ಪ್ರೇರಣಾದಾಯಕ ನುಡಿ ಯುವಕರಿಗೆ ದಾರಿದೀಪ

7

ಪ್ರೇರಣಾದಾಯಕ ನುಡಿ ಯುವಕರಿಗೆ ದಾರಿದೀಪ

Published:
Updated:
Prajavani

ಕೋಲಾರ: `ದೇಶದ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ಅವರ ಪ್ರೇರಣಾದಾಯಕ ನುಡಿ ಯುವಕರಿಗೆ ದಾರಿದೀಪ' ಎಂದು  ವಿವೇಕ್ ಇನ್ಫೋಟೆಕ್‍ನ ವ್ಯವಸ್ಥಾಪಕ ನಿರ್ದೇಶಕ ಎ.ಪ್ರಮೋದ್ ಕುಮಾರ್ ಅಭಿಪ್ರಾಯಪಟ್ಟರು.

ನಗರದಲ್ಲಿ ವಿವೇಕ್ ಇನ್ಫೋಟೆಕ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದಿಂದ ಶನಿವಾರ ನಡೆದ 156ನೇ ಸ್ವಾಮಿ ವಿವೇಕಾನಂದ ಜಯಂತಿಯಲ್ಲಿ ಮಾತನಾಡಿ, ‘ವಿವೇಕಾನಂದ ಅವರು ಏಕಾಗ್ರತೆ, ದೇಶಪ್ರೇಮ ಮತ್ತು ಉತ್ತಮ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದವರಾಗಿದ್ದು, ಸ್ವಾಮಿ ವಿವೇಕಾನಂದರ ಉದ್ದೇಶ, ಆಶಯಗಳನ್ನು ಈಡೇರಿಸುವ ಜವಾಬ್ದಾರಿ ಯುವಕರ ಮೇಲಿದೆ’ ಎಂದು ತಿಳಿಸಿದರು.

‘ವಿವೇಕಾನಂದರು ಯುವಕರ ಬಗ್ಗೆ ಸಾಕಷ್ಟು ಕನಸ್ಸುಗಳನ್ನು ಕಟ್ಟಿಕೊಂಡಿದ್ದರು. ದೇಶವನ್ನು ಉತ್ತಮ ದಾರಿಯಲ್ಲಿ ನಡೆಸುವಲ್ಲಿ ಯುವಕರ ಪಾತ್ರ ಅತ್ಯಮೂಲ್ಯವಾದುದು ಎಂಬುದರಲ್ಲಿ ಅವರು ದೃಢ ನಂಬಿಕೆಯುಳ್ಳವರಾಗಿದ್ದರು. ಅದಕ್ಕಾಗಿಯೇ ಯುವಕರಿಗೆ ಏಳಿ, ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಕರೆ ಕೊಟ್ಟಿದ್ದರು’ ಎಂದು ಹೇಳಿದರು. 

‘ಆದರ್ಶಗಳು, ನಿಲುವುಗಳು ಮತ್ತು ಆಲೋಚನೆಗಳು ದೇಶದ ಅಭಿವೃದ್ಧಿಯ ಕಡೆಗೆ ಇತ್ತು. ಯುವಕರು ಈ ಕೆಲಸವನ್ನು ಮಾಡಬೇಕು ಎಂಬುದು ಅವರ ಹಂಬಲವಾಗಿತ್ತು’ ಎಂದು ತಿಳಿಸಿದರು. 

‘ಸ್ವಾಮಿ ವಿವೇಕಾನಂದರ ಜಯಂತಿಯನ್ನು ಇದೀಗ ಯುವ ದಿನ ಎಂದು ಆಚರಣೆ ಮಾಡಲಾಗುತ್ತದೆ. ದೇಶದ ಸಾಂಸ್ಕøತಿ, ಪರಂಪರೆಯ ಬಗ್ಗೆ ಇಡೀ ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ವಿವೇಕಾನಂದರಿಗೆ ಸಲ್ಲುತ್ತದೆ' ಎಂದು ಸಂಪನ್ಮೂಲ ವ್ಯಕ್ತಿ ಎಸ್.ಆರ್.ರಾಕೇಶ್ ಅಭಿಪ್ರಾಯಪಟ್ಟರು.

‘ಸಾಕಷ್ಟು ಗಣ್ಯರ ಜಯಂತಿಗಳನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಆದರೆ ಇವು ಕೇವಲ ಆಚರಣೆಗೆ ಮಾತ್ರ ಸೀಮಿತವಾಗದೆ ಅವರ ಆಲೋಚನೆಗಳು ಮತ್ತು ಚಿಂತನೆಗಳನ್ನು ಅರಿತು ಅವುಗಳನ್ನು ಪಾಲಿಸುವಂತಾಗಬೇಕು’ ಎಂದು ಸಲಹೆ ನೀಡಿದರು. 

ಸಂಪನ್ಮೂಲ ವ್ಯಕ್ತಿಗಳಾದ ಯು.ವಿಸ್ಮಯ, ಎನ್.ಯು.ಸುಜಯ್, ಕೆ.ಎಸ್.ಭಾನುಪ್ರಕಾಶ್, ಮುಖಂಡರಾದ ಎಂ.ರಮೇಶ್, ವಿ.ನಾಗೇಂದ್ರ, ವಕೀಲ ಎ.ಶ್ರೀನಿವಾಸ ಹಾಜರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !