ಅಂತರರಾಜ್ಯ ರೈಲು ಸಂಚಾರಕ್ಕೆ 3 ತಿಂಗಳಲ್ಲಿ ಮುಖ್ಯ ಮಾರ್ಗ ಸಿದ್ಧ:ಕೆ.ಎಚ್.ಮುನಿಯಪ್ಪ

7
ನೈರುತ್ಯ ರೈಲ್ವೆ ಹಿರಿಯ ಅಧಿಕಾರಿಗಳೊಂದಿಗೆ ಕೋಲಾರ–ಬೆಂಗಳೂರು ಮಾರ್ಗದ ವಿವಿಧ ನಿಲ್ದಾಣಗಳಿಗೆ ಸಂಸದ ಭೇಟಿ

ಅಂತರರಾಜ್ಯ ರೈಲು ಸಂಚಾರಕ್ಕೆ 3 ತಿಂಗಳಲ್ಲಿ ಮುಖ್ಯ ಮಾರ್ಗ ಸಿದ್ಧ:ಕೆ.ಎಚ್.ಮುನಿಯಪ್ಪ

Published:
Updated:
Prajavani

ಚಿಕ್ಕಬಳ್ಳಾಪುರ: ‘ಕೋಲಾರ–ಚಿಕ್ಕಬಳ್ಳಾಪುರ ಮಾರ್ಗವನ್ನು ಮುಖ್ಯ ರೈಲು ಮಾರ್ಗಕ್ಕೆ ಸಂಪರ್ಕಿಸುವ ಕಾರ್ಯ ಭರದಿಂದ ಸಾಗಿದ್ದು, ಮೂರು ತಿಂಗಳಲ್ಲಿ ಈ ಮಾರ್ಗದಲ್ಲಿ ಅಂತರರಾಜ್ಯ ಸಂಪರ್ಕಿಸುವ ರೈಲುಗಳು ಸಂಚರಿಸಲಿವೆ’ ಎಂದು ಸಂಸದ ಕೆ.ಎಚ್.ಮುನಿಯಪ್ಪ ಹೇಳಿದರು.

ನೈರುತ್ಯ ರೈಲ್ವೆ ಹಿರಿಯ ಅಧಿಕಾರಿಗಳ ಜತೆ ಶನಿವಾರ ಕೋಲಾರ–ಬೆಂಗಳೂರು ಮಾರ್ಗದ ವಿವಿಧ ನಿಲ್ದಾಣಗಳಿಗೆ ಭೇಟಿ ನೀಡಿ ಮೂಲಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದ ಅವರು ತಾಲ್ಲೂಕಿನ ಗಿಡ್ನಹಳ್ಳಿ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಬಂಗಾರಪೇಟೆ ರೈಲ್ವೆ ಜಂಕ್ಷನ್‌ನಲ್ಲಿ ರೈಲುಗಳ ನಿಲುಗಡೆಗೆ ಸ್ಥಳಾವಕಾಶದ ಕೊರತೆ ಇತ್ತು. ಈ ಕಾರಣದಿಂದ ಇಲಾಖೆ ಎರಡು ಹೊಸ ಪ್ಲಾಟ್ ಫಾರಂ ನಿರ್ಮಾಣಕ್ಕೆ ಮುಂದಾಗಿದೆ. ಆ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದೆ. ಅದು ಪೂರ್ಣಗೊಳ್ಳುತ್ತಿದ್ದಂತೆ ಈ ಮಾರ್ಗದಲ್ಲಿ ರೈಲುಗಳು ಚೆನ್ನೈ, ಕೋಲ್ಕತ್ತಾ, ತಿರುಪತಿ, ದೆಹಲಿಗೆ ಹೋಗಲು ಅವಕಾಶವಾಗುತ್ತದೆ’ ಎಂದು ತಿಳಿಸಿದರು.

‘ರೈಲು ಮಾರ್ಗದ ಕೆಳಸೇತುವೆಗಳನ್ನು ನೀರು ನಿಲ್ಲದಂತೆ ವೈಜ್ಞಾನಿಕ ರೀತಿಯಲ್ಲಿ ನಿರ್ಮಾಣ ಮಾಡಬೇಕು. ನಿಲ್ದಾಣಗಳಲ್ಲಿ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳ ಒದಗಿಸಬೇಕು. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಸಂಸದರು ಅಧಿಕಾರಿಗಳಿಗೆ ಸೂಚನೆ ಕೊಟ್ಟರು.

ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಜಯ್ ಸಿನ್ಹಾ, ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಆರ್.ಎಕ್ಸ್.ಸಕ್ಸೆನಾ, ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ಅಧಿಕಾರಿ ಎನ್‌.ಎಸ್‌.ಶ್ರೀಧರ್‌ ಮೂರ್ತಿ, ಶಾಸಕ ಡಾ.ಕೆ.ಸುಧಾಕರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸತೀಶ್, ಪ್ರಕಾಶ್, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಮರಳಕುಂಟೆ ಕೃಷ್ಣಮೂರ್ತಿ, ಗಿಡ್ನಹಳ್ಳಿ ನಾರಾಯಣಸ್ವಾಮಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !