ಮಮತೆಯ ತೊಟ್ಟಿಲು ಕೇಂದ್ರಕ್ಕೆ ಚಾಲನೆ

7

ಮಮತೆಯ ತೊಟ್ಟಿಲು ಕೇಂದ್ರಕ್ಕೆ ಚಾಲನೆ

Published:
Updated:
Prajavani

ಕೋಲಾರ: ‘ಮಕ್ಕಳ ಪೋಷಣೆ ಸಾಧ್ಯವಾಗದಿದ್ದರೆ ಎಲ್ಲೆಂದರಲ್ಲಿ ಬಿಸಾಡುವ ಬದಲು ಮಮತೆಯ ತೊಟ್ಟಿಲು ಕೇಂದ್ರಕ್ಕೆ ನೀಡುವುದು ಉತ್ತಮ’ ಎಂದು ಕೇಂದ್ರ ವಲಯ ಐಜಿಪಿ ಬಿ.ದಯಾನಂದ್ ಕಿವಿಮಾತು ಹೇಳಿದರು.

ವಿಶ್ರಾಂತಿ ಚಿಲ್ಡ್ರನ್ ಹೋಮ್ ಮತ್ತು ದತ್ತು ಕೇಂದ್ರದ ಸಹಯೋಗದಲ್ಲಿ ಇಲ್ಲಿನ ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಆರಂಭಿಸಿರುವ ಮಮತೆಯ ತೊಟ್ಟಿಲು ಕೇಂದ್ರಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿ, ‘ಪೋಷಕರು ನಾನಾ ಕಾರಣದಿಂದ ಶಿಶುಗಳನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗುತ್ತಿರುವುದು ವಿಷಾದಕರ’ ಎಂದು ಕಳವಳ ವ್ಯಕ್ತಪಡಿಸಿದರು.

‘ನವಜಾತ ಶಿಶುಗಳನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಇಂತಹ ಪ್ರಕರಣಗಳಲ್ಲಿ ಶೇ 100ರಷ್ಟು ಶಿಶುಗಳು ಮೃತಪಟ್ಟಿರುತ್ತವೆ. ಶಿಶುಗಳನ್ನು ಬಿಟ್ಟು ಹೋಗುವವರಿಗೆ ಕಾನೂನಿನ ಅನ್ವಯ ಶಿಕ್ಷೆ ವಿಧಿಸಬೇಕು’ ಎಂದು ತಿಳಿಸಿದರು.

‘ಶಿಶುಗಳನ್ನು ರಕ್ಷಿಸಿ, ಉತ್ತಮ ಭವಿಷ್ಯ ನೀಡಲು ಮಮತೆಯ ತೊಟ್ಟಿಲು ಕೇಂದ್ರ ಆರಂಭವಾಗಿದೆ. ಇಲ್ಲಿ ಬೆಳೆದ ಮಕ್ಕಳನ್ನು ಮಕ್ಕಳಿಲ್ಲದ ಪೋಷಕರು ಪಡೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ಇದು ಸಮಾಜಮುಖಿ ಯೋಜನೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಷಾದನೀಯ: ‘ಮಕ್ಕಳನ್ನು ಮಾರಾಟ ಮಾಡುವುದಕ್ಕೆ ಅಥವಾ ಕೊಲ್ಲುವುದಕ್ಕೆ ಯಾರಿಗೂ ಅಧಿಕಾರವಿಲ್ಲ. ಆದರೂ ಈ ದುಷ್ಕೃತ್ಯ ಎಸಗುತ್ತಿರುವುದು ವಿಷಾದನೀಯ. ಪೋಷಕರಿಗೆ ಬೇಡವಾದ ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬಿಟ್ಟರೆ ರಕ್ಷಣೆ ನೀಡಲಾಗುತ್ತದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್‌ ಹೇಳಿದರು.

‘ಪೋಷಕರು ಯಾವ ಕಾರಣಕ್ಕೆ ಶಿಶುವನ್ನು ಬಿಟ್ಟು ಹೋಗುತ್ತಾರೆ ಎಂಬುದೇ ತಿಳಿಯುತ್ತಿಲ್ಲ. ಶಿಶುವಿನ ಜೀವ ಉಳಿಸುವುದು ಎಲ್ಲರ ಕರ್ತವ್ಯ’ ಎಂದು ದತ್ತು ಕೇಂದ್ರದ ಅಧ್ಯಕ್ಷೆ ಸರಸಾ ತಿಳಿಸಿದರು.

‘ಕೇಂದ್ರದ ಕಿಟಕಿ ತೆಗೆದು ಮಕ್ಕಳನ್ನು ಒಳಗೆ ಬಿಟ್ಟರೆ ಸಾಕು. ಮಕ್ಕಳನ್ನು ಬಿಟ್ಟು ಹೋದವರು ಯಾರೆಂದು ಗೊತ್ತಾಗುವುದಿಲ್ಲ. ಮಗು ಒಳಗೆ ಬಂದ ಕೂಡಲೇ ಸೈರನ್ ಬರುತ್ತದೆ. ಬಳಿಕ ಸಿಬ್ಬಂದಿಯು ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಾರೆ. ಜಿಲ್ಲೆಯಲ್ಲಿ 2ನೇ ಕೇಂದ್ರ ಆರಂಭಿಸಲಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಕೇಂದ್ರಕ್ಕೆ ಅವಕಾಶ ಕಲ್ಪಿಸಿರುವುದು ಶ್ಲಾಘನೀಯ’ ಎಂದು ಸಂತಸ ವ್ಯಕ್ತಪಡಿಸಿದರು.

ಆಸ್ಪತ್ರೆಯ ವೈದ್ಯರಾದ ಡಾ.ಸಂತೋಷ್‌ ಪ್ರಭು, ಡಾ.ರಾಜೇಶ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !