ಜಯದೇವ ಆಸ್ಪತ್ರೆ ಮತ್ತಷ್ಟು ವಿಸ್ತರಣೆ

7
ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್ ಹೇಳಿಕೆ

ಜಯದೇವ ಆಸ್ಪತ್ರೆ ಮತ್ತಷ್ಟು ವಿಸ್ತರಣೆ

Published:
Updated:
Prajavani

ಮಂಗಳೂರು: ಜಯದೇವ ಹೃದ್ರೋಗ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಗಳ ಹಾಸಿಗೆಗಳ ಸಂಖ್ಯೆಯನ್ನು 1,200ರಿಂದ 1600ಕ್ಕೆ ಹೆಚ್ಚಳ ಮಾಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ತಿಳಿಸಿದರು.

ಎ.ಜೆ.ವೈದ್ಯಕೀಯ ಕಾಲೇಜಿನ ವತಿಯಿಂದ ಹೃದ್ರೋಗಗಳಿಗೆ ಸಂಬಂಧಿಸಿದ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಸ್ಪೆಕ್ಟ್ರಂ’ ವಿಚಾರ ಸಂಕಿರಣದಲ್ಲಿ ಭಾಗಿಯಾದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು, ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಯನ್ನು ಆಧರಿಸಿ ಆಸ್ಪತ್ರೆಯನ್ನು ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯು ಹೃದ್ರೋಗಗಳಿಗೆ ಸಂಬಂಧಿಸಿದಂತೆ ಚಿಕಿತ್ಸೆ ಹಾಗೂ ಸಂಶೋಧನೆಯ ಸ್ವಾಯತ್ತ ಸಂಸ್ಥೆಯಾಗಿದೆ. ಆಸ್ಪತ್ರೆಯಲ್ಲಿ 700 ಹಾಸಿಗೆಗಳಿವೆ. ಬೆಂಗಳೂರಿನ ರಾಜಾಜಿನಗರದಲ್ಲಿ 50 ಹಾಸಿಗೆಗಳ ಉಪ ಕೇಂದ್ರವಿದೆ. ಮೈಸೂರಿನಲ್ಲಿ 400 ಹಾಸಿಗೆಗಳ ಆಸ್ಪತ್ರೆ ಮತ್ತು ಕಲಬುರ್ಗಿಯಲ್ಲಿ 120 ಹಾಸಿಗೆಗಳ ಆಸ್ಪತ್ರೆ ಇವೆ ಎಂದು ತಿಳಿಸಿದರು.

‘ಬೆಂಗಳೂರಿನಲ್ಲಿ 200 ಹಾಸಿಗೆಗಳ ಹೊಸ ಆಸ್ಪತ್ರೆ ಕಟ್ಟಡ ನಿರ್ಮಿಸಲಾಗುವುದು. ಇದಕ್ಕೆ ₹ 45 ಕೋಟಿ ವೆಚ್ಚವಾಗಲಿದೆ. ಇನ್ಫೋಸಿಸ್‌ ಪ್ರತಿಷ್ಠಾನ ₹ 20 ಕೋಟಿ ದೇಣಿಗೆ ನೀಡಿದೆ. ಮಾರ್ಚ್‌ ತಿಂಗಳಿನಲ್ಲಿ ಕಾಮಗಾರಿ ಆರಂಭವಾಗಲಿದ್ದು, 18 ತಿಂಗಳಿನಲ್ಲಿ ಪೂರ್ಣಗೊಳ್ಳಲಿದೆ’ ಎಂದರು.

ಕಲಬುರ್ಗಿ ಆಸ್ಪತ್ರೆಯಲ್ಲಿ ಎರಡು ವರ್ಷಗಳೊಳಗೆ 1.25 ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಅದನ್ನು ₹ 150 ಕೋಟಿ ವೆಚ್ಚದಲ್ಲಿ 300 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಜಿಲ್ಲಾ ಆರೋಗ್ಯ ಕಚೇರಿ ಆವರಣದಲ್ಲಿ 8 ಎಕರೆ ಜಮೀನು ಗುರುತಿಸಲಾಗಿದೆ. ಮಾರ್ಚ್‌ನಲ್ಲಿ ಕಾಮಗಾರಿ ಆರಂಭವಾಗಲಿದ್ದು, ಮೂರು ವರ್ಷಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ರಾಜ್ಯದ ಒಟ್ಟು ಹೃದ್ರೋಗಿಗಳಲ್ಲಿ ಶೇಕಡ 40ರಷ್ಟು ಜನರಿಗೆ ಜಯದೇವ ಆಸ್ಪತ್ರೆಯಿಂದ ಚಿಕಿತ್ಸೆ ನೀಡಲಾಗುತ್ತಿದೆ. ಮಂಗಳೂರಿನಲ್ಲಿ ಸಂಸ್ಥೆಯ ಘಟಕ ಸ್ಥಾಪಿಸುವ ಪ್ರಸ್ತಾವವಿಲ್ಲ. ಇಲ್ಲಿ ಈಗಾಗಲೇ ಸಾಕಷ್ಟು ಒಳ್ಳೆಯ ಹೃದ್ರೋಗ ಚಿಕಿತ್ಸಾ ಕೇಂದ್ರಗಳಿವೆ. ಘಟಕಗಳ ಸಂಖ್ಯೆ ಹೆಚ್ಚಿದಷ್ಟೂ ಪ್ರಧಾನ ಕೇಂದ್ರದ ಮೇಲೆ ವ್ಯತಿರಿಕ್ತ ಪರಿಣಾಮ ಗಳಾಗುತ್ತವೆ. ಹಿಂದುಸ್ತಾನ್‌ ಮಷೀನ್‌ ಟೂಲ್ಸ್‌ ಕೈಗಾರಿಕೆ ಪ್ರಕರಣ ಇದಕ್ಕೆ ಉದಾಹರಣೆ ಎಂದರು.

‘ವಿಜಯಪುರ ಮತ್ತು ಹಾಸನದಲ್ಲಿ ಜಯದೇವ ಆಸ್ಪತ್ರೆಯ ಕೇಂದ್ರಗಳನ್ನು ಸ್ಥಾಪಿಸುವ ಪ್ರಸ್ತಾವಗಳನ್ನು ತಿರಸ್ಕರಿಸಲಾಗಿದೆ. ವೆನ್ಲಾಕ್‌ ಆಸ್ಪತ್ರೆಯ ಆಡಳಿತದ ಅಧೀನದಲ್ಲಿ 200 ಹಾಸಿಗೆಗಳ ಹೃದ್ರೋಗ ಚಿಕಿತ್ಸಾ ಕೇಂದ್ರವನ್ನು ಮಂಗಳೂರಿನಲ್ಲಿ ಸ್ಥಾಪಿಸಿದರೆ, ತಾಂತ್ರಿಕ ನೆರವು ನೀಡಲು ನಾವು ಸಿದ್ಧ’ ಎಂದು ಹೇಳಿದರು.

ವೈದ್ಯರ ಕೊರತೆ: ವಿಚಾರ ಸಂಕಿರಣದಲ್ಲಿ ಮಾತನಾಡಿದ ಮಂಜುನಾಥ್‌, ‘ಗ್ರಾಮೀಣ ಪ್ರದೇಶಗಳು ಮತ್ತು ಅರೆ ಪಟ್ಟಣ ಪ್ರದೇಶಗಳಲ್ಲಿ ವೈದ್ಯರ ಕೊರತೆ ಇದೆ. ಭದ್ರತೆಯ ಕೊರತೆ ಮತ್ತು ಸ್ಥಳೀಯರ ಮಧ್ಯಪ್ರವೇಶದ ಹೆಚ್ಚಳದಿಂದ ವೈದ್ಯರು ಈ ಪ್ರದೇಶಗಳಲ್ಲಿ ಸೇವೆ ಒದಗಿಸಲು ಒಲವು ತೋರುತ್ತಿಲ್ಲ’ ಎಂದರು.

ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ಪ್ರಕಾರ ಪ್ರತಿ 1,000 ಜನರಿಗೆ ಒಬ್ಬ ವೈದ್ಯ ಇರಬೇಕು. ಆದರೆ, ಕರ್ನಾಟಕದಲ್ಲಿ ಪ್ರತಿ 5,000 ಜನರಿಗೆ ಒಬ್ಬ ವೈದ್ಯರು ಇದ್ದಾರೆ. ವೈದ್ಯರ ಸಂಖ್ಯೆ ಎಷ್ಟೇ ಹೆಚ್ಚಿದರೂ ಗ್ರಾಮೀಣ ಪ್ರದೇಶದಲ್ಲಿ ಸೇವೆ ನೀಡಲು ಆಸಕ್ತಿ ತೋರುವವರ ಸಂಖ್ಯೆ ಹೆಚ್ಚುತ್ತಿಲ್ಲ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !