ವಿದ್ಯಾರ್ಥಿ ಜೀವನದ ನಿರ್ಧಾರಗಳು ಅಚಲವಾಗಿರಲಿ

7
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ನವೀಕರಣ ಮತ್ತು ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಶಾಸಕ ಡಾ.ಕೆ.ಸುಧಾಕರ್ ಸಲಹೆ

ವಿದ್ಯಾರ್ಥಿ ಜೀವನದ ನಿರ್ಧಾರಗಳು ಅಚಲವಾಗಿರಲಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ವಿದ್ಯಾರ್ಥಿಗಳಿಗೆ ಗುರಿ, ಪರಿಶ್ರಮ, ನಿರಂತರ ಅಭ್ಯಾಸ, ನಂಬಿಕೆಯ ಜತೆಗೆ ವಿದ್ಯಾರ್ಥಿ ಜೀವನದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಅಚಲವಾಗಿರಬೇಕು’ ಎಂದು ಶಾಸಕ ಡಾ.ಕೆ. ಸುಧಾಕರ್ ತಿಳಿಸಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾಲೇಜು ಕಟ್ಟಡ ನವೀಕರಣ ಮತ್ತು ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮ ಜೀವನದಲ್ಲಿ ಅನೇಕ ಕಷ್ಟಗಳು ಬರುತ್ತವೆ. ಅವುಗಳನ್ನು ಮೀರಿ ಬೆಳೆಯಬೇಕಾದರೆ ನಾವು ತೆಗೆದುಕೊಳ್ಳುವ ನಿರ್ಧಾರಗಳು ದೃಢವಾಗಿರಬೇಕು. ಸರ್.ಎಂ.ವಿಶ್ವೇಶ್ವರಯ್ಯನವರಂತಹ ಮೇಧಾವಿಗಳು ಓದಿದ ಶಾಲೆಯಲ್ಲಿ ಓದುತ್ತಿರುವ ನಿಮಗೆ ಅವರ ಜೀವನ ಮತ್ತು ಆದರ್ಶಗಳು ಸ್ಫೂರ್ತಿಯಾಗಬೇಕು. ಇವತ್ತು ನಾವೆಲ್ಲರೂ ಸ್ಪರ್ಧಾ ಯುಗದಲ್ಲಿದ್ದೇವೆ. ಆದ್ದರಿಂದ ವಿದ್ಯಾರ್ಥಿಗಳಿಗೆ ನಿರಂತರ ಪರಿಶ್ರಮ ಅಗತ್ಯವಿದೆ’ ಎಂದು ಹೇಳಿದರು.

‘ಇದು ವಿಶ್ವೇಶ್ವರಯ್ಯನವರು ಓದಿದ ಶಾಲೆ. ಈ ಶಾಲೆಗೆ ಸುಮಾರು 100 ವರ್ಷಗಳ ಇತಿಹಾಸವಿದೆ. ಆದ್ದರಿಂದ ನಮ್ಮ ಇತಿಹಾಸವನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅದಕ್ಕಾಗಿ ಕುಸಿಯುವ ಹಂತದಲ್ಲಿರುವ ಕಾಲೇಜಿನ ಪ್ರಮುಖ ಕಟ್ಟಡವನ್ನು ₹68 ಲಕ್ಷ ವೆಚ್ಚದಲ್ಲಿ ನವೀಕರಿಸಲು ಯೋಜನೆ ರೂಪಿಸಲಾಗಿದೆ. ಈ ಕಾರ್ಯವನ್ನು ಎನ್‌ಜಿಒ ಒಂದಕ್ಕೆ ವಹಿಸಲಾಗಿದೆ’ ಎಂದರು.

‘ಕಾಲೇಜಿನಲ್ಲಿ 8 ಹೊಸ ಕೊಠಡಿಗಳನ್ನು ನಿರ್ಮಿಸುವ ಜತೆಗೆ ಎರಡು ವಿಶಾಲವಾದ ಮತ್ತು ಸುಸಜ್ಜಿತವಾದ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುತ್ತದೆ. ಈ ಎಲ್ಲಾ ಕಾಮಗಾರಿ ಒಂದು ವರ್ಷದ ಒಳಗೆ ಪೂರ್ಣಗೊಳಿಸಿ, ಕೊಠಡಿಗಳನ್ನು ಹಸ್ತಾಂತರಿಸಲಾಗುತ್ತದೆ. ಕಟ್ಟಡ ಗುಣಮಟ್ಟದಿಂದ ಕೂಡಿರಬೇಕು. ಗುತ್ತಿಗೆದಾರರು ಯಾವುದೇ ಕಾರಣಕ್ಕೂ ಕಾಮಗಾರಿಯ ಗುಣಮಟ್ಟದ ವಿಷಯದಲ್ಲಿ ರಾಜಿಯಾಗಬಾರದು’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳು ಜೀವನದ ಪ್ರತಿಯೊಂದು ಹಂತದಲ್ಲಿ ಸಿಗುವ ಅವಕಾಶ, ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಗುರಿ ಸಾಧಿಸುವ ಹಾದಿಯಲ್ಲಿ ಮುನ್ನಡೆಯಬೇಕು. ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡದೆ ಜ್ಞಾನಾರ್ಜನೆಗೆ ಬಳಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಸಮಯ ಪರಿಪಾಲನೆ ಅತಿ ಮುಖ್ಯವಾದದ್ದು’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಟಿಎಪಿಸಿಎಂಎಸ್ ಅಧ್ಯಕ್ಷ ಆವುಲರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾಗೇಶ್, ಕೋಚಿಮುಲ್‌ ನಿರ್ದೇಶಕ ಕೆ.ವಿ.ನಾಗರಾಜ್, ನಗರಸಭೆ ಅಧ್ಯಕ್ಷ ಮುನಿಕೃಷ್ಣ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜನಾರ್ಧನ್ ,ಕಾಲೇಜಿನ ಪ್ರಾಂಶುಪಾಲ ಮಂಜುನಾಥ್, ಮುಖಂಡರಾದ ಯಲುವಳ್ಳಿ ರಮೇಶ್, ಮರಳುಕುಂಟೆ ಕೃಷ್ಣಮೂರ್ತಿ, ಪ್ರಾಧ್ಯಾಪಕರಾದ ಸಿ.ಎಲ್.ಸತೀಶ್ ಕುಮಾರ್, ಮೋಹನ್ ಕುಮಾರ್, ರಮೇಶ್ ಬಾಬು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !