ಬಾಗಲಕೋಟೆ ತಾ.ಪಂ ಅಧ್ಯಕ್ಷ ಸ್ಥಾನ: ಇನ್ನು ಗೌಡರ ಕುರ್ಚಿ ಭದ್ರ!

7
ತಾ.ಪಂ ಅಧ್ಯಕ್ಷ ಸ್ಥಾನ: ಫಲ ನೀಡಿತು ಆಪತ್ಕಾಲದ ನೆಂಟಸ್ತನ

ಬಾಗಲಕೋಟೆ ತಾ.ಪಂ ಅಧ್ಯಕ್ಷ ಸ್ಥಾನ: ಇನ್ನು ಗೌಡರ ಕುರ್ಚಿ ಭದ್ರ!

Published:
Updated:
Prajavani

ಬಾಗಲಕೋಟೆ: ಇಲ್ಲಿನ ತಾಲ್ಲೂಕು ಪಂಚಾಯ್ತಿಯ ಅಧ್ಯಕ್ಷ ಸ್ಥಾನದಲ್ಲಿ ಇನ್ನು ಸಂಪೂರ್ಣ ಐದು ವರ್ಷ ಕಾಲ ಚನ್ನನಗೌಡ ಪರನಗೌಡರ ಮುಂದುವರೆಯಲಿದ್ದಾರೆ. ಸದಸ್ಯರು ಗೈರು ಹಾಜರಾದ ಪರಿಣಾಮ ಶುಕ್ರವಾರ ನಡೆದ ಅವಿಶ್ವಾಸ ನಿರ್ಣಯ ಮಂಡನೆ ಸಭೆ ವಿಫಲವಾಯಿತು. 

ಇದು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗ ಉಂಟು ಮಾಡಿದರೆ, ಬಿಜೆಪಿಯೊಂದಿಗಿನ ‘ಆಪತ್ಕಾಲದ ನೆಂಟಸ್ತನ’ ಫಲ ನೀಡಿದ ಸಂಭ್ರಮ ಚನ್ನನಗೌಡ ಬೆಂಬಲಿಗರಲ್ಲಿ ಮನೆ ಮಾಡಿತ್ತು. ‌

ಬೆಳಿಗ್ಗೆ 11 ಗಂಟೆಗೆ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಅವಿಶ್ವಾಸ ನಿರ್ಣಯಕ್ಕೆ ಸಭೆ ಕರೆಯಲಾಗಿತ್ತು. ಆದರೂ ಕಾಂಗ್ರೆಸ್–ಬಿಜೆಪಿ ಸೇರಿದಂತೆ ತಾಲ್ಲೂಕು ಪಂಚಾಯ್ತಿಯ 18 ಮಂದಿ ಸದಸ್ಯರಲ್ಲಿ ಒಬ್ಬರೂ ಸಭೆಗೆ ಬರಲಿಲ್ಲ. ಬದಲಿಗೆ ಕಾರ್ಯನಿರ್ವಹಣಾಧಿಕಾರಿ ಎನ್‌.ಜಿ.ಬಸರಿಗಿಡದ ಮಾತ್ರ ಬಂದು ಕಾದು ಕುಳಿತಿದ್ದರು. ನಿಗದಿತ ಅವಧಿ ಪೂರ್ಣಗೊಳ್ಳುವವರೆಗೂ ಕಾದು ಕುಳಿತಿದ್ದ ಅವರು, ಅವಿಶ್ವಾಸ ಮಂಡನೆ ಪ್ರಕ್ರಿಯೆ ವಿಫಲವಾಗಿದೆ ಎಂದು ನಂತರ ಅಧಿಕೃತವಾಗಿ ಘೋಷಿಸಿದರು.

ಇದರಿಂದ ಚನ್ನನಗೌಡಗೆ ಅಧ್ಯಕ್ಷ ಸ್ಥಾನ ಅಬಾಧಿತವಾಯಿತು. ಸದಸ್ಯರು ಬಾರದಿದ್ದರೂ ಅವರ ರಕ್ಷಣೆಗೆಂದು ಸ್ಥಳದಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸರು ನಿಯೋಜನೆಗೊಂಡಿದ್ದರು.

ವರಿಷ್ಠರಿಗೆ ಸಡ್ಡು:

ಮೊದಲ ಅವಧಿಯ 30 ತಿಂಗಳು ಅಧಿಕಾರಾವಧಿ ಪೂರ್ಣಗೊಂಡ ಕಾರಣ, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಕ್ಷದ ಮುಖಂಡರು ಸೂಚನೆ ನೀಡಿದ್ದರು. ಅದಕ್ಕೆ ಅಧ್ಯಕ್ಷ ಚನ್ನನಗೌಡ ಸೊಪ್ಪು ಹಾಕಿರಲಿಲ್ಲ. ಉಪಾಧ್ಯಕ್ಷ ಸಲೀಂ ಶೇಖ್ ಮಾತ್ರ ರಾಜೀನಾಮೆ ನೀಡಿದ್ದರು. ಒಪ್ಪಂದದ ಅವಧಿ ಮುಗಿದು ಎರಡು ತಿಂಗಳು ಕಳೆದರೂ ವರಿಷ್ಠರ ಸೂಚನೆಗೆ ಮನ್ನಣೆ ಕೊಡದ ಕಾರಣ ಚನ್ನನಗೌಡ ವಿರುದ್ಧ 14 ಮಂದಿ ಸದಸ್ಯರು ಅವಿಶ್ವಾಸ ಮಂಡನೆಗೆ ಮುಂದಾಗಿದ್ದರು. ಆ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗೆ ಲಿಖಿತ ಪತ್ರ ನೀಡಿದ್ದರು.

ಈ ಅಪಾಯ ನಿರೀಕ್ಷಿಸಿದ್ದ ಚನ್ನನಗೌಡ, ರಕ್ಷಣೆಗೆ ಪಕ್ಷದಲ್ಲಿನ ಅತೃಪ್ತರು ಹಾಗೂ ಬಿಜೆಪಿ ಸದಸ್ಯರ ಮೊರೆ ಹೋಗಿದ್ದರು. ಅದು ಈಗ ಸದಸ್ಯರ ಗೈರು ಹಾಜರಿ ರೂಪದಲ್ಲಿ ಫಲ ನೀಡಿದೆ. ವಿಶೇಷವೆಂದರೆ ಜಿಲ್ಲಾಧಿಕಾರಿಗೆ ಪತ್ರ ನೀಡಿದ್ದ ಸದಸ್ಯರೂ ಸಭೆಗೆ ತಪ್ಪಿಸಿಕೊಂಡು ಪಕ್ಷದ ವರಿಷ್ಠರಿಗೆ ಮುಜುಗರ ಇನ್ನಷ್ಟು ಹೆಚ್ಚಿಸಿದ್ದಾರೆ.

‘ಸದಸ್ಯರ ಪತ್ರದ ಹಿನ್ನೆಲೆಯಲ್ಲಿ ಮುಂದಿನ ಕ್ರಮಕ್ಕೆ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಸೂಚನೆ ನೀಡಿದ್ದರು. ಅವಿಶ್ವಾಸ ಮಂಡನೆಗೆ ಸಭೆ ಕರೆಯುವಂತೆ ಅಧ್ಯಕ್ಷರಿಗೆ ತಿಳಿಸಿದರೂ ಅವರು ಆಸಕ್ತಿ ತೋರಲಿಲ್ಲ. ಉಪಾಧ್ಯಕ್ಷರ ಸ್ಥಾನ ಖಾಲಿ ಇರುವ ಕಾರಣ ಕೊನೆಗೆ ಕೆಪಿಆರ್‌ ಕಾಯ್ದೆ ಸೆಕ್ಷನ್ ನಾನೇ ಅವಿಶ್ವಾಸ ಮಂಡನೆಗೆ ಸಮಯ ನಿಗದಿಗೊಳಿಸಿದ್ದೆನು’ ಎಂದು ಇಒ ಎನ್‌.ಜಿ.ಬಸರಿಗಿಡದ ಸುದ್ದಿಗಾರರಿಗೆ ತಿಳಿಸಿದರು.

ಎಲ್ಲವೂ ಗುಪ್ತ್, ಗುಪ್ತ್: ಅವಿಶ್ವಾಸ ನಿರ್ಣಯ ಮಂಡನೆ ಸಭೆಯ ನಂತರವೂ ಅಧ್ಯಕ್ಷರಾಗಲಿ, ಸದಸ್ಯರಾಗಲಿ ಮಾಧ್ಯಮಗಳ ಪ್ರತಿಕ್ರಿಯೆಗೆ ಸಿಗಲಿಲ್ಲ. ಎಲ್ಲರ ಮೊಬೈಲ್‌ಫೋನ್‌ಗಳು ಸ್ವಿಚ್ಡ್ ಆಫ್ ಆಗಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !