ಸಂಕ್ರಾಂತಿ ಸರೋವರದೊಳಗೆ ರಾಜಹಂಸಗಳ ಸಂಭ್ರಮ

7

ಸಂಕ್ರಾಂತಿ ಸರೋವರದೊಳಗೆ ರಾಜಹಂಸಗಳ ಸಂಭ್ರಮ

Published:
Updated:

ಊರನ್ನು ನೋಡುವುದರಲ್ಲಿ ಎರಡು ಬಗೆ: ಒಳಗಿನವರಾಗಿ ನೋಡುವುದು, ಹೊರಗಿನಿಂದ ನೋಡುವುದು. ಬೆಂಗಳೂರು ಮಹಾನಗರವನ್ನು ಕೊಂಚ ಅಂತರದಲ್ಲಿ ನಿಂತು ನೋಡಿ: ಇಡೀ ನಗರ ಒಂದು ಬೃಹತ್ ಸರೋವರದಂತೆ ಕಾಣುತ್ತದೆ. ಅದರಲ್ಲಿ ಲಕ್ಷೋಪಲಕ್ಷ ರಾಜಹಂಸಗಳು. ಅವುಗಳ ಮೈತುಂಬ ಕಿಚ್ಚನ್ನೇ ಬಣ್ಣವಾಗಿ ಹೊದ್ದಂತಹ ಪ್ರಖರ ತಿಳಿಗುಲಾಬಿ. ರಾಜಹಂಸಗಳ ಗಾಂಭೀರ್ಯ, ಬ್ಯಾಲೆ ಬೆಡಗಿಯರಂತಹ ಚೆಲುವು ಹಾಗೂ ಮನಮೋಹಕ ರಂಗು ಇಡೀ ಸರೋವರನ್ನು ಆವಾಹಿಸಿಕೊಂಡು, ಆ ಸರಸ್ಸೆಂಬ ನಗರವೇ  ಅಮರಾವತಿಯಂತೆ ಕಂಗೊಳಿಸತೊಡಗುತ್ತದೆ. ಈಗ ಕೊಂಚ ಒಳಗಿನವರಾಗಿ ಯೋಚಿಸಿನೋಡಿ: ಸರೋವರ ಮಹಾನಗರವಾದರೆ, ಆ ರಾಜಹಂಸಗಳು ನಾವೇ ಅಲ್ಲವೇ?

ಇದು ಸಂಕ್ರಾಂತಿಯ ಸಂಭ್ರಮದ ಸಮಯ. ರಾಜಹಂಸದ ರೂಪಕದ ಕನ್ನಡಿಯೊಳಗೆ ನಮ್ಮನ್ನೇ ಕಂಡುಕೊಳ್ಳುವ ಸಮಯ. ಹಬ್ಬದ ರಂಗು ಮೊದಲು ಎದ್ದುಕಾಣುವುದು ‍ಬಜಾರುಗಳಲ್ಲಿ. ಅಲ್ಲಿಂದ ಸಂಭ್ರಮದ ಕುಡಿ ಮನೆಯೊಳಗೆ ಅಡಿಯಿಡುತ್ತದೆ; ರಾಜಹಂಸಗಳ ರೂಪದಲ್ಲಿ ನಮ್ಮೊಳಗೂ ಕುಡಿಯೊಡೆಯುತ್ತದೆ. ಸಂಕ್ರಾಂತಿಯ ಎಳ್ಳು–ಬೆಲ್ಲ ಬೀರುತ್ತ ಒಳ್ಳೆಯ ಮಾತುಗಳನ್ನು ಬದಲಿಸಿಕೊಳ್ಳುತ್ತೇವೆ. ಸಿಹಿಯುಂಡು ಹಬ್ಬದ ಸವಿ ಹೆಚ್ಚಿಸುತ್ತೇವೆ.

ಎಲ್ಲ ಹಬ್ಬಗಳೂ ಹೀಗೆಯೇ ಅಲ್ಲವೇ – ಹೊಸ ಬಟ್ಟೆ, ಸಿಹಿ ಊಟ, ಭರವಸೆಯ ನೋಟ! ಆದರೆ, ಇದೆಲ್ಲ ಸಂಭ್ರಮ ಮೇಲುನೋಟದ್ದು. ಮೇಕಪ್‌ನ ಪರದೆ ತೊಳೆದಂತೆ ಕಾಣಿಸುವ ಮುಖದ ಮೇಲಿನ ಗುಳಿ–ಕಲುಮೆಗಳಂತೆ ಹಬ್ಬದ ಸಂಭ್ರಮದ ಹಿನ್ನೆಲೆಯಲ್ಲೂ ಅದೆಷ್ಟು ತಲ್ಲಣಗಳು! ಮತ್ತೆ ರಾಜಹಂಸವನ್ನು ನೆನಪಿಸಿಕೊಳ್ಳಿ. ನೀರಮೇಲೆ ಹಂಸಗಳದು ಇನ್ನಿಲ್ಲದ ಗಾಂಭೀರ್ಯ. ಆದರೆ, ನೀರಿನೊಳಗಿನ ಹೆಜ್ಜೆಗಳದು ಅಸಾಧ್ಯ ಚಡಪಡಿಕೆ. (ಕಾಲ ಮೇಲೆ ನಿಲ್ಲುವುದೆಂದರೆ ಅದು ಕಾಲದ ಮೇಲೂ ಹಿಡಿತ ಸಾಧಿಸುವ ಪ್ರಯತ್ನ.) ನಮ್ಮ ಬದುಕಿನಲ್ಲೂ ಅಷ್ಟೇ – ಎಲ್ಲ ಕುದಿತಲ್ಲಣಗಳ ಮುಚ್ಚಿಟ್ಟು ಸಡಗರವನ್ನಷ್ಟೆ ಮುಖದಲ್ಲಿ ತುಳುಕಿಸುತ್ತೇವೆ. ಅಂಥ ತುಳುಕುವಿಕೆಗೆ ಸಂಕ್ರಾಂತಿಯೊಂದು ನೆಪ. ಕಣದ ಸುಗ್ಗಿ, ಸಿಹಿ ಹುಗ್ಗಿ, ಹಾಲಿನ ನೊರೆ, ಮಾತಿನ ತೊರೆ – ಎಲ್ಲವೂ ಉಕ್ಕುವಿಕೆಯ ರೂಪವೇ.

ರಾಜಹಂಸಗಳ ಬಣ್ಣದ್ದು ಇನ್ನೊಂದು ಕಥೆ. ನೀರಿನೊಳಗಿನ ಸೂಕ್ಷ್ಮಾಣುಜೀವಿಗಳಾದ ಸೀಗಡಿ, ಏಡಿಗಳಂತಹ ಆಹಾರ ಸಮೃದ್ಧವಾಗಿ ದೊರೆತರಷ್ಟೇ ಅವುಗಳಿಗೆ ತಿಳಿ ಗುಲಾಬಿ ರಂಗು. ಇಲ್ಲದೆ ಹೋದರೆ ಬಿಳಿಚಿಕೊಳ್ಳುತ್ತವೆ, ಅಪೌಷ್ಟಿಕತೆಯಿಂದ ಬಳಲುವ ಚಿಣ್ಣರಂತೆ. ಇರಲಿ, ಬದುಕಿನ ಈ ವೈರುಧ್ಯವನ್ನು ಒಪ್ಪಿಕೊಂಡೇ ಹಬ್ಬಗಳನ್ನು ಆಚರಿಸಬೇಕು. ಹಾಗೆ ನೋಡಿದರೆ, ಈ ಹಬ್ಬಹರಿದಿನಗಳು ಜೀವನದ ಉತ್ಸಾಹವನ್ನು ನವೀಕರಿಸಲು ಸಂಸ್ಕೃತಿ–ಸಂಪ್ರದಾಯದ ಹೆಸರಿನಲ್ಲಿ ನಮ್ಮ ಹಿರಿಯರು ಕಂಡುಕೊಂಡಿರುವ ಮದ್ದುಗಳು.

ಸಂಕ್ರಾಂತಿಯಲ್ಲಿ ನಮಗಿರುವ ಪಾಠಗಳು ಒಂದೆರಡಲ್ಲ. ಅದು ಸೂರ್ಯೋಪಾಸನೆಯ ಹಬ್ಬ. ಸೂರ್ಯ ನಮ್ಮ ಬದುಕಿನ, ಸಕಲ ಜೀವಜಾಲದ ದಿಕ್ಸೂಚಿಯಲ್ಲವೇ. ಸೂರ್ಯನ ಸಂಕ್ರಮಣ ಬದುಕಿನಲ್ಲೂ ಬದಲಾವಣೆಯ ಅಗತ್ಯವನ್ನು ಹಾಗೂ ಬದಲಾವಣೆಯೊಂದೇ ಈ ಜಗತ್ತಿನಲ್ಲಿ ಶಾಶ್ವತ ಎನ್ನುವ ಸತ್ಯವನ್ನು ಸೂಚಿಸುತ್ತದೆ. ಸಂಕ್ರಾಂತಿ ಸುಗ್ಗಿಯ ಹಬ್ಬವೂ ಹೌದು. ಪ್ರಕೃತಿಯಲ್ಲಿನ ಸುಗ್ಗಿಯೊಂದಿಗೆ ನಮ್ಮ ಜೀವನವನ್ನು ತಳಕು ಹಾಕಿಕೊಳ್ಳಲು ಸಂಕ್ರಾಂತಿಯೆನ್ನುವುದು ಒಂದು ಸಂಧಿಸಂದರ್ಭ.

‘ಎಳ್ಳು–ಬೆಲ್ಲ’ ಸಂಕ್ರಾಂತಿಯ ಆಶಯವನ್ನು ಬಹು ಸುಂದರವಾಗಿ ಸೂತ್ರರೂಪದಲ್ಲಿ ಹಿಡಿದಿಡುತ್ತದೆ. ಈ ಜೋಡಿಧಾನ್ಯ ಪೌಷ್ಟಿಕವೂ ಹೌದು, ನಾವು ಬಾಳಬೇಕಾದ ರೀತಿಯನ್ನು ತೋರುವ ಸೂತ್ರವೂ ಹೌದು. ಎಳ್ಳುಬೆಲ್ಲದೊಂದಿಗಿನ ಒಳ್ಳೆಯ ಮಾತು, ‘ಬನ್ನಿ’ಯೊಂದಿಗಿನ ಬಂಗಾರದಂತಹ ಬದುಕು – ಇವೆಲ್ಲ ಬದುಕಿನ ಚೆಲುವನ್ನು ಹೆಚ್ಚಿಸಿಕೊಳ್ಳುವ ಸಂದರ್ಭಗಳು. ಯಾವ್ಯಾವ ಕಾರಣದಿಂದಲೋ ಸೂತ್ರತಪ್ಪಿದ ಸಂಬಂಧಗಳನ್ನು ಮರಳಿ ಹಳಿ ಸೇರಿಸಲು ಎಳ್ಳುಬೆಲ್ಲ, ಬನ್ನಿಗಿಂತಲೂ ಒಳ್ಳೆಯ ನೆಪವಿಲ್ಲ.

ಎಳ್ಳುಬೆಲ್ಲದ ಸಂತಸ ಹಂಚಿಕೊಳ್ಳುತ್ತಲೇ, ಒಳ್ಳೆಯ ಮಾತನ್ನು ಸಂಕ್ರಾಂತಿಯ ಸಂದರ್ಭದಲ್ಲೇ ಏಕೆ ಆಡಬೇಕು ಎನ್ನುವ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕು. ಸೌಹಾರ್ದವಾಗಿ ಬಾಳಲು ಬನ್ನಿಯೇ ಏಕೆ ನೆಪವಾಗಬೇಕು ಎಂದೂ ಯೋಚಿಸಬೇಕು. ಪ್ರೀತಿ–ಸ್ನೇಹದ ಮಾತು, ಸೌಹಾರ್ದದ ಮನಸ್ಸು – ಇವೆಲ್ಲ ಮಾನವೀಯತೆಯ ಪ್ರಾಥಮಿಕ ಸಂಗತಿಗಳು. ಅಂದರೆ, ಈ ಪ್ರಾಥಮಿಕ ಅಂಶಗಳನ್ನು ಮತ್ತೆ ಮತ್ತೆ ನೆನಪಿಸುವಂತಿರುವ ಸಂಕ್ರಾಂತಿಯೋ ದಸರೆಯೋ ಯುಗಾದಿಯೋ ರಂಜಾನೋ ಕ್ರಿಸ್ತಸಂಭ್ರಮವೋ – ವರ್ಷ ವರ್ಷವೂ ಮರುಕಳಿಸುತ್ತವೆಂದರೆ ನಮ್ಮ ಬದುಕಿನೊಳಗೆ ಅದೆಷ್ಟು ‘ಒಳ್ಳೆಯತನ’ ಉಳಿದುಕೊಂಡಿದೆ ಎನ್ನುವುದನ್ನು ನಾವು ಪರಿಶೀಲಿಸಿಕೊಳ್ಳಬೇಕು. ಅಂದರೆ, ಈ ಹಬ್ಬಗಳು ನಮ್ಮ ಪಾಲಿನ ಸ್ವವಿಮರ್ಶೆಯ ಸಂದರ್ಭಗಳೂ ಹೌದು.

ಮಾತು ಆಯುಧದಂತೆ, ಸರಕಿನಂತೆ, ಬಂಡವಾಳದಂತೆ ಬಳಕೆಯಾಗುತ್ತಿರುವ ಸಂದರ್ಭ ಇಂದಿನದು. ಇತಿಹಾಸದುದ್ದಕ್ಕೂ ಮಾತಿನ ಕೇಡಿನ ಸ್ವರೂಪವನ್ನು ಕಾಣುತ್ತಲೇ ಬಂದಿದ್ದೇವೆ. ಆದರೆ, ವರ್ತಮಾನದಲ್ಲಿ ಮಾತು ಹುಟ್ಟಿಸಿರುವಷ್ಟು ಆತಂಕ, ಮಾತಿನ ಕಾರಣದಿಂದ ರೂಪುಗೊಂಡಿರುವಷ್ಟು ಗೋಡೆಗಳು ಹಿಂದೆಂದೂ ಸೃಷ್ಟಿಯಾಗಿರಲಿಲ್ಲ. ಇಂಥ ಸಂಕ್ರಮಣ ಸಂದರ್ಭದಲ್ಲಿ ಸಂಕ್ರಾಂತಿಯ ಎಳ್ಳು–ಬೆಲ್ಲದ ‘ಒಳ್ಳೆಯ ಮಾತಿನ’ ಆಶಯ ಮತ್ತಷ್ಟು ಮಹತ್ವ ಪಡೆದುಕೊಳ್ಳುತ್ತದೆ.

ಸೂರ್ಯನ ಬೆಳಕಿನ ಸಂಭ್ರಮವನ್ನು ಕವಿ ಬೇಂದ್ರೆ ಹೊಳೆಯ ರೂಪದಲ್ಲಿ ಕಾಣುತ್ತಾರೆ (ಬಂದದ ಸೂರ್ಯನ ಹೊಳೆ, ಮೈತೊಳೆ.) ಎಂಥ ಅದ್ಭುತ ಕಲ್ಪನೆಯಲ್ಲವೇ? ಸಂಕ್ರಾಂತಿ ಸಂಭ್ರಮದ ಸೂರ್ಯನ ಹೊಳೆಯೇನೋ ಬಂದಿದೆ. ಈಗ ತೊಳೆದುಕೊಳ್ಳಬೇಕಾದುದು ಮೈ ಮಾತ್ರವಲ್ಲ; ಮನಸ್ಸನ್ನೂ ತೊಳೆದುಕೊಳ್ಳಬೇಕು, ತಿಳಿಯಾಗಿಸಿಕೊಳ್ಳಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !