ಕೆ.ಸಿ ವ್ಯಾಲಿ: ಮೇಲ್ಮನವಿ ಸಲ್ಲಿಸಲಿ: ಸಂಸದ ಮುನಿಯಪ್ಪ ಒತ್ತಾಯ

7
ರಾಜ್ಯ ಸರ್ಕಾರಕ್ಕೆ

ಕೆ.ಸಿ ವ್ಯಾಲಿ: ಮೇಲ್ಮನವಿ ಸಲ್ಲಿಸಲಿ: ಸಂಸದ ಮುನಿಯಪ್ಪ ಒತ್ತಾಯ

Published:
Updated:

ಕೋಲಾರ: ‘ಜಿಲ್ಲೆಯ ಕೆರೆಗಳಿಗೆ ಕೆ.ಸಿ ವ್ಯಾಲಿ ಯೋಜನೆ ನೀರು ಹರಿಸದಂತೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದ್ದು, ರಾಜ್ಯ ಸರ್ಕಾರವು ತಡೆಯಾಜ್ಞೆ ತೆರವುಗೊಳಿಸುವಂತೆ ನ್ಯಾಯಾಲಯಕ್ಕೆ ಶೀಘ್ರವೇ ಮೇಲ್ಮನವಿ ಸಲ್ಲಿಸಬೇಕು’ ಎಂದು ಸಂಸದ ಕೆ.ಎಚ್.ಮುನಿಯಪ್ಪ ಒತ್ತಾಯಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಹಿಂದಿನ ಕಾಂಗ್ರೆಸ್‌ ಸರ್ಕಾರ ಮುಂದಾಲೋಚನೆಯಿಂದ ಜೆಡಿಎಸ್ ಹಾಗೂ ಬಿಜೆಪಿ ಶಾಸಕರೊಂದಿಗೆ ಚರ್ಚಿಸಿ ಕೆ.ಸಿ ವ್ಯಾಲಿ ಯೋಜನೆ ಜಾರಿಗೊಳಿಸಿತು. ಆದರೂ ನ್ಯಾಯಾಲಯ ತಡೆಯಾಜ್ಞೆ ನೀಡಿರುವುದು ಬೇಸರ ಉಂಟು ಮಾಡಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಕೆಲವರು ನೀರು ಹರಿಸದಂತೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಹೈಕೋರ್ಟ್‌ನಲ್ಲಿ ಅರ್ಜಿ ವಜಾಗೊಂಡ ನಂತರ ಸುಪ್ರೀಂ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಸರ್ಕಾರ ಅನುಭವಿ ವಕೀಲರನ್ನು ನೇಮಿಸಿ ಯೋಜನೆಯಿಂದ ಜನರಿಗೆ ಆಗುವ ಅನುಕೂಲದ ಬಗ್ಗೆ ನ್ಯಾಯಾಲಯಕ್ಕೆ ಸತ್ಯ ಮನವರಿಕೆ ಮಾಡಿಕೊಡಬೇಕು. ಯಾವ ಉದ್ದೇಶಕ್ಕೆ ಯೋಜನೆ ಜಾರಿಗೊಳಿಸಲಾಗಿದೆ ಎಂಬ ಸಂಗತಿಯನ್ನು ನ್ಯಾಯಾಲಯಕ್ಕೆ ತಿಳಿಸಬೇಕು’ ಎಂದು ಹೇಳಿದರು.

‘ಕೋರ್ಟ್‌ನಿಂದ ತಡೆಯಾಜ್ಞೆ ತಂದಿರುವುದರ ಹಿಂದೆ ಯಾರ ಕೈವಾಡವಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಮುನಿಯಪ್ಪ, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೋರ್ಟ್‌ಗೆ ಹೋಗುವವರನ್ನು ತಡೆಯಲು ಸಾಧ್ಯವಿಲ್ಲ. ಈ ಯೋಜನೆಗೆ ರಾಜಕೀಯ ಬಣ್ಣ ಕಟ್ಟಬಾರದೆಂದು ತೀರ್ಮಾನಿಸಿದ್ದೇನೆ. ಜನರಿಗೆ ತೊಂದರೆ ನೀಡುವವರು ತೊಂದರೆ ಅನುಭವಿಸುತ್ತಾರೆ’ ಎಂದರು.

ಮೆಗಾ ಡೇರಿ: ‘ಮಾಜಿ ಸಚಿವ ದಿವಂಗತ ಎಂ.ವಿ.ಕೃಷ್ಣಪ್ಪರ ಜನ್ಮ ಶತಮಾನೋತ್ಸವದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ₹ 160 ಕೋಟಿ ವೆಚ್ಚದಲ್ಲಿ ಮೆಗಾ ಡೇರಿ ಆರಂಭಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ’ ಎಂದು ಕೋಚಿಮುಲ್ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ವಿವರಿಸಿದರು.

‘ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈಗಾಗಲೇ ಮೆಗಾ ಡೇರಿ ನಿರ್ಮಿಸಲಾಗಿದೆ. ಒಕ್ಕೂಟದಲ್ಲಿ ಹಿಂದಿನಿಂದಲೂ ಹಳೆ ತಂತ್ರಜ್ಞಾನದಲ್ಲೇ ಹಾಲು ಸಂಸ್ಕರಣೆ ಮಾಡಲಾಗುತ್ತಿದೆ. ಈ ತಂತ್ರಜ್ಞಾನ ಬದಲಾವಣೆ ಮಾಡಲು ನಡೆಸಿದ್ದು, ಜ.19ರಂದು ನಡೆಯುವ ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರ ಸಭೆಯಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಮಾಹಿತಿ ನೀಡಿದರು.

‘ಕೃಷ್ಣಪ್ಪರ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ದಿನಾಂಕವನ್ನು ನಿರ್ದೇಶಕರ ಸಭೆಯಲ್ಲಿ ನಿರ್ಧರಿಸಲಾಗುವುದು. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಚಿವರನ್ನು ಕಾರ್ಯಕ್ರಮಕ್ಕೆ ಕರೆಸಿ ಮೆಗಾ ಡೇರಿಗೆ ಶಂಕುಸ್ಥಾಪನೆ ಮಾಡಿಸುತ್ತೇವೆ’ ಎಂದು ಹೇಳಿದರು.

ವಿದ್ಯಾರ್ಥಿನಿಲಯ ನಿರ್ಮಾಣ: ‘ರಾಜ್ಯದ 7 ಹಾಲು ಒಕ್ಕೂಟಗಳು ಸೇರಿ ಬೆಂಗಳೂರಿನಲ್ಲಿ ಉಚಿತ ವಿದ್ಯಾರ್ಥಿನಿಲಯ ನಡೆಸುತ್ತಿವೆ. ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದಿಂದ ಹೊಸ ವಿದ್ಯಾರ್ಥಿನಿಲಯ ನಿರ್ಮಿಸಲು ಯೋಜನೆ ರೂಪಿಸಿದ್ದು, ನಿವೇಶನಕ್ಕಾಗಿ ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರಿಗೆ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿದ ಅವರು ಯಲಹಂಕ ಬಳಿ 1,200 ಅಡಿ ಜಾಗ ಮಂಜೂರು ಮಾಡಿದ್ದಾರೆ. ₹ 84 ಲಕ್ಷ ಪಾವತಿಸಿ ಆ ಜಾಗ ಖರೀದಿಸಲಾಗಿದೆ. ಸದ್ಯದಲ್ಲೇ ಟೆಂಡರ್‌ ಕರೆದು ಕಾಮಗಾರಿ ಆರಂಭಿಸುತ್ತೇವೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !