. ಇದರಿಂದ ನೊಂದ ಯುವ ರೈತರು ಒಗ್ಗೂಡಿ,ರೈತರಿಗೆ ಲಾಭವನ್ನು ದೊರೆಯುವಂತೆ ಮಾಡಲು ದೇವಸೂಗೂರು ಗ್ರಾಮದಲ್ಲಿ ಪರಿಸರ ಪ್ರೇಮಿ ತೋಟಗಾರಿಕೆ ರೈತ ಉತ್ಪಾದಕರ ಲಿಮಿಟೆಡ್‌ ಕಂಪನಿವೊಂದನ್ನು ಸ್ಥಾಪಿಸಿ ಹೊಸ ಅಧ್ಯಾಯ ಬರೆದಿದ್ದಾರೆ.

ರೈತರೇ ಬಂಡವಾಳ ಹೂಡಿ ಆರಂಭಿಸಿದ ಈ ಕಂಪನಿಯಲ್ಲಿ  1,130 ರೈತಾಪಿ ಯುವಕರು ಸದಸ್ಯರಾಗಿದ್ದಾರೆ. 11 ನಿರ್ದೇಶಕರ ಮಂಡಳಿಯಿದೆ. ಷೇರುದಾರರಾಗಿರುವ ಎಲ್ಲ ರೈತರ ಮಾಹಿತಿ ಸಂಸ್ಥೆಯಲ್ಲಿ ದಾಖಲಿಸಿ ಇಡಲಾಗಿದೆ. ಯಾವ ತಿಂಗಳಿನಲ್ಲಿ ಎಷ್ಟು ಪ್ರಮಾಣದ ತೋಟಗಾರಿಕೆ ಉತ್ಪನ್ನ ಮಾರುಕಟ್ಟೆಗೆ ಒಯ್ಯುಲು ಹಾಗೂ ಮಾರುಕಟ್ಟೆಯ ದರ, ಎಲ್ಲಿ ಮಾರಾಟ ಮಾಡಿದರೆ ಲಾಭ ದೊರೆಯುತ್ತದೆ ಎಂಬುದನ್ನು ನಿರ್ದೇಶಕರ ಮಂಡಳಿಯ ಸದಸ್ಯರು ಸಮಾಲೋಚನಾ ಸಭೆ ನಡೆಸುತ್ತಾರೆ.

ಕಡಿಮೆ ಹಿಡುವಳಿಯಿರುವ ಷೇರುದಾರರಿಂದ, ಹೆಚ್ಚಿನ ಹಿಡುವಳಿಯಿರುವ ರೈತರವರೆಗೆ, ಎಲ್ಲರ ಉತ್ಪನ್ನವನ್ನು ಸೂಕ್ತ ರೀತಿಯಲ್ಲಿ ಮಾರುಕಟ್ಟೆಗೆ ತಲುಪಿಸುತ್ತಾರೆ. ಉತ್ತಮ ಬೆಲೆಗೆ ಮಾರಾಟ ಮಾಡಿ ಬರುವ ಆದಾಯವನ್ನು ನೇರವಾಗಿ ರೈತರಿಗೆ ತಲುಪಬೇಕು ಎನ್ನುವುದು ಉದ್ದೇಶವನ್ನು ಕಂಪನಿ ಹೊಂದಿದೆ.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !