ಹೆದ್ದಾರಿಗೆ ಆಗ್ರಹಿಸಿ ಸೋಮವಾರದಿಂದ 42 ಕಿ.ಮೀ. ಪಾದಯಾತ್ರೆ: ರಮಾನಾಥ ರೈ

7
ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿಕೆ

ಹೆದ್ದಾರಿಗೆ ಆಗ್ರಹಿಸಿ ಸೋಮವಾರದಿಂದ 42 ಕಿ.ಮೀ. ಪಾದಯಾತ್ರೆ: ರಮಾನಾಥ ರೈ

Published:
Updated:

ಮಂಗಳೂರು: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯನ್ನು ದಿಢೀರ್‌ ಸ್ಥಗಿತಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್‌ ಪಕ್ಷವು ನೆಲ್ಯಾಡಿಯಿಂದ ಬಿ.ಸಿ.ರೋಡ್‌ವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆ ಸೋಮವಾರ ಬೆಳಿಗ್ಗೆ ನೆಲ್ಯಾಡಿ ಬಸ್‌ ನಿಲ್ದಾಣದಿಂದ ಆರಂಭವಾಗಲಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ದಿಢೀರನೆ ಕಾಮಗಾರಿ ಸ್ಥಗಿತಗೊಳಿಸಿದೆ. ಇದರಿಂದಾಗಿ ಈ ಭಾಗದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಥಳೀಯ ಸಂಸದರು ಈ ಬಗ್ಗೆ ಮೌನ ವಹಿಸಿದ್ದಾರೆ. ಸಂಸದರು ಮತ್ತು ಕೇಂದ್ರ ಸರ್ಕಾರದ ನಿಲುವು ವಿರೋಧಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದರು.

ಸೋಮವಾರ ಬೆಳಿಗ್ಗೆ 9 ಗಂಟೆಗೆ ನೆಲ್ಯಾಡಿಯ ಬಸ್‌ ನಿಲ್ದಾಣದ ಸಮೀಪ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಪಾದಯಾತ್ರೆಗೆ ಚಾಲನೆ ನೀಡುವರು. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಹರೀಶ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಹಾಸನ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮಂಜುನಾಥ ಜಾವುಕಲ್, ವಿಧಾನ ಪರಿಷತ್‍ನ ಸದಸ್ಯ ಎಂ.ಇ. ಗೋಪಾಲಸ್ವಾಮಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಎಚ್.ಕೆ. ಮಹೇಶ್, ಡಾ. ರಘು ಭಾಗವಹಿಸಲಿದ್ದಾರೆ ಎಂದರು.

ಆ ದಿನ ಸಂಜೆ 4.30ಕ್ಕೆ ಉಪ್ಪಿನಂಗಡಿ ಬಸ್‌ ನಿಲ್ದಾಣದ ಬಳಿ ಪ್ರತಿಭಟನಾ ಸಭೆ ನಡೆಯಲಿದೆ. ಮಾಜಿ ಶಾಸಕರಾದ ಕೆ.ವಸಂತ ಬಂಗೇರ, ಜೆ.ಆರ್. ಲೋಬೋ, ಮುಖಂಡರಾದ ಎಚ್.ಎಂ. ವಿಶ್ವನಾಥ್, ಹರೀಶ್ ಬಾಬು, ಸುಧೀರ್ ಕುಮಾರ್ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ಬಳಿಯಿಂದ ಮಂಗಳವಾರ ಬೆಳಿಗ್ಗೆ 8.30ಕ್ಕೆ ಪಾದಯಾತ್ರೆ ಆರಂಭಗೊಳ್ಳಲಿದ್ದು, ಸಂಜೆ 4.30ಕ್ಕೆ ಮಾಣಿ ಜಂಕ್ಷನ್ ಬಳಿ ಬಹಿರಂಗ ಸಭೆ ನಡೆಯಲಿದೆ. ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್‍, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷ ಪುಷ್ಪಾ ಅಮರನಾಥ್, ಭಾಗವಹಿಸಲಿದ್ದಾರೆ ಎಂದರು.

ಬುಧವಾರ  ಬೆಳಗ್ಗೆ ಮಾಣಿ ಜಂಕ್ಷನ್‍ನಿಂದ ಪಾದಯಾತ್ರೆ ಆರಂಭಗೊಳ್ಳಲಿದೆ. ಆ ದಿನ ಸಂಜೆ 4.30ಕ್ಕೆ ಬಿ.ಸಿ.ರೋಡ್‌ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಬಹಿರಂಗ ಸಭೆಯೊಂದಿಗೆ ಅಂತ್ಯಗೊಳ್ಳಲಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಶಾಸಕ ಬಿ.ಎ.ಮೊಹಿಯುದ್ದೀನ್ ಬಾವಾ, ಮುಖಂಡರಾದ ನಾರಾಯಣ ರಾವ್, ಅರುಣ್ ಮಾಚಯ್ಯ, ಸವಿತಾ ರಮೇಶ್ ಪಾಲ್ಗೊಳ್ಳುವರು ಎಂದು ರಮಾನಾಥ ರೈ ವಿವರ ನೀಡಿದರು.

ವಿಜಯ ಬ್ಯಾಂಕ್ ವಿಲೀನ ವಿರೋಧಿಸಿ ಈಗಾಗಲೇ ಕಾಂಗ್ರೆಸ್ ವತಿಯಿಂದ ಜಿಲ್ಲೆಯ 79 ಶಾಖೆಗಳ ಎದುರು ಪ್ರತಿಭಟನೆ ನಡೆಸಲಾಗಿದೆ. ಮುಂದಿನ ಹೋರಾಟದ ಬಗ್ಗೆ ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು  ಎಂದರು.

ಕಾಂಗ್ರೆಸ್‌ ಮುಖಂಡರಾದ ಬಿ.ಎಚ್. ಖಾದರ್, ಇಬ್ರಾಹಿಂ ಕೋಡಿಜಾಲ್, ಸಂತೋಷ್ ಕುಮಾರ್ ಶೆಟ್ಟಿ, ಪ್ರವೀಣ್ ಚಂದ್ರ ಆಳ್ವ, ರಾಜಶೇಖರ ಕೋಟ್ಯಾನ್, ಮಾಧವ ಮಾವೆ, ಸಲೀಂ, ಅಬ್ಬಾಸ್ ಅಲಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !