ಶಿಷ್ಟಾಚಾರ ಪಾಲನೆ, ಹೋರಾಟದಿಂದ ದೂರ

7
ಬಸವಣ್ಣನ ತತ್ವಗಳ ಪ್ರಚಾರದಿಂದ ದೂರ ಸರಿಯೊಲ್ಲ: ಎಂ.ಬಿ.ಪಾಟೀಲ

ಶಿಷ್ಟಾಚಾರ ಪಾಲನೆ, ಹೋರಾಟದಿಂದ ದೂರ

Published:
Updated:
Prajavani

ಬಾಗಲಕೋಟೆ: ‘ಗೃಹ ಸಚಿವನಾಗಿ ಕೆಲವು ಶಿಷ್ಟಾಚಾರ ಪಾಲಿಸಬೇಕಿರುವ ಕಾರಣ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಇನ್ನು ಮುಂದೆ ಸಮಾಜದ ಮಠಾಧೀಶರು, ಜಾಮದಾರ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಆ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ಎಂ.ಬಿ.ಪಾಟೀಲ ಹೇಳಿದರು.

ಕೂಡಲಸಂಗಮದಲ್ಲಿ  ಬಸವಧರ್ಮ ಪೀಠದ ಆಶ್ರಯದಲ್ಲಿ ಭಾನುವಾರ ನಡೆದ 32ನೇ ಶರಣಮೇಳ ಉದ್ಘಾಟಿಸಿ ಮಾತನಾಡಿದ ಅವರು, ’ಸರ್ಕಾರ ಮನ್ನಣೆ ಕೊಟ್ಟರೂ, ಬಿಟ್ಟರೂ ಲಿಂಗಾಯತ ಒಂದು ಸ್ವತಂತ್ರ ಧರ್ಮ ಎಂದು ಸಿರಿಗೆರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಈ ಹಿಂದೆಯೇ ಹೇಳಿದ್ದರು. ಆ ಮಾತನ್ನು ಸ್ಮರಿಸುವೆ’ ಎಂದರು.

‘ಸ್ವತಂತ್ರ ಧರ್ಮದ ವಿಚಾರದಲ್ಲಿ ಇನ್ನು ಹೋರಾಟ,ಗೀರಾಟದ ಪ್ರಶ್ನೆಯೇ ಬರೊಲ್ಲ. ಕಾನೂನು ಹೋರಾಟ ಮಾತ್ರ ಬಾಕಿ ಉಳಿದಿದೆ. ಅದನ್ನೂ ಸಂಬಂಧಿಸಿದವರು ಮಾಡುತ್ತಾರೆ. ಆದರೆ ಬಸವಣ್ಣನ ತತ್ವ, ಆಶಯಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನದಿಂದ ಮಾತ್ರ ಹಿಂದೆಗೆಯುವುದಿಲ್ಲ’ ಎಂದು ಹೇಳಿದರು.

‘ಆ ನಿಟ್ಟಿನಲ್ಲಿ ಬಸವಣ್ಣನ ವಚನಗಳು, ಚಳವಳಿ, ಅನುಭವ ಮಂಟಪ ಪರಿಕಲ್ಪನೆಯ ಬಗ್ಗೆ ಶ್ರೇಷ್ಠ ಪುಸ್ತಕವನ್ನು ವಿಶ್ವದ ಪ್ರಮುಖ ಭಾಷೆಗಳಲ್ಲಿ ಸಿದ್ಧಪಡಿಸಲಾಗುವುದು. ಅದಕ್ಕೆ ವಿಜಯಪುರದ ತಮ್ಮ ಬಿಎಲ್‌ಡಿಇ ಸಂಸ್ಥೆಯಿಂದ ₹5 ಕೋಟಿ ವ್ಯಯಿಸಲಾಗುವುದು. ಈಗಾಗಲೇ ₹2 ಕೋಟಿ ಕೊಡಲಾಗಿದೆ’ ಎಂದರು.

’ನಾವು ಲಿಂಗಾಯತರು ಬುದ್ಧ, ಮಹಾವೀರ, ಏಸುಕ್ರಿಸ್ತ, ಮೊಹಮ್ಮದ್ ಪೈಗಂಬರ್ ಸ್ಥಾನಕ್ಕೆ ಬಸವಣ್ಣನನ್ನು ಒಯ್ಯಬೇಕಿತ್ತು. ದುರ್ದೈವವೆಂದರೆ ಕರ್ನಾಟಕ, ಮಹಾರಾಷ್ಟ್ರ ಎಂದು ಇಲ್ಲಿಯೇ ಕಟ್ಟಿ ಹಾಕಿದ್ದೇವೆ. ಬಸವಣ್ಣ ನಮಗೆ ಘನತೆ, ಆತ್ಮಗೌರವ ತಂದುಕೊಟ್ಟರು. ಆದರೆ ಅವರಿಗೆ ನಾವೇನು ಕೊಟ್ಟಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕಿದೆ. ಅಂಬೇಡ್ಕರ್ ಬಸವಣ್ಣನ ಬಗ್ಗೆ ತಿಳಿದುಕೊಂಡಿದ್ದರೆ ಈ ದೇಶದ ಇತಿಹಾಸವೇ ಬೇರೆ ಇರುತ್ತಿತ್ತು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !