ಪುಲಿಕೇಶಿ ಸಹಕಾರಿ ಬ್ಯಾಂಕ್‌: ₹4.5 ಕೋಟಿ ಮೌಲ್ಯದ ಚಿನ್ನ ಕಳವು

7
ಕುಳಗೇರಿ ಕ್ರಾಸ್‌ ಬ್ಯಾಂಕ್ ಶಾಖೆಗೆ ವಿಮಾ ಅಧಿಕಾರಿಗಳ ತಂಡದ ಭೇಟಿ

ಪುಲಿಕೇಶಿ ಸಹಕಾರಿ ಬ್ಯಾಂಕ್‌: ₹4.5 ಕೋಟಿ ಮೌಲ್ಯದ ಚಿನ್ನ ಕಳವು

Published:
Updated:

ಬಾಗಲಕೋಟೆ: ಕುಳಗೇರಿ ಕ್ರಾಸ್‌ನ ಪುಲಿಕೇಶಿ ಸಹಕಾರಿ ಬ್ಯಾಂಕಿನಲ್ಲಿ ಗುರುವಾರ ತಡರಾತ್ರಿ ನಡೆದ ಕಳ್ಳತನ ಪ್ರಕರಣದಲ್ಲಿ ₹4.50 ಕೋಟಿ ಮೌಲ್ಯದ 13 ಕೆ.ಜಿ ಚಿನ್ನಾಭರಣ ಹಾಗೂ ₹6.64 ಲಕ್ಷ ನಗದು ಕಳ್ಳತನವಾಗಿದೆ. ಒಟ್ಟು 1071 ಗ್ರಾಹಕರ ಖಾತೆಗಳಲ್ಲಿ ಈ ಸೊತ್ತು ಇಡಲಾಗಿದೆ. 

ಇದರಿಂದ ಬ್ಯಾಂಕ್ ಕನ್ನ ಪ್ರಕರಣದಲ್ಲಿ ಕಳ್ಳರ ಪಾಲಾದ ಸ್ವತ್ತಿನ ಸ್ಪಷ್ಟಚಿತ್ರಣ ದೊರೆತಿದೆ. ಈ ಮಧ್ಯೆ ಹುಬ್ಬಳ್ಳಿಯ ನ್ಯಾಶನಲ್ ಇನ್ಶೂರೆನ್ಸ್ ಕಂಪೆನಿಯ ಅಧಿಕಾರಿ ಎಸ್.ಕೆ.ಕುಲಕರ್ಣಿ ನೇತೃತ್ವದ ತಂಡ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ಬ್ಯಾಂಕಿನ ವ್ಯವಸ್ಥಾಪಕ ಪಿ.ಬಿ.ಮಾಡಲಗೇರಿ ಅವರಿಂದ ಮಾಹಿತಿ ಪಡೆಯಿತು.

ಚಿನ್ನಾಭರಣ ಸೇರಿದಂತೆ ಬ್ಯಾಂಕಿನಲ್ಲಿ ಕಳುವಾಗಿರುವ ಸ್ವತ್ತುಗಳಿಗೆ ವಿಮಾ ಖಾತರಿ ಇರುವ ಕಾರಣ ಈಗ ನ್ಯಾಶನಲ್ ಇನ್ಶೂರೆನ್ಸ್ ಕಂಪೆನಿ ಅಧಿಕಾರಿಗಳು ಭೇಟಿ ನೀಡಿದ್ದು ಮಹತ್ವ ಪಡೆದಿದೆ. ಮಂಗಳವಾರ ವಿಮಾ ಕಂಪೆನಿಯ ಸರ್ವೆಯರ್‌ಗಳು ಬರಲಿದ್ದು, ಮೌಲ್ಯಮಾಪನ ನಡೆಯಲಿದೆ ಎಂದು ತಿಳಿದುಬಂದಿದೆ.

ಸಿ.ಸಿ ಕ್ಯಾಮೆರಾ ಪರಿಶೀಲನೆ: ಬಾಗಲಕೋಟೆ ಡಿವೈಎಸ್‌ಪಿ ಎಸ್.ಬಿ.ಗಿರೀಶ ನೇತೃತ್ವದ ಅಧಿಕಾರಿಗಳ ತಂಡ ಶನಿವಾರ ಬ್ಯಾಂಕ್‌ನ ಪರಿಸರದಲ್ಲಿ ತಪಾಸಣೆ ನಡೆಸಿತು. ಪೊಲೀಸ್ ಇಲಾಖೆಯ ವಿಧಿ–ವಿಜ್ಞಾನ ತಜ್ಞರ ತಂಡ ಕೂಡ ಅಲ್ಲಿಯೇ ಬೀಡು ಬಿಟ್ಟಿದೆ.

ಸಮೀಪದಲ್ಲಿರುವ ಎರಡು ಬಾರ್‌ಗಳಲ್ಲಿನ ಸಿ.ಸಿ.ಕ್ಯಾಮೆರಾ, ಡಿ.ಸಿ.ಸಿ ಬ್ಯಾಂಕ್‌ ಶಾಖೆಯಲ್ಲಿನ ಸಿ.ಸಿ.ಕ್ಯಾಮೆರಾಗಳ ಹಾರ್ಡ್‌ಡಿಸ್ಕ್ ಪಡೆದು ಪರಿಶೀಲನೆ ನಡೆಸಿತು. ತನಿಖೆಗೆ ಗದಗ ಜಿಲ್ಲೆ ಎಸ್‌ಪಿ ಸಂತೋಷ್‌ಬಾಬು ಕೂಡ ಕೈ ಜೋಡಿಸಿದ್ದು, ಅವರು ಶುಕ್ರವಾರ ಸಂಜೆ ಕುಳಗೇರಿ ಕ್ರಾಸ್‌ಗೆ ಭೇಟಿ ನೀಡಿದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !